ಮುಂಬಯಿ : ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಇಂದು ನಸುಕಿನ ವೇಳೆ 58 ವರ್ಷ ಪ್ರಾಯದ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವರು ಹೆಂಡತಿಯೊಂದಿಗಿನ ಜಗಳದ ಪರಾಕಾಷ್ಠೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ ಸಿಂಗ್ ಪರ್ದೇಶಿ ಅವರನ್ನು ಧಳೆ ಕ್ರೈಮ್ ಬ್ರಾಂಚ್ ಗೆ ನಿಯೋಜಿಸಲಾಗಿತ್ತು. ನಸುಕಿನ 12.30ರ ಹೊತ್ತಿಗೆ ಅವರು ಹೆಂಡತಿಯೊಂದಿಗಿನ ಜಗಳದ ಪರಾಕಾಷ್ಠೆಯಲ್ಲಿ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಎಂ ರಾಮ್ ಕುಮಾರ್ ತಿಳಿಸಿದರು.
ಪತಿ ತನ್ನ ಮುಂದೆಯೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಪತ್ನಿ ಬೊಬ್ಬಿಟ್ಟುದುದನ್ನು ಕೇಳಿಸಿಕೊಂಡ ಪೊಲೀಸ್ ಸಿಬಂದಿಗಳು ಒಡನೆಯೇ ಅವರ ನಿವಾಸಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಒಯ್ದುರು. ಆದರೆ ಅದಾಗಲೇ ಅವರ ಸತ್ತಿರುವುದಾಗಿ ವೈದ್ಯರು ಪ್ರಕಟಿಸಿದರು.
ಪರ್ದೇಶಿ ಅವರು ಈ ವರ್ಷ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗುವವರಿದ್ದರು. ನಿವೃತ್ತಿಯ ಬಳಿಕ ನಾಶಿಕ್‌ನಲ್ಲಿರುವ ತಮ್ಮ ಪುತ್ರನೊಂದಿಗೆ ವಿಶ್ರಾಂತ ಜೀವನ ನಡೆಸಲು ನಿರ್ಧರಿಸಿದ್ದರು.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.