Advertisement

ಪೊಲೀಸ್‌ ವೃತ್ತಿ 

04:49 PM Oct 04, 2017 | Team Udayavani |

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಒಂದು ಗುರಿಯನ್ನು ಹೊಂದಿರುತ್ತಾನೆ. ಆದರೆ ಈ ಗುರಿ ತಲುಪಲು ಸಫ‌ಲರಾಗುವುದಕ್ಕಿಂತ ವಿಫ‌ಲರಾಗುವುದೇ ಹೆಚ್ಚು. ಹೀಗಾಗಿ ನಾವು ಯಾವುದೇ ಒಂದು ಗುರಿಯನ್ನು ಇಟ್ಟುಕೊಳ್ಳುವ ಸಂದರ್ಭದಲ್ಲಿ ನಮ್ಮ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಗುರಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಂತ ನಮ್ಮಿಂದ ಸಾಧ್ಯವಿಲ್ಲದ ಗುರಿ ಇಟ್ಟುಕೊಳ್ಳಬಾರದು ಎಂದಲ್ಲ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಗುರಿ ಸಾಧಿಸಬೇಕಿದ್ದರೆ ಕಠಿನ ಪರಿಶ್ರಮವಂತೂ ಇರಲೇಬೇಕು.


ಜೀವನದಲ್ಲಿ ಬಹುತೇಕ ಮಂದಿಗೆ ಪೊಲೀಸ್‌ ಆಗಬೇಕು ಎಂಬ ಆಸೆ ಇರುತ್ತದೆ. ಸರಿಯಾದ ಮಾಹಿತಿ, ಆಸಕ್ತಿಯ ಕೊರತೆಗಳು ಅವರನ್ನು ಇನ್ಯಾವುದೋ ವೃತ್ತಿಗೆ ಕೊಂಡೊಯ್ಯುತ್ತದೆ. ಹೀಗಾಗಿ ಆಸೆಯ ಜತೆಗೆ ಕಠಿನ ಪರಿಶ್ರಮ ಇದ್ದಾಗ ಮಾತ್ರ ನಾವು ಪೊಲೀಸ್‌ ವೃತ್ತಿ ಪಡೆಯುವಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

Advertisement

ಪೊಲೀಸ್‌ ವೃತ್ತಿಯ ಕುರಿತು ಆಸಕ್ತಿ ಹೊಂದಿರುವವರು ಸಾಮಾನ್ಯ ಜ್ಞಾನ ಹಾಗೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಮಾತ್ರ ಸುಲಭವಾಗಿ ಇಲಾಖೆಗೆ ಸೇರ್ಪಡೆಗೊಳ್ಳಬಹುದು. ಹೀಗಾಗಿ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೆ ಈ ವೃತ್ತಿಗೆ ಪ್ರಯತ್ನಿಸಿದರೆ ಉತ್ತಮ.

ಪಿಯುಸಿ ಅರ್ಹತೆ
ಪ್ರಸ್ತುತ ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗೆ ಪ್ರವೇಶ ಪಡೆಯಲು ಪ.ಪೂ. ಶಿಕ್ಷಣ ಪಡೆದಿರುವುದು ನಿರ್ದಿಷ್ಟ ಅರ್ಹತೆಯಾಗಿರುತ್ತದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಬಳಿಕ 100 ಅಂಕಗಳ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಹಿಂದೆ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಪಿಯುಸಿ ಹಾಗೂ ಪ್ರವೇಶ ಪರೀಕ್ಷೆಯ ಅಂಕಗಳನ್ನು ತುಲನೆ ಮಾಡಿಕೊಂಡು ಮುಂದಿನ ಔಟ್‌ ಡೋರ್‌ ಎಕ್ಸಾಮ್‌ಗೆ ಆಯ್ಕೆ ಮಾಡಲಾಗುತ್ತಿತ್ತು. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು, ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರೆ ಅಥವಾ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದು, ಪ್ರವೇಶ ಪರೀಕ್ಷೆಯಲ್ಲಿ
ಉತ್ತಮ ಅಂಕ ಪಡೆದಿದ್ದರೆ, ಇದನ್ನು ತುಲನೆ ಮಾಡಿಕೊಂಡು ಮುಂದಿನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿತ್ತು.

ಆದರೆ ಪ್ರಸ್ತುತ ಪ್ರವೇಶ ಪರೀಕ್ಷೆಯ ಅಂಕಗಳೇ ಪ್ರಮುಖವಾಗುತ್ತದೆ. ಪಿಯುಸಿಯಲ್ಲಿ ಎಷ್ಟೇ ಅಂಕಗಳು ಪಡೆದಿದ್ದರೂ ಅಭ್ಯರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದಲ್ಲೇ ಮುಂದಿನ ತೇರ್ಗಡೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಡಿಮೆ ಅಂಕ ಬಂತೆಂದು ತಲೆಕೆಡಿಸಿಕೊಳ್ಳದೆ, ಪೊಲೀಸ್‌ ಇಲಾಖೆಗೆ ಸೇರುವುದಾದರೆ ಅದರ ಪ್ರವೇಶ ಪರೀಕ್ಷೆಯ ಕುರಿತು ಹೆಚ್ಚಿನ ಅಧ್ಯಯನ ಮಾಡಬಹುದಾಗಿದೆ.

Advertisement

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಆತನ ಎತ್ತರಕ್ಕೂ ಮಹತ್ವ ನೀಡಲಾಗುತ್ತದೆ. ಅಂದರೆ 168 ಸೆಂ.
ಮೀ. ಎತ್ತರವನ್ನು ಹೊಂದಿರಬೇಕಾಗುತ್ತದೆ. ಚೆಸ್ಟ್‌ನ ಕುರಿತು ಇಂತಿಷ್ಟೇ ಮಾನದಂಡವಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

ಔಟ್‌ಡೋರ್‌ ಎಕ್ಸಾಮ್‌
ಪೊಲೀಸ್‌ ಇಲಾಖೆಯು ರಕ್ಷಣಾತ್ಮಕ ಕೆಲಸವಾದ ಕಾರಣ ಅಭ್ಯರ್ಥಿಗಳು ಮಾನಸಿಕವಾಗಿ ಸದೃಢರಾಗಿರುವ ಜತೆಗೆ
ದೈಹಿಕವಾಗಿಯೂ ಉತ್ತಮ ಫಿಟ್ನೆಸ್  ಹೊಂದಿರಬೇಕಾಗುತ್ತದೆ. ಹೀಗಾಗಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಔಟ್‌ಡೋರ್‌ ಎಕ್ಸಾಮ್‌ ಅಂದರೆ ಫಿಟ್ನೆಸ್  ಪರೀಕ್ಷೆ ಇರುತ್ತದೆ. ಇಲ್ಲಿ ಕೆಲವೊಂದು ಇವೆಂಟ್‌ಗಳಲ್ಲಿ ನಿರ್ದಿಷ್ಟ ಮಾನದಂಡದಲ್ಲಿ ಉತ್ತೀರ್ಣರಾದರೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಬಹುತೇಕ ಕಾರ್ಯ ಪೂರ್ಣಗೊಳ್ಳುತ್ತದೆ.

ಫಿಟ್ನೆಸ್ ಪರೀಕ್ಷೆಯಲ್ಲಿ ಆರಂಭದಲ್ಲಿ 1,600 ಮೀ. ಓಟ ಇರುತ್ತದೆ. ಇದಕ್ಕಾಗಿ ಸಾಮಾನ್ಯವಾಗಿ 6.5 ನಿಮಿಷಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಯು ಈ ಸಮಯದೊಳಗೆ ಓಟವನ್ನು ಪೂರ್ತಿಗೊಳಿಸಿದರೆ ಮುಂದಿನ ಇವೆಂಟ್‌ಗಳಿರುತ್ತದೆ. ಮುಂದೆ ಲಾಂಗ್‌ ಜಂಪ್‌, ಹೈಜಂಪ್‌, ಶಾಟ್‌ಪುಟ್‌ ಇವೆಂಟ್‌ಗಳಿರುತ್ತವೆ. ಹೀಗೆ ಇಂತಹ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಸಂದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಒಂದು ವರ್ಷ ತರಬೇತಿ
ಬೇರೆ ಬೇರೆ ಹಂತಗಳಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪೊಲೀಸ್‌ ಇಲಾಖೆಗೆ ನೇಮಕಗೊಂಡ ಬಳಿಕ ಒಂದು ವರ್ಷದ ತರಬೇತಿ ಇರುತ್ತದೆ. ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಕೇಂದ್ರಗಳಲ್ಲಿ ಈ ತರಬೇತಿ ನೀಡಲಾಗುತ್ತದೆ. ಬಳಿಕ ನಿಯೋಜಿತ ಜಾಗದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ತರಬೇತಿ ಅಂದರೆ ವೇತನ ಸಹಿತವಾಗಿರುತ್ತದೆ. 

ಕಠಿನ ಅಭ್ಯಾಸ ಅಗತ್ಯ
ಪಿಯುಸಿ ಶಿಕ್ಷಣ ಪಡೆದವರು ಪೊಲೀಸ್‌ ವೃತ್ತಿಗೆ ಅರ್ಹರಾಗಿದ್ದು, ಪ್ರವೇಶ ಪರೀಕ್ಷೆ ಹಾಗೂ ಫಿಟ್ನೆಸ್  ಪರೀಕ್ಷೆಯಲ್ಲಿ
ಉತ್ತೀರ್ಣರಾಗಬೇಕಾಗುತ್ತದೆ. ಕಠಿನ ಅಭ್ಯಾಸ ನಡೆಸಿದರೆ ಪೊಲೀಸ್‌ ವೃತ್ತಿ ಸುಲಭವಾಗುತ್ತದೆ. ಹೀಗಾಗಿ ಯುವಜನತೆ ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿದರೆ ಉತ್ತಮ ಎಂದು ಪೊಲೀಸ್‌ ಇಲಾಖೆಯ ಸಿಬಂದಿಯೊಬ್ಬರು ತಿಳಿಸಿದ್ದಾರೆ. 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next