ಮೈಸೂರು : ಗುಜರಾತ್ ನ ಅಹಮದಾಬಾದ್ ನಲ್ಲಿ ಶನಿವಾರ ಪೊಲೀಸರಿಗೆ ಸಿಕ್ಕಿ ಬಿದ್ಧಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಶನಿವಾರ ಮೈಸೂರಿಗೆ ಕರೆತಂದಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.
ಸ್ಯಾಂಟ್ರೋ ರವಿಯ ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ. ಕೇಸಿನ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದೇವೆ. ಆರೋಪಿಯ ಬಂಧನವಾದ ನಂತರ ಪ್ರಯಾಣದ ಅವಧಿ ಬಿಟ್ಟು 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕು. ಇಂದು ಬೆಳಗ್ಗೆಯಿಂದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಗಂಟೆಗೊಮ್ಮೆ ಇನ್ಸುಲಿನ್ ಪಡೆದುಕೊಳ್ಳುತ್ತಿದ್ದಾನೆ
ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸಿನ ಬಗ್ಗೆ ಮಾತ್ರ ಈಗ ವಿಚಾರಣೆ ನಡೆಯುತ್ತಿದೆ. ಬೇರೆ ಇನ್ಯಾವುದೇ ವಿಚಾರಗಳ ಬಗ್ಗೆಯೂ ಆರೋಪಿಯನ್ನು ನಾವು ಪ್ರಶ್ನಿಸಿಲ್ಲ.ನಾವು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೇಳುತ್ತೇವೆ. ಪೊಲೀಸ್ ಕಸ್ಟಡಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತೇವೆ. ಸ್ಯಾಂಟ್ರೋ ರವಿ 11 ದಿನಗಳ ಕಾಲ ಎಲ್ಲೆಲ್ಲಿ ಓಡಾಡಿಕೊಂಡಿದ್ದ, ಆತನಿಗೆ ಯಾರ್ಯಾರು ಸಹಾಯ ಮಾಡಿದ್ದರು ಎಂಬುದರ ಬಗ್ಗೆ ಆರಂಭಿಕ ಮಾಹಿತಿ ಪಡೆಯುತ್ತಿದ್ದೇವೆ. ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ. ಸ್ಯಾಂಟ್ರೋ ಡಯಾಬಿಟಿಕ್ ಇದ್ದಾನೆ. ಗಂಟೆಗೊಮ್ಮೆ ಇನ್ಸುಲಿನ್ ಪಡೆದುಕೊಳ್ಳುತ್ತಿದ್ದಾನೆ. ಸೂಕ್ತ ಔಷಧಿ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ. ಅವನಿಗೆ ಡಯಾಬಿಟಿಕ್ ಬಿಟ್ಟರೆ ಅಂತಹ ಸಮಸ್ಯೆ ಇದ್ಧಂತೆ ಕಾಣುತ್ತಿಲ್ಲ. ಸ್ಯಾಂಟ್ರೋ ರವಿ ಸೇರಿದಂತೆ ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ತೆರಳುವ ವೇಳೆ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆರಂಭಿಕ ವಿಚಾರಣೆ ನಂತರ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿದ್ದಾರೆ. ಆ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ವಿಜಯನಗರ ಪೊಲೀಸ್ ಠಾಣೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.