ಬೆಂಗಳೂರು: ಜನ ಸಾಮಾನ್ಯರು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದರೂ ಕೆಲವೊಮ್ಮೆ ಪೊಲೀಸ್ ಅಧಿಕಾರಿಗಳು ದುರ್ನಡತೆ ತೋರುವುದು, ತನಿಖೆ ನಡೆಸದಿರುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಇತ್ಯಾದಿ ಕಿರುಕುಳ ನೀಡುತ್ತಾರೆ. ಇಂತಹ ಪೊಲೀಸರ ವಿರುದ್ಧ ದೂರು ನೀಡಲೆಂದಿರುವ “ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ’ದಲ್ಲಿ ಅಧ್ಯಕ್ಷರೇ ಇಲ್ಲದೇ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಕಳೆದ 8 ತಿಂಗಳಿನಿಂದ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರ ಹುದ್ದೆಗಳು ಖಾಲಿ ಇವೆ. ಪರಿಣಾಮ ಜನ ಸಾಮಾನ್ಯರು ಪೊಲೀಸರ ವಿರುದ್ಧ ನೀಡಿರುವ 534 ದೂರುಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ರಾಜ್ಯ ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡು ಮುಖ್ಯಮಂತ್ರಿಗಳ ಲಿಖೀತ ಸಹಿ ಬೀಳಬೇಕಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಇನ್ನೂ 2 ತಿಂಗಳು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಪೊಲೀಸರಿಂದ ಕಿರುಕುಳಕ್ಕೊಳಗಾದವರ ಪರದಾಟ: ರಾಜ್ಯದ ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳು, ಹಲವು ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಗಳ ವಿರುದ್ಧ ರಾಶಿ-ರಾಶಿ ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ಪ್ರಕರಣ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ದೂರಿನ ಅರ್ಜಿಗಳು ಹಲವು ತಿಂಗಳುಗಳಿಂದ ಕಚೇರಿ ಕಡತಗಳಲ್ಲಿ ಹಾಗೆಯೇ ಉಳಿದುಕೊಂಡಿವೆ. ಮತ್ತೂಂದೆಡೆ ಆರೋಪ ಹೊತ್ತಿರುವ ಪೊಲೀಸರು ದೂರು ಕೊಟ್ಟವರಿಗೆ ಕಿರುಕುಳ ಕೊಡುವ ಚಾಳಿ ಮುಂದುವರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪೊಲೀಸರಿಂದ ಅನ್ಯಾಯಕ್ಕೊಳಗಾದ ಅಮಾಯಕ ಜನ ನ್ಯಾಯಕ್ಕಾಗಿ ಪರದಾಡಿ ಹೈರಾಣಾಗುವ ಸ್ಥಿತಿ ಒಂದೊದಗಲಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಾಧಿಕಾರದ ರಚನೆ ಹೇಗೆ ?: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿದ್ದು, ಇವರ ನೇತೃತ್ವದಲ್ಲಿ ಸಭೆ ನಡೆಸಿ ಆರೋಪವಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯ ಸಾರ್ವಜನಿಕ ಕುಂದುಕೊರತೆ ಹಾಗೂ ಮಾನವ ಹಕ್ಕುಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿಯಾಗಿರುತ್ತಾರೆ. ಪುಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಮಟ್ಟದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು, ಸಮಾಜ ಸೇವಾಸಕ್ತ ನಾಗರಿಕರೊಬ್ಬರು ಹಾಗೂ ಸೇವಾನಿರತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಸೇರಿ ದಂತೆ ಮೂವರು ಸದಸ್ಯರಿರುತ್ತಾರೆ. ರಾಜ್ಯ ಮಟ್ಟದಲ್ಲಿ ಒಂದು ಪ್ರಾಧಿಕಾರ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲೂ ಒಂದೊಂದು ಪ್ರಾಧಿಕಾರಗಳಿರುತ್ತವೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶ್ರೇಣಿ ಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ದೂರು ಕೊಡಬಹುದು. ಕಾನ್‌ಸ್ಟೇಬಲ್‌ನಿಂದ ಡಿವೈಎಸ್‌ಪಿ ಹುದ್ದೆಯವರೆಗಿನ ಪೊಲೀಸರ ವಿರುದ್ಧ ಆಯಾ ಜಿಲ್ಲಾ ಪ್ರಾಧಿಕಾರದಲ್ಲಿ ದೂರು ನೀಡಬಹುದು.
ಪ್ರಾಧಿಕಾರಕ್ಕೆ ಬಂದ ದೂರುಗಳು ಯಾವುವು ?:
ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು.
ಸಾರ್ವಜನಿಕರು ನೀಡುವ ದೂರು ಸ್ವೀಕರಿಸದಿರುವುದು, ಎಫ್ಐಆರ್ ದಾಖಲಿಸದಿರುವುದು.
ಎಫ್ಐಆರ್ ದಾಖಲಿಸಿದ ಬಳಿಕ ಯಾವುದೇ ಕ್ರಮ ಕೈಗೊಳ್ಳದಿರುವುದು.
ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸದಿರುವುದು.
ವಿವಿಧ ಆಮೀಷಗಳಿಗೆ ಒಳಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು.
ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ.
ಆರೋಪಿಗಳ ಜೊತೆಗೆ ಶಾಮೀಲಾಗುವುದು. ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ. ಆಪಾದಿತರ ವಿರುದ್ಧ ದೂರಿನ ಮೇಲೆ “ಬಿ’ ರಿಪೋರ್ಟ್ ದಾಖಲಿಸುವುದು.
ಅಕ್ರಮ ಬಂಧನ, ಹಲ್ಲೆ ನಡೆಸಿ ಗಾಯಗೊಳಿಸುವುದು.
ಉಚ್ಛ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮೇ 30ರ ಬಳಿಕ ಖಾಲಿ ಇರುವ ಅಧ್ಯಕ್ಷರ ಹುದ್ದೆ ಭರ್ತಿ ಮಾಡುವ ಸಾಧ್ಯತೆಗಳಿವೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.
-ಕುಮಾರ್, ಅಧೀನ ಕಾರ್ಯದರ್ಶಿ, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ.
-ಅವಿನಾಶ ಮೂಡಂಬಿಕಾನ