Advertisement

ಪೊಲೀಸ್‌ ಕಮಿಷನರ್‌ ಎಸ್‌ಸಿ, ಎಸ್‌ಟಿ ಸಭೆ

10:17 AM Jan 01, 2018 | Team Udayavani |

ಮಹಾನಗರ: ತಲಪಾಡಿಯಲ್ಲಿರುವ ಪರಿಶಿಷ್ಟ ಸಮುದಾಯದವರ ಕಾಲನಿಯ ಶ್ಮಶಾನದ ಜಾಗವನ್ನು ತಲಪಾಡಿ ಪಂಚಾಯತ್‌ನವರೇ ಅತಿಕ್ರಮಿಸಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ರವಿವಾರ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಆರೋಪಿಸಿದರು ಹಾಗೂ ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

Advertisement

ದಲಿತ ಮುಖಂಡ ಗಿರೀಶ್‌ ಅವರು ವಿಷಯ ಪ್ರಸ್ತಾಪಿಸಿ, ಈ ಪರಿಶಿಷ್ಟರ ಕಾಲನಿಗೆ ಶ್ಮಶಾನಕ್ಕಾಗಿ 65 ಸೆಂಟ್ಸ್‌ ಜಾಗ ಮೀಸಲಿರಿಸಿದ್ದು, ಅದಕ್ಕೆ ಆವರಣ ಗೋಡೆ ನಿರ್ಮಾಣ ಮಾಡಲು 6 ಲಕ್ಷ ರೂ. ಅನುದಾನ ಮಂಜೂರಾಗಿ ವರ್ಷಗಳೇ ಕಳೆದರೂ ಇನ್ನೂ ಆವರಣ ಗೋಡೆ ಕಾಮಗಾರಿ ನಡೆದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ರುದ್ರ ಭೂಮಿಯ ಆಸುಪಾಸು ಕೆಲವು ಮುಸ್ಲಿಂ ಕುಟುಂಬಗಳು ವಾಸಿಸಲು ಆರಂಭಿಸಿದ್ದು, ರುದ್ರ ಭೂಮಿಯಲ್ಲಿ ಶವಗಳನ್ನು ಸುಡುವ ಬಗ್ಗೆ ಆಕ್ಷೇಪಿಸುತ್ತಿದ್ದಾರೆ. ಇತ್ತೀಚೆಗೆ ಪಂ. ವತಿಯಿಂದ ರುದ್ರ ಭೂಮಿಯ ಮಧ್ಯ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಈ ಶ್ಮಶಾನ ಭೂಮಿಯು ದಲಿತರ ಕೈತಪ್ಪುವ ಭೀತಿ ಇದೆ. ಆದ್ದರಿಂದ ಶ್ಮಶಾನದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಈ ಬಗ್ಗೆ ತಮಗೆ ಲಿಖಿತವಾಗಿ ದೂರು ಅರ್ಜಿ ಸಲ್ಲಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಪಿ ಹನುಮಂತರಾಯ ತಿಳಿಸಿದರು.

ಸಬ್ಸಿಡಿ ಹಣಕ್ಕೆ ತಡೆ
ದಲಿತ ಸಮುದಾಯದ ಯುವ ಜನರಿಗೆ ಸ್ವ ಉದ್ಯೋಗ ಮಾಡಲು ಅಂಬೇಡ್ಕರ್‌ ನಿಗಮದಿಂದ ಮಂಜೂರಾದ ಸಬ್ಸಿಡಿ ಮೊತ್ತವನ್ನು ಬ್ಯಾಂಕಿನವರು ಫಲಾನುಭವಿಗಳಿಗೆ ವರ್ಗಾಯಿಸದೆ, ತಡೆ ಹಿಡಿದು ಸತಾಯಿಸುತ್ತಿದ್ದಾರೆ ಎಂದು
ದಲಿತ ನಾಯಕ ಆನಂದ ಎಸ್‌.ಪಿ. ಆರೋಪಿಸಿದರು.

ಈ ವಿಷಯವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮೂಲಕ ಜಿಲ್ಲಾ ಲೀಡ್‌ ಬ್ಯಾಂಕಿನ ಮುಖ್ಯಸ್ಥರ ಗಮನಕ್ಕೆ ತಂದು ಸಂಬಂಧ ಪಟ್ಟ ಬ್ಯಾಂಕ್‌ ಶಾಖೆಗಳಿಗೆ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹನುಮಂತ
ರಾಯ ವಿವರಿಸಿದರು.

ಶಬ್ದ ಮಾಲಿನ್ಯ ಸಮಸ್ಯೆ
ಉರ್ವ ಮಾರ್ಕೆಟ್‌ ಬಳಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಸಮೀಪದ ನಿವಾಸಿಗಳು ಶಬ್ದ ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ 2 ವರ್ಷಗಳಿಂದ ಸ್ಥಳೀಯ ದಲಿತ ಮಹಿಳೆಯೊಬ್ಬರು ಮಹಾನಗರ ಪಾಲಿಕೆಗೆ ದೂರು ನೀಡುತ್ತಾ ಬಂದಿದ್ದು, ಇತ್ತೀಚೆಗೆ ಪಾಲಿಕೆಯು ದ್ವಿಚಕ್ರ ವಾಹನ ದುರಸ್ತಿ ಕಾರ್ಯ ನಿರ್ವಹಿಸುತ್ತಿರುವ ಜಗದೀಶ್‌ ಗಟ್ಟಿ ಅವರಿಗೆ ನೋಟಿಸು ಜಾರಿ ಮಾಡಿದೆ. ಈ ತನ್ಮಧ್ಯೆ ಲೋಕಾಯುಕ್ತಕ್ಕೂ ದೂರು
ನೀಡಿದ್ದರಿಂದ ಇತ್ತೀಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗರಂ ಆದ ಜಗದೀಶ್‌ ಗಟ್ಟಿ ಅವರು ಕೆಲವು ದಿನಗಳ ಹಿಂದೆ ಉರ್ವ ಮಾರ್ಕೆಟ್‌ ನಲ್ಲಿ ದೂರುದಾರ ಮಹಿಳೆಗೆ ಅವಾಚ್ಯ
ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದಲಿತ ಮುಖಂಡ ಆನಂದ ಎಸ್‌. ಪಿ. ಆರೋಪಿಸಿ, ಈ ಕುರಿತಂತೆ ದಲಿತ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಆಗ್ರಹಿಸಿದರು.

Advertisement

ಪತ್ತೆ ಕಾರ್ಯ ಚುರುಕುಗೊಳಿಸಿ
ಕಾವೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಲಕಿ ಸುಮಿತ್ರಾ (14) ನಾಪತ್ತೆಯಾಗಿ ಹಲವು ದಿನಗಳಾಗಿದ್ದು, ಪತ್ತೆ ಕಾರ್ಯವನ್ನು ಚುರುಕುಗೊಳಿಸ ಬೇಕೆಂದು ಮಂಜುನಾಥ ಮೂಲ್ಕಿ ಒತ್ತಾಯಿಸಿದರು.  ಸಭೆಯಲ್ಲಿ ನಾಗರಿಕ ಹಕ್ಕು ಜಾರಿ
ನಿರ್ದೇಶನಾಲಯದ (ಸಿಆರ್‌ಇಸಿ) ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿಗಳಾದ
ಉದಯ ನಾಯಕ್‌, ರಾಮರಾವ್‌, ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು. 

ಪ್ರಕರಣ ಶೀಘ್ರ ಇತ್ಯರ್ಥ
2017ರಲ್ಲಿ ಕೇಸು ದಾಖಲಾಗಿ ವಿಲೇವಾರಿಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ಅತಿ ಶೀಘ್ರದಲ್ಲಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next