ಕುಣಿಗಲ್ : ಕಾಲೇಜಿಗೆ ಹೋಗದೇ ಗೈರು ಹಾಜರಾಗಿ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಮತ್ತಿತರ ಕಡೆ ಅಲೆಯುತ್ತಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ ಪೋಲಿಸರು ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿ ಅವರ ಮನಸ್ಸನ್ನು ಪರಿವರ್ತನೆಗೊಳಿಸಿ ಕಾಲೇಜಿಗೆ ಕಳುಹಿಸಿದ ಅಪರೂಪದ ಪ್ರಸಂಗ ಕುಣಿಗಲ್ ಪಟ್ಟಣದಲ್ಲಿ ಬುಧವಾರ ನಡೆಯಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲೆಂದು ಕುಣಿಗಲ್ ಪಟ್ಟಣದ ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾಗಿದ್ದಾರೆ, ಕಾಲೇಜಿಗೆ ಹೋಗಿ ಬರುವುದ್ದಾಗಿ, ನಿತ್ಯ ತಮ್ಮ ಊರಿನಿಂದ ಕುಣಿಗಲ್ ಪಟ್ಟಣಕ್ಕೆ ಬರುವ ಹಲವು ವಿದ್ಯಾರ್ಥಿಗಳು ಕಾಲೇಜಿಗೆ ಚಕ್ಕರ್ ಹಾಕಿ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೊಡ್ಡಕೆರೆ, ಬಾಳೇಗೌಡ ಪಾರ್ಕ್ ಸೇರಿದಂತೆ ಮತ್ತಿತರರ ಕಡೆ ಅಲೆಯುತ್ತಿರುವುದು ಗಮನಿಸಿದ ಕುಣಿಗಲ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನವೀನ್‌ಗೌಡ ಹಾಗೂ ಅವರ ಸಿಬ್ಬಂದಿ ಬುಧವಾರ ಖಾಸಗಿ ಬಸ್ ನಿಲ್ದಾಣ ಮತ್ತು ಸಾರಿಗೆ ಬಸ್ ನಿಲ್ದಾಣ ಬಳಿ ತಿರುಗಾಡುತ್ತಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ ಪೊಲೀಸರು, ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿ ಅವರನ್ನು ಕಾಲೇಜಿಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ.
ಭವಿಷ್ಯ ಹಾಳು ಮಾಡಿಕೊಳ್ಳಬೇಡಿ : ವಿದ್ಯಾರ್ಥಿಗಳಿಗೆ ನೀತಿವಾದ ಹೇಳಿದ ಸಿಪಿಐ ನವೀನ್‌ಗೌಡ ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು, ಒಳ್ಳೆ ಕೆಲಸಕ್ಕೆ ಸೇರಿ ಅವರ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಲೆಂದು, ತಮಗೆ ಎಷ್ಟೇ ಕಷ್ಟವಿದ್ದರೂ ತಂದೆ, ತಾಯಿ ಕೂಲಿ, ನಾಲಿ ಮಾಡಿ, ಕಾಲೇಜಿಗೆ ಫೀಸ್ ಕಟ್ಟಿ, ನಿಮ್ಮನ್ನು ಕಾಲೇಜಿಗೆ ಕಳಿಸುತ್ತಾರೆ, ಆದರೆ ನೀವು ತಂದೆ, ತಾಯಿ ಕಷ್ಟವನ್ನು ಅರ್ಥ ಮಾಡಿಕೊಳ್ಳದೆ, ಮೊಬೈಲ್ ಹಾಗೂ ಸಿನಿಮಾ ವ್ಯಾಮೋಹಕ್ಕೆ ಒಳಗಾಗಿ ಕಾಲೇಜಿಗೆ ಹೋಗದೇ ಅಲೆಯುತ್ತಿದ್ದೀರ, ಇದರಿಂದ ನಿಮಗೆ ಏನು ಪ್ರಯೋಜನಾ ಎಂದರು, ನೀವು ಹೀಗೆ ಕಾಲೇಜಿಗೆ ಗೈರು ಹಾಜರಾಗಿ ವಿದ್ಯಾಭ್ಯಾಸ ಮಾಡದಿದ್ದರೇ ಮುಂದೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ.ಹದಿಹರೆಯದ ವಯಸ್ಸಿನಲ್ಲಿ, ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿರುವುದು, ಸರಿಯಲ್ಲ, ಹೀಗೆ ಅಲೆಯುವುದನ್ನು ಬಿಟ್ಟು ಸರಿಯಾಗಿ ಕಾಲೇಜಿಗೆ ಹೋಗಿ ಉತ್ತಮ ಶಿಕ್ಷಣ ಪಡೆದು, ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗಿ ಎಂದು ಬುದ್ದಿ ವಾದ ಹೇಳಿದರು.
ನಿರಂತರ ಗೈರು : ಸಿಪಿಐ ನವೀನ್‌ಗೌಡ ತಿರುಗಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬಿಟ್ಟು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದ್ದಾಗ ವಿದ್ಯಾರ್ಥಿಗಳು ಕಾಲೇಜಿಗೆ ನಿರಂತರವಾಗಿ ಗೈರು ಹಾಜರಾಗಿರುವುದು ಕಂಡು ಬಂದಿತ್ತು, ವಿದ್ಯಾರ್ಥಿಗಳು ನಿರಂತರವಾಗಿ ಗೈರು ಹಾಜರಾಗುತ್ತಿರುವ ಬಗ್ಗೆ ಪೋಷಕರ ಗಮನಕ್ಕೆ ತರಲಿಲ್ಲವೇ ಎಂದು ಪ್ರಾಂಶುಪಾಲರನ್ನು ಸಿಪಿಐ ಪ್ರಶ್ನಿಸಿದರು.
ವಿದ್ಯಾರ್ಥಿಗಳು ತಮ್ಮ ಪೋಷಕರ ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿದ್ದಾರೆ. ಈ ನಂಬರ್‌ಗೆ ಪೋನ್ ಮಾಡಿದರೇ ರಾಗ್ ನಂಬರ್ ಎಂದು ಹೇಳುತ್ತದೆ, ನಾವು ಏನು ಮಾಡುವುದು ಎಂದು ಪ್ರಾಚಾರ್ಯರು ತಿಳಿಸಿದರು. ಅದಷ್ಟು ಬೇಕಾ ಪೋಷಕರನ್ನು ಕರೆಸಿ ವಿದ್ಯಾರ್ಥಿ ಗೈರು ಹಾಜರು ಬಗ್ಗೆ ಅವರ ಗಮನಕ್ಕೆ ತಂದು ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಕಾಲೇಜಿಗೆ ತಪ್ಪಿಸಿಕೊಳ್ಳದಂತೆ ಗಮನ ಹರಿಸುವಂತೆ ಮನವಿ ಮಾಡಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಸಿಪಿಐ ನವೀನ್‌ಗೌಡ ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಿದ್ದೇವೆ ಇಷ್ಟೇ ನಮ್ಮ ಕರ್ತವ್ಯ ಎಂದು ಭಾವಿಸಬಾರದು. ವಿದ್ಯಾರ್ಥಿಗಳು ಸರಿಯಾಗಿ ಕಾಲೇಜಿಗೆ ಹೋಗುತ್ತಿದ್ದಾರ, ಗುಣಮಟ್ಟದ ವಿದ್ಯಾಭ್ಯಾಸ ಪಡೆಯುತ್ತಿದ್ದಾರ, ಅವರ ನಡೆ ನುಡಿ ಹೇಗಿದೆ ಎಂಬುದನ್ನು ತಂದೆ ತಾಯಂದಿರು ಗಮನಿಸಬೇಕು, ಹಾಗಿದ್ದಾಗೆ ಕಾಲೇಜುಗಳಿಗೆ ಹೋಗಿ ಪ್ರಾಂಶುಪಾಲರನ್ನು ಕಂಡು ತಮ್ಮ ಮಕ್ಕಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.