ಮಹಾನಗರ: ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ಒಂದು ವಾರದಿಂದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರು ಗುರುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಈ ಬಗ್ಗೆ ಪರಿಶೀಲಿಸಿದರು.
ಈಗ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಇನ್ನು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದರು.
ಮುಖ್ಯವಾಗಿ ಬಸ್ ಬೇ ಗಳಲ್ಲಿ ಮತ್ತು ಸಂಚಾರ ಸಮಸ್ಯೆ ಉಂಟಾಗುವಲ್ಲಿ ಕೋನ್ಸ್ ಗಳ ಅಳವಡಿಕೆ ಮತ್ತು ಸಾರ್ವಜನಿಕರಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಝೀಬ್ರಾ ಕ್ರಾಸ್ ಹಾಕಲಾಗಿದೆ. ಪಿ.ವಿ.ಎಸ್. ಜಂಕ್ಷನ್- ಬಂಟ್ಸ್ ಹಾಸ್ಟೆಲ್ ರಸ್ತೆ, ಪಾಂಡೇಶ್ವರ ರೈಲ್ವೇ ಗೇಟ್, ಯು.ಪಿ. ಮಲ್ಯ ರಸ್ತೆಯ ಬಸ್ ಬೇ, ಕಂಕನಾಡಿ ಬೈಪಾಸ್ ರೋಡ್, ಶರವು ದೇವಸ್ಥಾನ ರಸ್ತೆ, ಕೊಡಿಯಾಲ್ ಗುತ್ತು, ಗೋಕರ್ಣನಾಥ ಕಾಲೇಜು, ಉರ್ವ ಮಾರ್ಕೆಟ್, ಸಿಟಿ ಸೆಂಟರ್, ಶ್ರೀನಿವಾಸ್ ಹೊಟೇಲ್, ಬಾವುಟ ಗುಡ್ಡೆಯ ಠಾಗೋರ್ ಪಾರ್ಕ್, ಸಂತ ಅಲೋಶಿಯಸ್ ಕಾಲೇಜು, ಹಂಪನಕಟ್ಟೆ ಮುಂತಾದ ಕಡೆಗಳಲ್ಲಿ ಕೋನ್ಸ್‌ಗಳನ್ನು ಹಾಕಿ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆಯಲ್ಲಿ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕ್ರಮ ಜರಗಿಸಲಾಗಿದೆ.
ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ ಮತ್ತು ಇತರ ಅಧಿಕಾರಿಗಳು ಜತೆಗಿದ್ದರು.
ವಿಪುಲ್ ಅವರ ಪ್ರಥಮ ಫೋನ್‌ಇನ್
ಕಳೆದ ಶುಕ್ರವಾರ (ಮೇ 18) ನಡೆದ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ನೂತನ ಕಮಿಷನರ್ ವಿಪುಲ್ ಕುಮಾರ್ ಅವರು ಪ್ರಥಮ ಬಾರಿಗೆ ಭಾಗವಹಿಸಿದ್ದು, ಖುದ್ದು ಅವರೇ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ, ಕೆಲವೊಂದು ಸಮಸ್ಯೆ ಗಳಿಗೆ ಅಲ್ಲಿ ಉಪಸ್ಥಿತರಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಉತ್ತರ ನೀಡಿದ್ದರು. ಅಂದು ಅವರು ನೀಡಿದ ಆಶ್ವಾಸನೆಗಳ ಪೈಕಿ ಕೆಲವೊಂದು ಭರವಸೆ ಗಳನ್ನು ಈಡೇರಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಅವು ಪ್ರಗತಿಯಲ್ಲಿವೆ.