ರಾಯಚೂರು: ಸರ್ಕಾರಕ್ಕೆ ನ್ಯಾಯಯುತವಾಗಿ ರಾಜಧನ ಪಾವತಿಸಿ ಮರಳು ಸಾಗಣೆ ಮಾಡುತ್ತಿದ್ದರೂ ಅನಗತ್ಯ ಕಿರಿಕಿರಿ ಮಾಡುತ್ತಿರುವ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಲು ಆಗ್ರಹಿಸಿ ಟಿಪ್ಪರ್ ಮಾಲೀಕರು ಸೋಮವಾರ ಎಎಸ್ಪಿ ಎಸ್.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ನಾವು ಸರ್ಕಾರ ವಿಧಿಸಿದ ಎಲ್ಲ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ ಮರಳು ಸಾಗಣೆ ಮಾಡುತ್ತಿದ್ದೇವೆ. ಆದರೂ ಪೊಲೀಸರು ನಮ್ಮಿಂದ ಹಣ ನಿರೀಕ್ಷಿಸುತ್ತಿದ್ದಾರೆ. ನೀಡದಿದ್ದಾಗ ವಾಹನಗಳನ್ನು ತಡೆದು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದೂರಿದರು. ಕೆಳಮಟ್ಟದ ಅಧಿಕಾರಿಗಳು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ದೇವದುರ್ಗದ ಪಿಎಸ್‌ಐ ಅಗ್ನಿ ಅವರು ನಮಗೆ ದುಡ್ಡು ಕೊಟ್ಟರೆ ಮಾತ್ರ ಮರಳು ಸಾಗಣೆಗೆ ಅವಕಾಶ ನೀಡುತ್ತೇನೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ.
ದೇವದುರ್ಗ ತಾಲೂಕಿನ ಜೋಳದಹೆಡಗಿ ಬಳಿ ರವಿವಾರ 6 ಲಾರಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. ಯಾರಿಗೂ ಇಲ್ಲದ ನಿಯಮಗಳನ್ನು ಮರಳು ಸಾಗಿಸುವ ಲಾರಿಗಳಿಗೆ ಮಾತ್ರ ಹೇರಲಾಗುತ್ತಿದೆ. ಈ ಮುಂಚೆ ಅಡ್ಡ ಮಾರ್ಗಗಳಲ್ಲಿ ಮರಳು ಸಾಗಿಸಿದಾಗ ಮಾತ್ರ ಪೊಲೀಸರು ಹಣ ಕೇಳುತ್ತಿದ್ದರು. ಆದರೆ, ನಾವು ನ್ಯಾಯಯುತವಾಗಿ ವ್ಯಾಪಾರ ಮಾಡುತ್ತಿದ್ದರೂ ಹಣ ಕೇಳಿದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ವಂಚನೆ ಮಾಡಿ ಮರಳು ಸಾಗಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಆದರೆ, ನ್ಯಾಯಯುತವಾಗಿ ಸಾಗಣೆ ಮಾಡುವವರಿಗೆ ತೊಂದರೆ ಕೊಡುವುದು ಸರಿಯಲ್ಲ. ಇದನ್ನೇ ನಂಬಿ ಲಕ್ಷಾಂತರ ಬಂಡವಾಳ ಹೂಡಿರುವ ಅನೇಕರು ಸಮಸ್ಯೆಗೆ ಸಿಲುಕುವಂತಾಗುತ್ತದೆ. ಆದ ಕಾರಣ ತಾಲೂಕಿಗೆ ಒಂದರಂತೆ ಚೆಕ್ ಪೋಸ್ಟ್ ನಿರ್ಮಿಸಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಮಾಲೀಕರಿಗೆ ಆಗುತ್ತಿರುವ ಅನಗತ್ಯ ತೊಂದರೆ ತಡೆಯಬೇಕು. ಪಿಎಸ್‌ಐ ಅಗ್ನಿ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಶ್ರೀಕಾಂತ ಸುಬೇದಾರ್, ಸುಗೂರೇಶ ಗುಳಗಿ, ರಾಘವೇಂದ್ರ ಮಾಲಿಪಾಟೀಲ ಸೇರಿ ಸುರಪುರ, ಶಹಾಪುರದ 50ಕ್ಕೂ ಅಧಿಕ ಲಾರಿ ಮಾಲೀಕರು ಹಾಜರಿದ್ದರು.
ಅಕ್ರಮ ಮರಳು ಸಾಗಾಟ; 6 ಟಿಪ್ಪರ್‌ಗಳು ವಶಕ್ಕೆ ದೇವದುರ್ಗ: ತಾಲೂಕಿನ ಹೂವಿನಹೆಡಗಿ ಬ್ರಿಜ್ ಬಳಿ ಜೋಳದಹೆಡಗಿ ಮಾರ್ಗವಾಗಿ ಕಲಬುರಗಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 6 ಟಿಪ್ಪರ್ ಗಳನ್ನು ಪಿಎಸ್‌ಐ ಲಕ್ಕಪ್ಪ ಬಿ. ಅಗ್ನಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕೃಷ್ಣಾ ನದಿಯಿಂದ ಅಕ್ರಮ ಮರಳು ಸಂಗ್ರಹಿಸಿ ನೆರೆಯ ಕಲಬುರಗಿ, ಯಾದಗಿರಿ, ಬೀದರ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಇದರ ಸುಳಿವು ಅರಿತು ದಾಳಿ ಹೂವಿನಹೆಡಗಿ ಬ್ರಿಜ್ ಬಳಿ ದಾಳಿ ನಡೆಸಿದ ಪಿಎಸ್‌ಐ ಅಗ್ನಿ ಆರು ಟಿಪ್ಪರ್‌ಗಳನ್ನು ಜಪ್ತಿ ಮಾಡಿದ್ದಾರೆ. ಐವರು ಚಾಲಕರಾದ ಚಾಲಕರಾದ ಲಾಲಸಾಬ್, ಸಿದ್ದಪ್ಪ, ಸುಭಾಸ, ಶ್ರೀಕಾಂತ, ಮೌಲಾಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವ ಚಾಲಕ ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸದಂತೆ ಒತ್ತಡ: ವಿಷಯ ತಿಳಿದು ಠಾಣೆಗೆ ಆಗಮಿಸಿದ ಮರಳು ಮಾಫಿಯಾ ತಂಡದ ಪ್ರಭಾವಿಗಳ ದಂಡು ಕಲಬುರಗಿ, ಬೀದರ ಜಿಲ್ಲೆಯ ರಾಜಕಾರಣಿಗಳ ಮೂಲಕ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದರೂ ಜಗ್ಗದ ಪಿಎಸ್‌ಐ ಅಗ್ನಿ ಪ್ರಕರಣ ದಾಖಲಿಸಿ ಮರಳು ಮಾಫಿಯಾಕ್ಕೆ ಬಿಸಿ ಮುಟ್ಟಿಸಿದ್ದಾರೆ.