Advertisement

ಪಾಲಿಕೆ ಕೆಲಸ ಪೊಲೀಸ್‌ ಇಲಾಖೆ ಹೆಗಲಿಗೆ!

05:44 PM Jan 10, 2022 | Team Udayavani |

ಹುಬ್ಬಳ್ಳಿ: ಕೋವಿಡ್‌ ಸೋಂಕು ಜಾಗೃತಿ, ನಿಯಮ ಉಲ್ಲಂಘಿಸಿದರೆ ದಂಡ ಪ್ರಯೋಗ ಮಹಾನಗರ ಪಾಲಿಕೆ ಕಾರ್ಯ. ಆದರೆ ಮಹಾನಗರ ವ್ಯಾಪ್ತಿಯಲ್ಲಿ ಈ ಕಾರ್ಯವನ್ನು ಪೊಲೀಸರೇ ಹೆಚ್ಚಾಗಿ ನಿರ್ವಹಿಸುತ್ತಿದ್ದಾರೆ. ನಿತ್ಯದ ಕಾರ್ಯದೊಂದಿಗೆ ದಂಡ ವಸೂಲಿ ಹೆಚ್ಚುವರಿ ಕೆಲಸವಾಗಿದ್ದು, ನಿತ್ಯ ಪ್ರಕರಣ ದಾಖಲಿಸಲು ಪೊಲೀಸರು ಹೆಣಗಾಡುವಂತಾಗಿದೆ.

Advertisement

ಕೋವಿಡ್‌ ನಿಯಮ, ಮಾರ್ಗಸೂಚಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಇವುಗಳನ್ನು ಉಲ್ಲಂಘಿಸಿದರೆ ದಂಡ ಪ್ರಯೋಗ ಅನಿವಾರ್ಯ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಸೂಲಿ ಮಾಡುವ ಕಾರ್ಯ ಪಾಲಿಕೆಯಿಂದ ನಡೆಯುತ್ತಿದೆಯಾದರೂ ಈ ಕಾರ್ಯ ತಮ್ಮಿಂದ ಕಷ್ಟ ಎನ್ನುವ ಕಾರಣಕ್ಕೆ ಇದನ್ನು ಮಹಾನಗರ ಕಮಿಷನರೇಟ್‌ ಪೊಲೀಸರಿಗೆ ವಹಿಸಲಾಗಿದೆ.

ಪ್ರತಿ ಠಾಣೆಗೆ ಇಂತಿಷ್ಟು ದಂಡ ರಸೀದಿಯ ಪುಸ್ತಕಗಳನ್ನು ಮಹಾನಗರ ಪಾಲಿಕೆಯಿಂದ ನೀಡಲಾಗಿದೆ. ದಿನ ಬೆಳಗಾದರೆ ಪೊಲೀಸರ ಕೆಲಸ ದಂಡ ವಸೂಲಿ ಮಾಡುವುದಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಂಡ ವಸೂಲಿ ಮಾಡುವ ಕಾರ್ಯ ಕೂಡ ತೀವ್ರಗೊಳ್ಳುತ್ತಿದೆ. ಸರಕಾರದ ಈ ನಿರ್ಧಾರದಿಂದ ಪೊಲೀಸರು ನಿತ್ಯದ ಕಾರ್ಯದ ಜತೆಗೆ ಹೆಚ್ಚುವರಿ ಹೊರೆ ಬಿದ್ದಿದೆ. ಒಂದೆಡೆ ಈ ಕಾರ್ಯದ ಒತ್ತಡ ಇನ್ನೊಂದೆಡೆ ಸಾರ್ವಜನಿಕರ ದೃಷ್ಟಿಯಲ್ಲಿ ಪೊಲೀಸರು ವಿಲನ್‌ಗಳಾಗಿ ಕೆಲಸ ಮಾಡುವಂತಾಗಿದೆ. ಈ ಕುರಿತು ಮಹಾನಗರ ಪೊಲೀಸ್‌ ಆಯುಕ್ತರನ್ನು ಪ್ರಶ್ನಿಸಿದರೆ ಸಂಬಂಧಿಸಿದವರ ಜತೆ ಮಾತನಾಡುವುದಾಗಿ ತಳ್ಳಿ ಹಾಕಿದರು.

ದಂಡ ವಸೂಲಿಗಾಗಿ ಜನರೊಂದಿಗೆ ವಾದ ಸಾಮಾನ್ಯವಾಗಿ ಬಿಟ್ಟದೆ. ವಾರಾಂತ್ಯ ಕರ್ಫ್ಯೂ ಆರಂಭವಾಗಿದ್ದು, ಇದರ ಪಾಲನೆ ಹಾಗೂ ಅನುಷ್ಠಾನ ಬಗ್ಗೆ ಪೊಲೀಸರಲ್ಲೇ ಹಲವು ಗೊಂದಲಗಳಿವೆ. ಹೀಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ, ಹೊರಗೆ ಬಂದಿರುವ ಕಾರಣದ ಬದಲು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರದ ಕಾರಣ ಹುಡುಕಿ ದಂಡ ಹಾಕುವುದಕ್ಕೆ ಸೀಮಿತವಾದಂತಾಗಿದೆ. ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಪಾಲಿಕೆ, ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ದಂಡ ವಿಧಿಸಿದ ಘಟನೆಗಳು ನಡೆದಿದ್ದವು. ದಂಡ ಕಟ್ಟಿದ ವ್ಯಕ್ತಿ ಹಿಡಿಶಾಪಕ್ಕೆ ಪೊಲೀಸರು ಗುರಿಯಾಗುವಂತಾಗಿದೆ.

ಪಾಲಿಕೆ ಜಾರಿಕೊಳ್ಳೋದೇಕೆ?
ಮಹಾನಗರ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮಗಳ ಪಾಲನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಈ ಕುರಿತು ಜಾಗೃತಿ ಮೂಡಿಸುವುದು, ತಪ್ಪಿದರೆ ದಂಡ ವಿಧಿಸುವ ಕೆಲಸ ಪಾಲಿಕೆಯಿಂದ ಆಗಬೇಕು. ಆದರೆ ನಿಯಮ ಉಲ್ಲಂಘಿಸುವವರ ವಿರುದ್ಧ ಪಾಲಿಕೆಯವರು ದಂಡ ಪ್ರಯೋಗ ಮಾಡುವುದು ಅಷ್ಟೊಂದು ಸುಲಭವಲ್ಲ. ಮಾಸ್ಕ್ ಧರಿಸಿದವರಿಗೆ ದಂಡ ಕೇಳಿದರೆ ಮೊದಲು ಸರಿಯಾದ ರಸ್ತೆ ಮಾಡಿಸಿ, ಸ್ವಚ್ಛತೆಗೆ ಬದಲು ದಂಡ ದೊಡ್ಡದಾಗಿದೆ, ಮಹಾನಗರ ಹಾಳು ಕೊಂಪೆಯಾಗಿದೆ, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ಯಾವ ಮೂಲ ಸೌಲಭ್ಯ ಸರಿಯಾಗಿ ನೀಡಿದ್ದೀರಿ ಎನ್ನುವ ಹಲವು ಪ್ರಶ್ನೆಗಳನ್ನು ಹಾಕಿ ದಂಡ ಕಟ್ಟಲು ಜಗಳಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ದಂಡ ಪ್ರಯೋಗ ಪಾಲಿಕೆಯಿಂದ ಅಸಾಧ್ಯ ಎನ್ನುವ ಕಾರಣಕ್ಕೆ ಪೊಲೀಸರಿಗೆ ವಹಿಸಲಾಗಿದೆ ಎನ್ನಲಾಗುತ್ತಿದೆ.

Advertisement

ಮಾರ್ಷಲ್‌ಗ‌ಳನ್ನು ಕೈಬಿಟ್ಟ ಪಾಲಿಕೆ
ಈಗಾಗಲೇ ಸಂಚಾರ ನಿಯಮಗಳ ಉಲ್ಲಂಘನೆ ದಂಡದ ಮೊತ್ತ ಏರಿಕೆಯಿಂದ ಪೊಲೀಸರು ಸಾರ್ವಜನಿಕರ ದೃಷ್ಟಿಯಲ್ಲಿ ವಿಲನ್‌ಗಳಾಗಿದ್ದಾರೆ. ಈ ಕಾರ್ಯಕ್ಕಾಗಿ ಇತ್ತೀಚೆಗೆ ಪಾಲಿಕೆ ಮಾರ್ಷಲ್‌ಗ‌ಳನ್ನು ನೇಮಿಸಲಾಗಿತ್ತು. ಆದರೆ ಮೂವರು ತಮ್ಮ ವೇತನದಷ್ಟು ದಂಡ ವಸೂಲಿ ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಡಲಾಯಿತು. ಪಾಲಿಕೆಯಿಂದ ಕೆಲಸ ಆಗುತ್ತಿದ್ದರೂ ಬಹುತೇಕ ಪೊಲೀಸ್‌ ಇಲಾಖೆಗೆ ನೀಡಲಾಗಿದೆ.

ಈ ಕಾರ್ಯವನ್ನು ಪಾಲಿಕೆ ನಿರ್ವಹಿಸಿದರೆ ಬೇಕಾದ ಅಗತ್ಯ ರಕ್ಷಣೆ ಹಾಗೂ ಅನುಷ್ಠಾನಕ್ಕೆ ಪೊಲೀಸ್‌ ಇಲಾಖೆ ಸಹಕಾರ ನೀಡಬಹುದು. ಆದರೆ ಈ ಕಾರ್ಯವನ್ನು ತಮ್ಮ ಮೇಲೆ ಹಾಕಿ ಪಾಲಿಕೆ ಈ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದೆ. ಹಗಲು ರಾತ್ರಿ ಕೆಲಸ ಮಾಡಬಹುದು ಆದರೆ ದಂಡ ಹಾಕುವ ಕಾರ್ಯ, ಅವರ ಹಿಡಿಶಾಪ ಹಾಕಿಸಿಕೊಳ್ಳುವುದು ಸುಲಭವಲ್ಲ. ಇದರಿಂದ ಮುಕ್ತಿ ನೀಡಿದರೆ ಸಾಕೆನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ಕಾರಿನಲ್ಲಿ ಒಂದೇ ಕುಟುಂಬದವರು ಹೋಗುತ್ತಿದ್ದೇವೆ. ಆದರೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಯಾಗಿದೆ ಎಂದು ದಂಡ ಹಾಕಿದ್ದಾರೆ. ರಸೀದಿಯಲ್ಲಿ ಮಾಸ್ಕ್ ಹಾಕಿಲ್ಲ ಎಂದು ನಮೂದಿಸಿದ್ದಾರೆ. ಸರಕಾರ ಜಾಗೃತಿ ಮೂಡಿಸುತ್ತಿದೆಯೋ ಅಥವಾ ದಂಡ ಹಾಕುವುದೇ ಪ್ರಥಮ ಕೆಲಸ ಎಂದುಕೊಂಡಿದೆಯೋ ಗೊತ್ತಿಲ್ಲ.

ಪ್ರಸನ್ನಕುಮಾರ ದೊಡ್ಡಮನಿ, ಬಾಗಲಕೋಟೆ ನಿವಾಸಿ

ಅಗತ್ಯ ಕೆಲಸದ ಮೇಲೆ ಹೊರಗೆ ಹೋಗುವವರು ನಿತ್ಯ ಇಂತಿಷ್ಟು ಶುಲ್ಕದ ರೂಪದಲ್ಲಿ ಸರಕಾರಕ್ಕೆ ಪಾವತಿ ಮಾಡಿ ಎನ್ನುವ ಆದೇಶ ಹೊರಡಿಸಿದರೆ ಪರವಾಗಿಲ್ಲ. ಕೊಪ್ಪಳದಿಂದ ಇಲ್ಲಿಗೆ ಬರುವುದಕ್ಕಿಂತ ಹುಬ್ಬಳ್ಳಿ ನಗರ ಪ್ರವೇಶಿಸುವುದು ದೊಡ್ಡ ದುಸ್ತರ. ದಂಡಕ್ಕಾಗಿಯೇ ಒಂದಿಷ್ಟು ಹಣ ಇಟ್ಟುಕೊಂಡಿರಬೇಕು. ಹೇಗಾದರೂ ಮಾಡಿ ದಂಡ ಹಾಕುತ್ತಾರೆ.
ದುಂಡಪ್ಪ ಪೂಜಾರ, ಚಾಲಕ ಕೊಪ್ಪಳ ಜಿಲ್ಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next