ಪಿರಿಯಾಪಟ್ಟಣ: ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಲು ಬಂದೂಕು ತರಬೇತಿ ಶಿಬಿರ ನೆರವಾಗಲಿದೆ ಎಂದು ಬೈಲುಕುಪ್ಪೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪ್ರಕಾಶ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಸಾರ್ವಜನಿಕರು ಒಂದಲ್ಲ ಒಂದು ರೀತಿ ಒತ್ತಡದ ನಡುವೆ ಜೀವಿಸುತ್ತಿರುವುದರಿಂದ ಬೆಳಗಿನ ವಾಯು ವಿಹಾರ, ಓಟ, ಈಜು, ಯೋಗ, ವ್ಯಾಯಾಮ ಸೇರಿದಂತೆ ದೈಹಿಕ ಶ್ರಮದಿಂದ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ಸಿಗುತ್ತದೆ, ಬಂದೂಕು ತರಬೇತಿಯಿಂದ ಪ್ರಮಾಣ ಪತ್ರ ಪಡೆದರೆ, ಪರವಾನಗಿ ಪಡೆಯಲು ಸುಲಭ. ಪೊಲೀಸ್ ಇಲಾಖೆಯೊಡನೆ ಸಂಪರ್ಕ ಬೆಳೆದು ಪೊಲೀಸರೆಂದರೆ ಕೆಲವರಲ್ಲಿ ಇರುವ ಭಯ ನಿವಾರಣೆಯಾಗುತ್ತದೆ ಸ್ವಯಂ ಆತ್ಮರಕ್ಷಣೆ ಬಗ್ಗೆ ತಿಳಿಯಲು ನಾಗರಿಕ ಬಂದೂಕು ತರಬೇತಿ ಶಿಬಿರ ಪೂರಕ. ಪ್ರಾಣರಕ್ಷಣೆಗೆ ಬಂದೂಕು ಚಲಾಯಿಸುವುದು ಹೇಗೆ ಎಂಬುದನ್ನು ತಿಳಿಯುವುದು ಅವಶ್ಯಕ. ಬಂದೂಕು ತರಬೇತಿ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು. ನಾಗರಿಕರು ಬಂದೂಕನ್ನು ಯಾವ ಯಾವ ಸಮಯದಲ್ಲಿ ಹೇಗೆ ಉಪಯೋಗಿಸಬೇಕು, ಬಂದೂಕು ಬಳಕೆ ಕಲಿತವರು ಇಲಾಖೆಯ ಜೊತೆ ಹೇಗಿರಬೇಕು ಹಾಗೂ ಸಮಾಜಕ್ಕೆ ನಿಮ್ಮ ಕೂಡುಗೆ ಏನು, ಆಯುಧಗಳನ್ನು ಹೇಗೆ ಉಪಯೋಗಿಸಬೇಕು, ಗುರಿ ಅಭ್ಯಾಸ, ಆಯುಧಗಳ ಸುರಕ್ಷತೆ ಮತ್ತು ಸ್ವಚ್ಚತೆಗಳ ಬಗ್ಗೆ ಅರಿವು ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಆರ್ಎಸ್ಐ ರಾಜಕುಮಾರ್, ಪೊಲೀಸ್ ಸಿಬ್ಬಂದಿಗಳಾದ ವೀರೇಂದ್ರಕುಮಾರ್, ಮೀರಾ, ರಾಧ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಸಾರ್ವಜನಿಕರು ಹಾಜರಿದ್ದರು.