Advertisement

ಬಿಸಿಯೂಟ ನೌಕರರ ಪ್ರತಿಭಟನೆಗೆ ಪೊಲೀಸರು ತಡೆ

09:02 PM Feb 03, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕನಿಷ್ಠ ಕೂಲಿ, ಸೇವಾ ಭದ್ರತೆ ಹಾಗೂ ನಿವೃತ್ತಿ ವೇತನಕ್ಕಾಗಿ ಆಗ್ರಹಿಸಿ ಸೋಮವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೆರಳುತ್ತಿದ್ದ ನೂರಾರು ಬಿಸಿಯೂಟ ನೌಕರರನ್ನು ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರತಿಭಟನೆಗೆ ಭಂಗ ತಂದ ಘಟನೆ ನಡೆದಿದೆ.

Advertisement

ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪ್ರತಿಭಟನೆಗೆ ತೆರಳುತ್ತಿದ್ದ ಬಿಸಿಯೂಟ ನೌಕರರನ್ನು ಪೊಲೀಸರು ತಡೆದು ವಾಪಸ್ಸು ಕಳಿಸಿದರೆ, ಕೆಲವು ಕಡೆಗಳಲ್ಲಿ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಪ್ರತಿಭಟನೆ ವಿಫ‌ಲಗೊಳಿಸಿದರು.

ಏನಿದು ಘಟನೆ: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು), ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವದಿ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಬಿಸಿಯೂಟ ನೌಕರರಲ್ಲಿ ವ್ಯಾಪಕ ಪ್ರಚಾರ ನಡೆಸಿ ಬೆಂಗಳೂರು ಚಲೋ ನಡೆಸಲು ತಯಾರಿ ನಡೆಸಿದ್ದರು. ಆದರೆ ಭಾನುವಾರ ರಾತ್ರಿಯೇ ಪೊಲೀಸರು ಬಿಸಿಯೂಟ ನೌಕರರ ಮುಖಂಡರ ಮನೆಗಳಿಗೆ ತೆರಳಿ ಹಲವರನ್ನು ಬಂಧಿಸಿದರೆ, ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಹೋಗುತ್ತಿದ್ದ ನೌಕರರನ್ನು ಬಂಧಿಸಿ ವಶಕ್ಕೆ ಪಡೆದು ಇಡೀ ದಿನ ತಮ್ಮ ವಶದಲ್ಲಿಟ್ಟುಕೊಂಡು ಸಂಜೆ 5 ಗಂಟೆ ನಂತರ ಬಿಡುಗಡೆಗೊಳಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ: ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಮಾತನಾಡಿ, ರಾಜ್ಯ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು. ಬಿಸಿಯೂಟ ನೌಕರರ ಪ್ರತಿಭಟನೆಯನ್ನು ಎದುರಿಸಲಾಗದ ಬಿಜೆಪಿ ಸರ್ಕಾರ ಪೊಲೀಸರ ಬಲ ಪ್ರಯೋಗದೊಂದಿಗೆ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬೆಂಗಳೂರಿನ ಪೊಲೀಸ್‌ ಆಯುಕ್ತರ ವರ್ತನೆ ಬದಲಿಸಿಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಉಮಾ, ಪದಾಧಿಕಾರಿಗಳಾದ ಭಾಗ್ಯಮ್ಮ, ನಾರಾಯಣಮ್ಮ, ಸುಮಂಗಲ, ನರಸಮ್ಮ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಪೊಲೀಸ್‌ ಠಾಣೆ ಆವರಣದಲ್ಲಿಯೇ ಧರಣಿ: ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಹೊರಟಿದ್ದ 100 ಕ್ಕೂ ಹೆಚ್ಚು ಬಿಸಿಯೂಟ ನೌಕರರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಆಗ ಪ್ರತಿಭಟನಕಾರರು ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿಯೇ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಸಿಯೂಟ ನೌಕರರು ಪ್ರತಿಭಟನೆಗೆ ಹೆದರಿ ರಾಜ್ಯ ಸರ್ಕಾರ ಪೊಲೀಸರ ಮೂಲಕ ಪ್ರಜಾಸತ್ಮತ್ತಾಕವಾದ ಹೋರಾಟ ದಮನ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಟೀಕಿಸಿದರು.

ರಾಜ್ಯ ಸರ್ಕಾರ ಕೂಡಲೇ ಬಿಸಿಯೂಟ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು. ಬಿಸಿಯೂಟ ಯೋಜನೆ ಆರಂಭದಿಂದ ಇಂದಿನವರೆಗೂ ನಾವು ಅಲ್ಪ ವೇತನಕ್ಕಾಗಿ ದುಡಿಯುತ್ತಿದ್ದೇವೆ. ಸರ್ಕಾರ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ.
-ಕೆ.ಆರ್‌.ಮಂಜುಳಾ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next