Advertisement

ಪೊಲೀಸ್‌ ಬೀಟ್‌ ಮಾದರಿ ತ್ಯಾಜ್ಯ ಸಂಗ್ರಹಿಸಲು ಚಿಂತನೆ

12:18 PM Dec 22, 2018 | |

ಬೆಂಗಳೂರು: ರಾಜಧಾನಿಯ ಪ್ರತಿ ಮನೆಯಿಂದ ಪರಿಣಾಮಕಾರಿಯಾಗಿ ತ್ಯಾಜ್ಯ ಸಂಗ್ರಹಿಸಲು ಮುಂದಾಗಿರುವ ಬಿಬಿಎಂಪಿ, ಪೊಲೀಸ್‌ ಬೀಟ್‌ ಮಾದರಿಯಲ್ಲಿಯೇ ಪ್ರತಿ ಮನೆಗೆ ಕ್ಯೂಆರ್‌ ಕೋಡ್‌ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್ಐಡಿ) ಟ್ಯಾಗ್‌ ನೀಡಲು ಚಿಂತನೆ ನಡೆಸಿದೆ.

Advertisement

ಗುತ್ತಿಗೆದಾರರು ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿದೆ ಪಾಲಿಕೆಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪವಿದ್ದು, ಅದಕ್ಕೆಲ್ಲಾ ಬ್ರೇಕ್‌ ಹಾಕುಲು ಈ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗಿದೆ. ಹಲವಾರು ಬಡಾವಣೆಗಳಲ್ಲಿ ಗುತ್ತಿಗೆದಾರರು ವಾರಗಟ್ಟಲೇ ತ್ಯಾಜ್ಯ ಸಂಗ್ರಹಿಸುವುದಿಲ್ಲ.

ಇದರಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಹಾಗೇ ತ್ಯಾಜ್ಯ ಸಂಗ್ರಹ ವಾಹನ ಬಂದಾಗ ಹಸ ನೀಡದ ನಾಗರಿಕರು, ವಾಹನ ಹೋದ ನಂತರದ ಬೇರೆ ಕಡೆ ತ್ಯಾಜ್ಯ ಎಸೆಯುವುದು ಕಂಡುಬಂದಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಆರ್‌ಎಫ್ಐಡಿ ವ್ಯವಸ್ಥೆ ಪೂರಕವಾಗಿದೆ.

ಆಂಧ್ರಪ್ರದೇಶದ ವಿಜಯವಾಡ ನಗರ ಪಾಲಿಕೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸುತ್ತಿದ್ದು, ಪೊಲೀಸರು ಆಯ್ದ ಮನೆಗಳ ಬಳಿ ಇ-ಬೀಟ್‌ ಉಪಕರಣ ಅಳವಡಿಸುವ ಮಾದರಿಯಲ್ಲಿಯೇ ಪ್ರತಿ ಮನೆಗೆ ಕ್ಯೂರ್‌ಆರ್‌ ಕೋಡ್‌ ಆರ್‌ಎಫ್ಐಡಿ ಟ್ಯಾಗ್‌ ಹಾಕಲಾಗುತ್ತದೆ. ಇದರಿಂದಾಗಿ ಯಾವ ಮನೆಯವರು, ಎಷ್ಟು ಪ್ರಮಾಣದ ತ್ಯಾಜ್ಯ ನೀಡಿದ್ದಾರೆ ಎಂಬ ಮಾಹಿತಿ, ದಿನಾಂಕ ಹಾಗೂ ಸಮಯದೊಂದಿಗೆ ದೊರೆಯಲಿದೆ. 

ಕಸ ಪಡೆಯಲು ಸ್ಕ್ಯಾನ್‌ ಮಾಡಬೇಕು: ಪ್ರತಿ ಮನೆಗೆ ಕ್ಯೂಆರ್‌ ಕೋಡ್‌ ಆರ್‌ಎಫ್ಐಡಿ ಟ್ಯಾಗ್‌ ಅಳವಡಿಸಿದ ಬಳಿಕ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರಿಗೆ ಸ್ಕ್ಯಾನರ್‌ಗಳನ್ನು ನೀಡಲಾಗುತ್ತದೆ. ಅದರಂತೆ ಮನೆಯವರು ತ್ಯಾಜ್ಯ ನೀಡಿದಾಗ ಅವರ ಮನೆಗೆ ಅಳವಡಿಸಿರುವ ಕೋಡ್‌ ಅನ್ನು ಸ್ಕ್ಯಾನ್‌ ಮಾಡಬೇಕು. ಜತೆಗೆ ಅವರು ಎಷ್ಟು ತ್ಯಾಜ್ಯ ನೀಡಿದ್ದಾರೆ, ವಿಂಗಡಿಸಿದ್ದಾರಾ ಎಂಬ ಮಾಹಿತಿ ಸಂಗ್ರಹಿಸಬೇಕು. ಇದರಿಂದ ತ್ಯಾಜ್ಯ ಸಂಗ್ರಹದ ಸಂಪೂರ್ಣ ಮಾಹಿತಿ ಪಾಲಿಕೆಗೆ ಲಭ್ಯವಾಗುತ್ತದೆ.

Advertisement

ಮೋಸ ಮಾಡಲು ಅವಕಾಶವಿಲ್ಲ: ನೂತನ ಟೆಂಡರ್‌ ನಿಯಮಗಳಲ್ಲಿ ತ್ಯಾಜ್ಯ ಸಂಗ್ರಹ ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯಗೊಳಿಸಿದ್ದು, ಆರ್‌ಎಫ್ಐಡಿ ವ್ಯವಸ್ಥೆ ಜಾರಿಯಿಂದ ಗುತ್ತಿಗೆದಾರರು ಎಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕುಳಿತ ಸ್ಥಳದಲ್ಲೇ ಪಡೆಯಬಹುದು. ಇದರಿಂದ ತ್ಯಾಜ್ಯ ವಿಲೇವಾರಿಯಲ್ಲಿ ವಂಚನೆಗೆ ಅವಕಾಶವಿರುವುದಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. 

ಮೇಲ್ವಿಚಾರಣೆಗೆ ನಿರ್ವಹಣಾ ಕೇಂದ್ರ: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ನಿರ್ವಹಣಾ ಕೇಂದ್ರ ಸ್ಥಾಪನೆಗೆ ಪಾಲಿಕೆ ಮುಂದಾಗಿದ್ದು, ಈಗಾಗಲೇ ಟೆಂಡರ್‌ ಕರೆದಿದೆ. ಜತೆಗೆ ಶೀಘ್ರವೇ ವಾರ್ಡ್‌ವಾರು ಹಸಿ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಆಹ್ವಾನಿಸಲಿದ್ದು, ಆಟೋ ಟಿಪ್ಪರ್‌ಗಳು, ಕಾಂಪ್ಯಾಕ್ಟರ್‌ಗಳೊಂದಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯಗೊಳಿಸಲಿದೆ. ಅದಕ್ಕೆ ಪೂರಕವಾಗಿ ಕ್ಯೂಆರ್‌ ಕೋಡ್‌ ಆರ್‌ಎಫ್ಐಡಿ ಟ್ಯಾಗ್‌ ವ್ಯವಸ್ಥೆಯೂ ಜಾರಿಯಾದರೆ ಆ ಎಲ್ಲ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಲು ನಿರ್ವಹಣಾ ಕೇಂದ್ರ ಸಹಕಾರಿಯಾಗಲಿದೆ. ಜತೆಗೆ ಸಾರ್ವಜನಿಕರಿಂದ ಬರುವ ದೂರುಗಳಿಗೆ ಸ್ಪಂದಿಸಲಿದೆ. 

ಅಧ್ಯಯನಕ್ಕೆ ಮುಂದಾದ ಪಾಲಿಕೆ: ವಿಜಯವಾಡ ನಗರ ಪಾಲಿಕೆಯ 59 ವಿಭಾಗಳಲ್ಲಿ ಕ್ಯೂಆರ್‌ ಕೋಡ್‌ ಆರ್‌ಎಫ್ಐಡಿ ಟ್ಯಾಗ್‌ ವ್ಯವಸ್ಥೆ  ಜಾರಿಯಾಗುತ್ತಿದ್ದು, ಈಗಾಗಲೇ ಟ್ಯಾಗ್‌ ಅಳವಡಿಕೆ ಬಹುತೇಕ ಪೂರ್ಣಗೊಂಡಿದೆ. ಅದರಂತೆ ಪ್ರತಿ ವಿಭಾಗದಲ್ಲಿ ಈ ವ್ಯವಸ್ಥೆ ಜಾರಿಗೆ 5ರಿಂದ 6 ಲಕ್ಷ ವೆಚ್ಚವಾಗಲಿದ್ದು, ಆಸ್ತಿಗಳ ನಿಖರ ಮಾಹಿತಿ ಲಭ್ಯವಾಗಲಿದೆ. ಹೀಗಾಗಿ ಈ ವ್ಯವಸ್ಥೆ ಬೆಂಗಳೂರಿಗೆ ಅನ್ವಯ ಆಗುತ್ತದೆಯೇ ಎಂಬ ಕುರಿತು ಅಧ್ಯಯನ ನಡೆಸಲು ಪಾಲಿಕೆ ಮುಂದಾಗಿದ್ದು, ಆರ್‌ಎಫ್ಐಡಿ ವ್ಯವಸ್ಥೆ ಕುರಿತು ಮಾಹಿತಿ ನೀಡುವಂತೆ ವಿಜಯವಾಡ ಪಾಲಿಕೆಯನ್ನು ಕೋರಿದೆ. 

ಕ್ಯೂಆರ್‌ ಕೋಡ್‌ ಆರ್‌ಎಫ್ಐಡಿ ಟ್ಯಾಗ್‌ ವ್ಯವಸ್ಥೆ ಕುರಿತು ಮಾಹಿತಿ ನೀಡುವಂತೆ ವಿಜಯವಾಡ ನಗರ ಪಾಲಿಕೆಯನ್ನು ಕೋರಲಾಗಿದೆ. ಅದರಂತೆ ಈ ವ್ಯವಸ್ಥೆ ಬೆಂಗಳೂರಿಗೆ ಸರಿ ಹೊಂದುವುದೇ ಎಂಬ ಕುರಿತು ಅಧ್ಯಯನ ನಡೆಸಿ, ನಂತರ ಅಳವಡಿಸಿಕೊಳ್ಳುವ ಕುರಿತು ಆಯುಕ್ತರ ಜತೆ ಚರ್ಚಿಸಲಾಗುವುದು.
-ರಂದೀಪ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next