ಚಿತ್ರದುರ್ಗ: ಪೊಲೀಸರು ಕರ್ತವ್ಯ ನಿರ್ವಹಿಸುತ್ತಲೇ ಬಲಿದಾನ ಮಾಡಿದಾಗ ಸರ್ಕಾರ ಹಾಗೂ ಸಮಾಜ ಅಂಥವರ ಕುಟುಂಬಗಳಿಗೆ ಆಸರೆಯಾಗಿ ನಿಲ್ಲಬೇಕು. ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಎಂ. ಕರೆ ನೀಡಿದರು.
ನಗರದ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿರುವ ಹುತಾತ್ಮ ಪೊಲೀಸ್ ಸ್ಮಾರಕದ ಬಳಿ ಬುಧವಾರ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್-19 ಸಂದರ್ಭದಲ್ಲಿ ಪೊಲೀಸರು ಮನೆಗಳಿಗೂ ಹೋಗದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹುತಾತ್ಮರಾದ ಪೊಲೀಸರಕುಟುಂಬದ ಹಿತ ಕಾಯುವ ಕೆಲಸ ಮಾಡಬೇಕು. ಸಮಾಜ ಕೂಡ ಅವರಿಗೆ ಬೆಂಬಲವಾಗಿರಬೇಕು. ಕರ್ತವ್ಯದಲ್ಲಿರುವ ಎಲ್ಲ ಪೊಲೀಸರಿಗೂ ಸರ್ಕಾರ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾತನಾಡಿ, 1959ರಲ್ಲಿ ನಡೆದ ಚೀನಾ ಸೈನಿಕರ ಜತೆಗಿನ ಕಾಳಗದಲ್ಲಿ ಹುತಾತ್ಮರಾದ ಹತ್ತು ಸೈನಿಕರ ಸ್ಮರಣೆಯೊಂದಿಗೆ ಹುತಾತ್ಮರ ದಿನಾಚರಣೆ ಆರಂಭವಾಗಿದೆ. ದೇಶಾದ್ಯಂತ ಆಯಾ ವರ್ಷದಲ್ಲಿ ಹುತಾತ್ಮರಾದ ಪೊಲೀಸರ ಸ್ಮರಣೆ ಮಾಡುವ ಮೂಲಕ ಅವರ ಕರ್ತವ್ಯ ಹಾಗೂ ಬಲಿದಾನವನ್ನು ಸ್ಮರಿಸುತ್ತಿದ್ದೇವೆ ಎಂದರು.
2019ರ ನವೆಂಬರ್‌ನಿಂದ ಈವರೆಗೆ ದೇಶಾದ್ಯಂತ 264 ಪೊಲೀಸರು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಾಟಕದ 17 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿದ್ದಾರೆ ಎಂದು ತಿಳಿಸಿ ಹುತಾತ್ಮರಾದ ಎಲ್ಲರನ್ನೂ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಐಮಂಗಲ ಪೊಲೀಸ್ ತರಬೇತಿ ಶಾಲೆಯ ವರಿಷ್ಠಾಧಿಕಾರಿ ಪಾಪಣ್ಣ, ಹೆಚ್ಚುವರಿ
ಪೊಲೀಸ್ ಅಧೀಕ್ಷಕ ಮಹಾನಿಂಗ ಬಿ. ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ, ರೋಷನ್ ಜಮೀರ್, ತಿಪ್ಪೇಸ್ವಾಮಿ, ರಮೇಶ್, ಸಿಪಿಐಗಳಾದ ಫೈಜುಲ್ಲಾ, ನಯೀಮ್ ಅಹಮ್ಮದ್, ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್ ಮೊದಲಾದವರು ಭಾಗವಹಿಸಿದ್ದರು.
ಪೊಲೀಸ್ ಹುದ್ದೆ ಅತ್ಯಂತ ಸವಾಲಿನಿಂದ ಕೂಡಿದೆ. ಸೈನಿಕರು ಗಡಿಯಲ್ಲಿದ್ದುದೇಶ ರಕ್ಷಣೆ ಮಾಡಿದರೆ, ಪೊಲೀಸರುದೇಶದೊಳಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ತಮ್ಮ ಕುಟುಂಬದ ಹಿತ ಬಲಿ ಕೊಟ್ಟು ಸಮಾಜದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರೆ. ನಾವೆಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ಪೊಲೀಸರು ಮಾತ್ರ ರಸ್ತೆಯಲ್ಲಿ ನಿಂತು ಬಂದೋಬಸ್ತ್ ನೋಡಿಕೊಳ್ಳುತ್ತಿರುತ್ತಾರೆ.
-ಮನಗೂಳಿ ಪ್ರೇಮಾವತಿ ಎಂ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು