ಹಾಸನ: ಟೊಮೊಟೋಗೆ ಭಾರೀ ಬೆಲೆ ಬಂದಿರುವ ಹಿನ್ನೆಲೆ ಟೊಮೆಟೋ ಸಂಬಂಧಿಸಿದ ಸುದ್ದಿಗಳು ಮಹತ್ವ ಪಡೆಯುತ್ತಿವೆ. ಬೆಲೆ ಕಂಡು ಟೊಮೊಟೋ ಬೆಳೆಯಲು ರೈತರು ಧಾವಿಸುತ್ತಿದ್ದಾರೆ. ಆದರೆ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ಕೆಲಸದ ಒತ್ತಡದ ನಡುವೆ ಕರ್ತವ್ಯ ಮುಗಿಸಿದ ನಂತರ ಕೃಷಿಯಲ್ಲಿ ತೊಡಗಿಕೊಂಡು ಟೊಮೊಟೋ ಬೆಳೆದು ಲಕ್ಷಾಂತರೂ ಆದಾಯ ಗಳಿಸಿದ್ದಾರೆ.
ಬೇಲೂರು ತಾಲೂಕು, ಬಸ್ತಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ- ಗಾಯತ್ರಮ್ಮ ಪುತ್ರ ಭೈರೇಶ್, ಡಿಎಡ್ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರತಿ ವರ್ಷ ಬಸ್ತಿಹಳ್ಳಿಯಲ್ಲಿರುವ ಒಂದು ಎಕರೆ ಆರು ಗುಂಟೆ ಜಮೀನಿನಲ್ಲಿ ಟೊಮೊಟೊ, ಬೀನ್ಸ್, ಶುಂಠಿ ಇತರೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲೂ ಪ್ರತಿ ವರ್ಷ ಟೊಮೊಟೊ ಬೆಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಹೀಗೆ ಟೊಮೊಟೊ ಬೆಳೆದಾಗಲೆಲ್ಲಾ ಮಳೆ ಕೊರತೆ, ರೋಗಭಾದೆ, ಬೆಲೆ ಕುಸಿತ, ಅಧಿಕ ಮಳೆಯಿಂದ ಟೊಮೊಟೊ ಬೆಳೆಯಲ್ಲಿ ನಷ್ಟ ಅನುಭಸಿದ್ದೇ ಹೆಚ್ಚು. ಕೆಲವು ವೇಳೆ ಟೊಮೊಟೋ ಬಿಡಿಸದೆ ಅಲ್ಲೇ ಬಿಟ್ಟಿದ್ದರೂ ಉಂಟು.
ತೋಟದ ಬಳಿಯೇ ಖರೀದಿ: ಆದರೂ ಭೈರೇಶ್ ವಿಮುಖರಾಗಲಿಲ್ಲ. ಹೊಲದಲ್ಲಿ ಕೊಳವೆ ಬಾವಿ ಕೊರೆಸಿ,ಹೊಲಕ್ಕೆ ಕುರಿ ಗೊಬ್ಬರ ಹಾಕಿಸಿ, ಹನಿ ನೀರಾವರಿ ಅಳವಡಿಸಿ ಸುಮಾರು ಮೂರು ಲಕ್ಷ ಖರ್ಚು ಮಾಡಿ ಈ ಮಾರಿ ಟೊಮೆಟೊ ಬೆಳೆದಿದ್ದರು. ಬೆಳೆ ಹಸನಾಗಿ ಬಂದಿದು, ಇಳುವರಿ ಉತ್ತಮವಾಗಿದೆ. ಇಳುವರಿಗೆ ತಕ್ಕಂತೆ ಟೊಮೊಟೊಗೆ ಚಿನ್ನದ ಬೆಲೆ ಬಂದಿದೆ. ಬೈರೇಶ್ ಟೊಮೊಟೊ ಬೆಳೆದಿರುವ ವಿಷಯ ತಿಳಿದ ವರ್ತಕರೇ ಮಂಗಳೂರು, ಉಡುಪಿ ಜಿಲ್ಲೆಗಳಿಂದ ಆಗಮಿಸಿ ಹೊಲದ ಬಳಿಯೇ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ.
ಮಾರುಕಟ್ಟೆ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆ ಸಿಗುತ್ತಿದ್ದರೂ ಒಳ್ಳೆಯ ಲಾಭವೇ ಬರುತ್ತಿದೆ. ಈಗಾಗಲೇ ಒಂದು ಸಾವಿರ ಬಾಕ್ಸ್ ಟೊಮೊಟೊ ಹಣ್ಣು ಮಾರಾಟ ಮಾಡಿದ್ದು ಇಪ್ಪತ್ತು ಲಕ್ಷ ಆದಾಯಗಳಿಸಿದ್ದಾರೆ.
ಇನ್ನೂ ಒಂದು ಸಾವಿರ ಬಾಕ್ಸ್ ಟೊಮೋ ಸಿಗುವ ಅಂದಾಜಿದೆ. ಟೊಮೊಟೋಗೆ ಕಳ್ಳರ ಕಾಟವೂ ಕಾಡಿದೆ. ಹಾಗಾಗಿ ಟೊಮೊಟೋ ಹೊಲ ಕಾಯಲು ಜೊತೆಗೆ ಕಾವಲುಗಾರರ ನೇಮಿಸಿದ್ದಾರೆ.