ಕಲಬುರಗಿ: ವಿಚಾರಣೆ ಮಾಡುವ ಹಾಗೂ ನಡೆಸುವ ಪೊಲೀಸರಿಗೆ ಸೂಕ್ತ ತರಬೇತಿ ನೀಡುವುದು ಅವಶ್ಯಕ ಎಂದು ರಾಷ್ಟ್ರೀಯ ಪೊಲೀಸ್ ಆಯೋಗ ನೀಡಿದ ಅಂತಿಮ ವರದಿಯಾಧರಿಸಿ ರಾಜ್ಯ ಹಾಗೂ ಪೊಲೀಸ್ ದೂರು ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗಿದೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಎ.ಎಸ್. ಪಾಚಾಪುರೆ ಹೇಳಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹೊಸ ನ್ಯಾಯವಾದಿಗಳ ಸಂಘದ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ’ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರಾಗಿ, ಐಪಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರು ಇರುತ್ತಾರೆ. ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು , ಎಸ್‌ಪಿ ಸದಸ್ಯ ಕಾರ್ಯದರ್ಶಿ, ಇಬ್ಬರೂ ಸದಸ್ಯರಿರುತ್ತಾರೆ.
ದೇಶದಲ್ಲಿ ಹಲವಾರು ಕಾಯ್ದೆ ಕಾನೂನು ಜಾರಿಗೆ ತಂದರೂ ಅವುಗಳನ್ನು ನ್ಯಾಯಾಲಯಗಳು ಜಾರಿಗೆ ತರುತ್ತಿದ್ದರೂ ಆಪಾದಿತರಿಗೆ ಶಿಕ್ಷೆ ನೀಡುತ್ತಿರುವ ಪ್ರಮಾಣ ಅತ್ಯಂತ ಕಡಿಮೆಯಿದೆ. ಇದಕ್ಕಾಗಿ ಪೊಲೀಸ್ ದೂರು ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಿದರು. ಇವು ಸ್ವಯಂ ಪ್ರೇರಿತವಾಗಿ ಅಥವಾ ಯಾರೇ ನೀಡಿದ ದೂರಿನ ಮೇಲೆ ಪೊಲೀಸರು ಎಸಗಿದ ಕರ್ತವ್ಯ ಲೋಪ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಅಧಿಕಾರ ಹೊಂದಿವೆ.
ಸಾಮಾನ್ಯ ಜನರು ಹಾಗೂ ಪೊಲೀಸರ ಮಧ್ಯ ಬಾಂಧವ್ಯ ಏರ್ಪಡಿಸಲು, ಜನಸ್ನೇಹಿ ಪೊಲೀಸ್ ಆಗಿಸುವ ನಿಟ್ಟಿನಲ್ಲಿ ದೂರು ಪ್ರಾಧಿಕಾರ ಕೆಲಸ ಮಾಡಲಿದೆ ಎಂದು ಹೇಳಿದರು. ರಾಜ್ಯ ದೂರು ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ, ಎಸ್‌ಪಿ ಎನ್. ಶಶಿಕುಮಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ಪಾಟೀಲ ಮುಖ್ಯ ಅತಿಥಿಗಳಾಗಿದ್ದಾರು. ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುಮಾರು 150 ಜನ ವಕೀಲರು ಭಾಗವಹಿಸಿದ್ದರು.