ಮದ್ದೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿಗೆ ಮದ್ದೂರು ಪೊಲೀಸರು ಶಿವಪುರದಲ್ಲಿ ತಡೆಯೊಡ್ಡಿದ್ದರಾದರೂ ಬ್ಯಾರಿಕ್ಯಾಡ್ ಕಿತ್ತೂಗೆದ ರೈತರು, ರಾಜಧಾನಿಯತ್ತ ತೆರಳಿದರು.
ಬೆಂಗಳೂರು ನಗರಕ್ಕೆ ಟ್ರ್ಯಾಕ್ಟರ್ ರ್ಯಾಲಿ ಮೂಲಕ ತೆರಳುವ ಸಲುವಾಗಿ ಮೈಸೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಸೋಮವಾರ ರಾತ್ರಿ ಮದ್ದೂರಿನಲ್ಲಿ ತಂಗಿದ್ದು ಮಂಗಳವಾರ ಬೆಳಗ್ಗೆ ರಾಜಧಾನಿಯತ್ತ ತೆರಳಲು ಅಣಿಯಾದ ವೇಳೆ ಸ್ಥಳೀಯ ಪೊಲೀಸರು ಶಿವಪುರದಲ್ಲಿ ಹೆದ್ದಾರಿಗೆ ಬ್ಯಾರಿಕ್ಯಾಡ್ ಅಳವಡಿಸಿ, ಟ್ರ್ಯಾಕ್ಟರ್‌ಗಳನ್ನು ತಡೆಯಲು ಯತ್ನಿಸಿದರು.
ಪ್ರತಿಭಟನೆ ಹತ್ತಿಕ್ಕಲು ಯತ್ನ: 500ಕ್ಕೂ ಹೆಚ್ಚು ರೈತರು, ರೈತ ಸಂಘಟನೆಗಳ ಮುಖಂಡರು ಪೊಲೀಸರೊಡನೆ ಮಾತಿನ ಚಕಮಕಿಗಿಳಿದರಲ್ಲದೇ ಶಾಂತಿಯುತ ಪ್ರತಿಭಟನೆಗಾಗಿ ರಾಜಧಾನಿಗೆ ತೆರಳುತ್ತಿದ್ದು, ರೈತರ ಪ್ರತಿಭಟನೆ ಹತ್ತಿಕ್ಕಲು ಮಂಡ್ಯ ಜಿಲ್ಲಾಡಳಿತ ಪೊಲೀಸರನ್ನು ಬಳಸಿಕೊಳ್ಳುತ್ತಿರುವು ದಾಗಿ ಹರಿಹಾಯ್ದರು.
ಮದ್ದೂರು ಸಿಪಿಐ ಕೆ.ಆರ್. ಪ್ರಸಾದ್ ಮತ್ತು ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಭದ್ರತೆಗೆ ನೇಮಿಸಿದ್ದ ಇಬ್ಬರು ಪೊಲೀಸ್ ಪೇದೆಗಳೂ ಸೇರಿದಂತೆ ಇಬ್ಬರು ರೈತರಿಗೆ ಸಣ್ಣಪುಟ್ಟಗಾಯಾಗಳಾದವು.
ಇದನ್ನೂ ಓದಿ:ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಪ್ರತಿಭಟನೆಯಲ್ಲಿ ಸ್ಥಳೀಯ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ರಾಮಕೃಷ್ಣಯ್ಯ, ಉಮೇಶ್, ವರದಪ್ಪ, ಮೈಸೂರು ಪ್ರಸನ್ನಗೌಡ, ಕೀಲಾರ ಸೋಮಶೇಖರ್, ರವಿಕುಮಾರ್, ಲಿಂಗಪ್ಪಾಜಿ, ಶಂಕರೇಗೌಡ, ಜಿ.ಎ. ಶಂಕರ್, ನಾಗರಾಜು, ಅಶೋಕ್ ಹಾಜರಿದ್ದರು.