ಬೆಂಗಳೂರು: ವಾಹನದ ಪೆಟ್ರೋಲ್ ಖಾಲಿಯಾಗಿ ಜೆಸಿನಗರದ ಟಿವಿ ಟವರ್‌ನ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ನಿಂತಿದ್ದ ಮಹಿಳೆಯ ನೆರವಿಗೆ ಧಾವಿಸಿದ ಸಂಚಾರ ಠಾಣೆಯ ಎಎಸ್‌ಐ ಒಬ್ಬರು ಸಮಾಜಿಕ ತಾಣಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ನಾರಾಯಣ ಸ್ವಾಮಿ ಅವರು ತಮಗೆ ನೆರವಾದ ಸಂಗತಿಯನ್ನು ಮಹಿಳೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಹಿರಿಯ ಅಧಿಕಾರಿಗಳು, ನಾಗರಿಕರು ನಾರಾಯಣಸ್ವಾಮಿ ಅವರನ್ನು ಶ್ಲಾಘಿಸಿದ್ದಾರೆ.
ನಿರ್ಮಲಾ ರಾಜೇಶ್ ಎಂಬ ಮಹಿಳೆ ಗುರುವಾರ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ 8.30ರ ಸುಮಾರಿಗೆ ಮಾರ್ಗ ಮಧ್ಯೆ ಜೆ.ಸಿ.ನಗರದ ಟಿವಿ ಟವರ್ ಬಳಿ ವಾಹನದ ಪೆಟ್ರೋಲ್ ಖಾಲಿಯಾಗಿದೆ.
ನಿರ್ಮಲಾ ಅವರು ತಮ್ಮ ಪತಿಗೆ ಕರೆ ಮಾಡಿ ಪೆಟ್ರೋಲ್ ಖಾಲಿಯಾಗಿರುವ ವಿಷಯ ತಿಳಿಸಿ ಪೆಟ್ರೋಲ್ ತೆಗೆದುಕೊಂಡು ಬರುವಂತೆ ಹೇಳಿ ರಸ್ತೆಯಲ್ಲೇ ವಾಹನದೊಂದಿಗೆ ನಿಂತಿದ್ದರು. ಎಎಸ್‌ಐ ನಾರಾಯಣ ಸ್ವಾಮಿ ಅವರು ಕೆಲಸ ಮುಗಿಸಿಕೊಂಡು ಅದೇ ಮಾರ್ಗದಲ್ಲಿ ಮನೆಗೆ ತೆರಳುತ್ತಿದ್ದರು. ರಸ್ತೆ ಬದಿ ಮಹಿಳೆ ನಿಂತಿದ್ದನ್ನು ಕಂಡ ನಾರಾಯಣ ಸ್ವಾಮಿ ಅವರು, ನಿರ್ಮಲಾ ಅವರನ್ನು ಪ್ರಶ್ನಿಸಿದ್ದರು. ಅವರು ಪೆಟ್ರೋಲ್ ಖಾಲಿಯಾಗಿರುವ ವಿಷಯ ತಿಳಿಸಿದ್ದಾರೆ.
“ಜನ ಓಡಾಡದ ಸ್ಥಳದಲ್ಲಿ ನಿಲ್ಲುವುದು ಸರಿಯಲ್ಲ, ನನ್ನ ದ್ವಿಚಕ್ರ ವಾಹನದೊಂದಿಗೆ ಮೇಖೀÅ ವೃತ್ತಕ್ಕೆ ಹೋಗಿ, ನಿಮ್ಮ ದ್ವಿಚಕ್ರ ವಾಹನ ತಳ್ಳಿಕೊಂಡು ಬರುತ್ತೇನೆ,” ಎಂದು ಹೇಳಿ ಹಿಂದೆಯೇ ಹೋಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಮಹಿಳೆಯ ಪತಿ ಪೆಟ್ರೋಲ್ ತಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದರು.
ಎಎಸ್‌ಐ ನಾರಾಯಣ ಅವರು ಮಾಡಿದ ಕೆಲಸದ ಬಗ್ಗೆ ನಿರ್ಮಲಾ ಸಾಮಾಜಿಕ ಜಾಲತಾಣ “ಫೇಸ್‌ಬುಕ್’ ಖಾತೆಯಲ್ಲಿ ಬರೆದು ಧನ್ಯವಾದ ಸಲ್ಲಿಸಿದ್ದರು. ನಾರಾಯಣ ಅವರ ಸಹಾಯಕ್ಕೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದೆ. ಮಹಿಳೆಯ ರಸ್ತೆ ಬದಿ ನಿಂತಿದ್ದರು. ಒಂಟಿ ಮಹಿಳೆ ಜನ ಓಡಾಡದ ಸ್ಥಳದಲ್ಲಿ ನಿಲ್ಲುವುದು ಸರಿಯಲ್ಲ ಎಂದು ನನ್ನ ವಾಹನ ಅವರಿಗೆ ನೀಡಿ ಕಳುಹಿಸಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ.
-ನಾರಾಯಣಸ್ವಾಮಿ, ಎಎಸ್‌ಐ, ಕೆ.ಜಿ.ಹಳ್ಳಿ ಸಂಚಾರ ಠಾಣೆ