Advertisement

ಮಂಗಳೂರು ಚಲೋ;ರಾಜ್ಯಾದ್ಯಂತ ಪೊಲೀಸರ ತಡೆ,ಹಲವರು ವಶಕ್ಕೆ

10:52 AM Sep 05, 2017 | Sharanya Alva |

ಮಂಗಳೂರು/ಬೆಂಗಳೂರು:  ಬಿಜೆಪಿ ರಾಜ್ಯ ಯುವ ಘಟಕ ಆಯೋಜಿಸಿರುವ “ಮಂಗಳೂರು ಚಲೋ”
ರ‍್ಯಾಲಿಗೆ ರಾಜ್ಯಾದ್ಯಂತ ಪೊಲೀಸರು ತಡೆ ಒಡ್ಡಿದ್ದು ಹಲವು ಮುಖಂಡರು ಸೇರಿದಂತೆ ಬೈಕ್‌ ಏರಿದ್ದ ಸಾವಿರಾರು ಕಾರ್ಯಕರ್ತರನ್ನು ತಡೆದು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ಈ ಕ್ರಮ ಹೊಸ ಸಂಘರ್ಷಕ್ಕೆ ನಾಂದಿಯಾಗಿದೆ. 

Advertisement

ಬೈಕ್ ಜಾಥಾ ತಡೆಯಲು ಪೊಲೀಸರು ಹರಸಾಹಸ ಪಡುತ್ತಿತ್ತು, ಏತನ್ಮಧ್ಯೆ ನೀವು ಹೊರಬಂದರೆ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗುತ್ತದೆ. ಹಾಗಾಗಿ ದಯವಿಟ್ಟು ಮನೆಯಿಂದ ಹೊರಬರಬೇಡಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ರ‍್ಯಾಲಿಗೆ  ಮೈಸೂರಿನಲ್ಲಿ ಹತ್ಯೆಗೀಡಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಅವರ ಪತ್ನಿ ಚಾಲನೆ ನೀಡಿದರು. ಆದರೆ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಪೊಲೀಸರು ತಡೆ ಒಡ್ಡಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಬಿಎಸ್ ಯಡಿಯೂರಪ್ಪನವರು ಮಂಗಳೂರು ಚಲೋ ಬೈಕ್ ಜಾಥಾಕ್ಕೆ ಚಾಲನೆ ನೀಡಬೇಕಾಗಿತ್ತು. ಆದರೆ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಕಾದು ನೋಡುವ ಎಂದು ಬಿಎಸ್ ವೈ ಅವರು ಡಾಲರ್ಸ್ ಕಾಲೋನಿಯ ನಿವಾಸದಲ್ಲಿಯೇ ಇದ್ದಿರುವುದಾಗಿ ವರದಿ ವಿವರಿಸಿದೆ.

ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ  ಮಾಜಿ ಡಿಸಿಎಂ ಆರ್‌.ಅಶೋಕ್‌, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್‌ ಸಿಂಹ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. 

ಮತ್ತೊಂದೆಡೆ ಬೈಕ್ ಜಾಥಾಕ್ಕೆ ಪೊಲೀಸರ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಜಾಥಾ ಹೊರಟ ಕೆಜಿಎಫ್ ಹಾಗೂ ಮುಳಬಾಗಿಲು  ಬಿಜೆಪಿ ಯುವಮೋರ್ಚಾ ಅಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ, ಆನೇಕಲ್ ಸೇರಿದಂತೆ ವಿವಿಧೆಡೆಯಿಂದ ಹೊರಟ ಬೈಕ್ ಜಾಥಾಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

Advertisement

ನೆಲಮಂಗಲ ಟೋಲ್ ನಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು ಪ್ರತಿಯೊಂದು ವಾಹನದ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಮುಖಂಡರು ಜಾಥಾ ತಡೆದಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬೈಕ್ ಜಾಥಾಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿ ತಿಳಿಸಿದೆ.

ಮಾಜಿ ಡಿಸಿಎಂ ಆರ್.ಅಶೋಕ್ ಮತ್ತು ಕಾರ್ಯಕರ್ತರು ಸೇರಿದಂತೆ ನೂರಕ್ಕೂ ಅಧಿಕ ಬೈಕ್ ಗಳಲ್ಲಿ ಫ್ರೀಡಂ ಪಾರ್ಕ್ ಗೆ ಆಗಮಿಸಿದ್ದಾರೆ. ಅರವಿಂದ ಲಿಂಬಾವಳಿ, ಪರಿಷತ್ ಸದಸ್ಯ ಪುಟ್ಟಸ್ವಾಮಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶೋಬಾ ಕರಂದ್ಲಾಜೆ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವು ಶಾಸಕರು, ನಾಯಕರು ಕಾರ್ಯಕರ್ತರು ಫ್ರೀಡಂ ಪಾರ್ಕ್ ಗೆ ಆಗಮಿಸಿದ್ದಾರೆ. ಆದರೆ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಇನ್ನೂ ಆಗಮಿಸಿಲ್ಲ.

ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ:

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಮಂಗಳೂರು ಚಲೋ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಆರ್ ಕೆ ದತ್ತಾ ಸಿಎಂ ನಿವಾಸ ಕಾವೇರಿಗೆ ತೆರಳಿ ವಿವರಣೆ ನೀಡಿ ವಾಪಸ್ಸಾಗಿದ್ದಾರೆ. ಅಲ್ಲದೇ ಅಹಿತಕರ ಘಟನೆ ನಡೆಯದಂತೆ ಡಿಜಿಪಿಗೆ ಸಿಎಂ ಸೂಚನೆ ನೀಡಿದ್ದಾರೆ.

ಸರ್ಕಾರ ಹೋರಾಟವನ್ನು ಹತ್ತಿಕ್ಕುತ್ತಿದೆ: ಪ್ರತಾಪ್ ಸಿಂಹ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಕ್ಷಣೆ ಕೊಡಬೇಕಾದ ಸರ್ಕಾರವೇ ಇಂದು ನಮ್ಮ ಹೋರಾಟವನ್ನು ಹತ್ತಿಕ್ಕುತ್ತಿದೆ. ಆದರೆ ನಾವು ಜಾಥಾ ಮಾಡಿಯೇ ಸಿದ್ಧ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. . ಜಾಥಾ ಮಾಡಿಯೇ ತೀರುತ್ತೇವೆ ಎಂದು ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next