ಉಡುಪಿ: ರಾಜ್ಯದಲ್ಲಿ ಜಾರಿಗೆ ತಂದಿರುವ ಸುಧಾರಿತ ಗಸ್ತು ವ್ಯವಸ್ಥೆಯನ್ನು ಆಯಾ ಪೊಲೀಸ್ ಠಾಣೆಯ ಸಿಬಂದಿ ಸಂಖ್ಯೆನುಗುಣವಾಗಿ ವಿಂಗಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2000 ಪೊಲೀಸ್ ಸಿಬಂದಿಯಿದ್ದು, 23 ಸಾವಿರ ನಾಗರಿಕ ಸಮಿತಿ ಸದಸ್ಯರಿದ್ದಾರೆ. ಇದು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಬಾಲಕೃಷ್ಣ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯ ಉಡುಪಿ ಉಪವಿಭಾಗದ ವತಿಯಿಂದ ಶನಿವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂ ಗಣದಲ್ಲಿ ನಡೆದ ಉಡುಪಿ ನಗರ ವೃತ್ತ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನೂತನ ಸುಧಾರಿತ ಗಸ್ತು ವ್ಯವಸ್ಥೆಯ ಗಸ್ತು ನಾಗರಿಕ ಸಮಿತಿ ಸದಸ್ಯರ ಸಭೆಯಲ್ಲಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಈ ನೂತನ ವ್ಯವಸ್ಥೆಯ ಮೂಲಕ ಪೊಲೀಸ್ ಇಲಾಖೆಯು ಜನರ ಆಶೋತ್ತರ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಗಸ್ತು ಸದಸ್ಯರ ಸಂಖ್ಯೆ ಸುಮಾರು 12ರಿಂದ 13 ಲಕ್ಷವಿದ್ದು, ಇವರ ಭಾವಚಿತ್ರ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳ ದಾಖಲೆಗಳು ಪೊಲೀಸ್ ಇಲಾಖೆಯಲ್ಲಿವೆ. ಸಾರ್ವಜನಿಕರು ನೀಡುವ ಯಾವುದೇ ಮಾಹಿತಿ ಸೋರಿಕೆ ಮಾಡದೆ ಗೌಪ್ಯವಾಗಿಡಲಾಗುವುದು. ಈ ಸದಸ್ಯರು ಒಂದು ವರ್ಷಗಳ ಕಾಲ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ ಎಂದರು.
ಉಡುಪಿ ಉಪ ವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ ಮಾತನಾಡಿ, ಸಮಾಜದಲ್ಲಿ ಅಪರಾಧ ತಡೆಗಟ್ಟುವುದು, ಪತ್ತೆ ಹಚ್ಚುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಗಸ್ತು ವ್ಯವಸ್ಥೆಯ ಉದ್ದೇಶ. ಅಪರಾಧಕ್ಕೆ ಸಂಬಂಧಿಸಿ ಮಾಹಿತಿಯನ್ನು ಈ ಸಮಿತಿ ಮೂಲಕ ಸಂಗ್ರಹಿಸಲಾಗುತ್ತದೆ. ಈ ಸುಧಾರಿತ ಗಸ್ತು ವ್ಯವಸ್ಥೆಯಲ್ಲಿ ಗ್ರಾಮ/ವಾರ್ಡ್‌ಗೆ ಓರ್ವ ಪೊಲೀಸ್ ನೇಮಕ ಮಾಡಲಾಗುತ್ತದೆ. ಇದು ಪೊಲೀಸ್ ಹಾಗೂ ಸಾರ್ವಜನಿಕರ ಮಧ್ಯೆ ಉತ್ತಮ ಬಾಂಧವ್ಯಕ್ಕೆ ನೆರವಾಗುವುದು ಎಂದರು.
ಪ್ರೋಬೇಶನರಿ ಐಎಎಸ್ ಅಧಿಕಾರಿ ಪೂವಿತಾ, ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್, ಗಸ್ತು ಸಿಬಂದಿ ಉಡುಪಿ ನಗರ ಠಾಣೆಯ ಲಕ್ಷ್ಮಣ್, ಮಲ್ಪೆಯ ಭರಮ ರೆಡ್ಡಿ, ಮಣಿಪಾಲದ ನೇತ್ರಾವತಿ, ನಾಗರಿಕ ಸಮಿತಿ ಸದಸ್ಯ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.
ಇದೇ ವೇಳೆ ಎಸ್‌ಪಿ ಅವರು ಉದಯವಾಣಿ ಪತ್ರಿಕೆ ಉಚಿತವಾಗಿ ಮುದ್ರಿಸಿರುವ ಸಾರಿಗೆ ನಿಯಮ ಸೂಚಿಸುವ ಸಂಕೇತಗಳನ್ನೊಳಗೊಂಡ ಕೈಪಿಡಿ ಹಾಗೂ ಸಂಚಾರ ಜಾಗೃತಿ ಕುರಿತ ಬುಕ್‌ಲೆಟ್‌ನ್ನು ಬಿಡುಗಡೆಗೊಳಿಸಿದರು. ವಳಕಾಡು ಸರಕಾರಿ ಶಾಲೆ ಮತ್ತು ಮಣಿಪಾಲ ಎಂಜೆಸಿ ವಿದ್ಯಾರ್ಥಿಗಳಿಂದ ಪ್ರಹಸನ ಜರಗಿತು.ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಸ್ವಾಗತಿಸಿ, ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.
“ಉದಯವಾಣಿ’ಗೆ ಎಸ್‌ಪಿ ಮೆಚ್ಚುಗೆ
ಪೋಲೀಸರ ಬಗ್ಗೆ ಇರುವ ಭಯ ನಿವಾರಿಸಿ ಪೊಲೀಸ್ ಸೇವೆಯನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆ ಮತ್ತು ಅಪರಾಧ ಮುಕ್ತ ಸಮಾಜಕ್ಕೆ ನಾಂದಿ ಹಾಡುವ ಮೈಲಿಗಲ್ಲು ಇದು ಎಂದು ಹೇಳಿದ ಎಸ್‌ಪಿ ಕೆ. ಟಿ. ಬಾಲಕೃಷ್ಣ ಅವರು, ಸಾರಿಗೆ ನಿಯಮವನ್ನು ಸೂಚಿಸುವ ಸಂಕೇತಗಳನ್ನೊಳಗೊಂಡ ಕೈಪಿಡಿಯನ್ನು ಉದಯವಾಣಿ ಪತ್ರಿಕೆ ಉಚಿತವಾಗಿ ಮುದ್ರಣ ಮಾಡಿಕೊಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.