ಬೆಂಗಳೂರು: ಸ್ನೂಕರ್ ಅಕಾಡೆಮಿ ಮುಂದುವರಿಸಲು 80 ಸಾವಿರ ರೂ. ಲಂಚ ಪಡೆಯುತ್ತಿದ್ದ ಬಾಣಸವಾಡಿ ಇನ್‌ಸ್ಪೆಕ್ಟರ್ ಮುನಿಕೃಷ್ಣ , ಪೇದೆ ಉಮೇಶ್ ಹಾಗೂ ಅಶ್ರಫ್ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಬಾಣಸವಾಡಿಯ ಎಚ್‌ಬಿಆರ್ ಲೇಔಟ್‌ನಲ್ಲಿ ಸೈಯದ್ ಇಸ್ಮಾಯಿಲ್ ಎಂಬುವರು ಸ್ನೂಕರ್ ಅಕಾಡೆಮಿ ನಡೆಸುತ್ತಿದ್ದು, ಇದನ್ನು ಮುಂದುವರಿಸಲು ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸಹಾಯ ಮಾಡಲು ಇನ್‌ಸ್ಪೆಕ್ಟರ್ ಮುನಿಕೃಷ್ಣ 80 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಅಲ್ಲದೆ, ಸೈಯದ್ ಇಸ್ಮಾಯಿಲ್‌ಗೆ ಕಾನ್‌ಸ್ಟೆàಬಲ್ ಉಮೇಶ್ ಹಾಗೂ ಮಧ್ಯವರ್ತಿ ಅಶ್ರಫ್ ಹಣಕ್ಕೆ ಒತ್ತಾಯಿಸಿದ್ದರು. ಲಂಚ ಕೊಡಲು ಹಿಂದೇಟು ಹಾಕಿದಾಗ ಸ್ನೂಕರ್ ಆಕಾಡೆಮಿ ಮೇಲೆ ದಾಳಿ ನಡೆಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಸೈಯದ್ ಇಸ್ಮಾಯಿಲ್ ಎಸಿಬಿಗೆ ದೂರು ನೀಡಿದ್ದರು.
ಎಫ್ಐಆರ್ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೈಯದ್ ಇಸ್ಮಾಯಿಲ್‌ರಿಂದ 80 ಸಾವಿರ ರೂ. ಪೈಕಿ ಮುಂಗಡ 30 ಸಾವಿರ ರೂ. ಹಣವನ್ನು ಇನ್‌ಸ್ಪೆಕ್ಟರ್ ಮುನಿಕೃಷ್ಣ ಪಡೆಯುವಾಗ ದಾಳಿ ನಡೆಸಿ, ಬಂಧಿಸಲಾಗಿದೆ.
ಇದೇ ವೇಳೆ ಲಂಚ ಪಡೆಯಲು ಸಹಾಯ ಮಾಡಿದ ಆರೋಪದ ಮೇಲೆ ಕಾನ್‌ಸ್ಟೆಬಲ್ ಉಮೇಶ್ ಹಾಗೂ ಖಾಸಗಿ ವ್ಯಕ್ತಿ ಅಶ್ರಫ್ರನ್ನು ಬಂಧಿಸಲಾಗಿದೆ. ಈ ಹಣ ಪ್ರತಿ ತಿಂಗಳು ಕೊಡಬೇಕೋ ಅಥವಾ ಒಂದೇ ಬಾರಿ ಕೊಡಲು ಸೂಚಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸೆ.2ರಂದು ಇನ್‌ಸ್ಪೆಕ್ಟರ್ ಮುನಿಕೃಷ್ಣ ರೌಡಿಶೀಟರ್ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದರು.