Advertisement

ಗರ್ಭಿಣಿಗೆ ಪೊಲೀಸರ ನೆರವು

03:29 PM Jan 01, 2020 | Team Udayavani |

ಗದಗ: ಹೆರಿಗೆ ನೋವು ಕಾಣಿಸಿಕೊಂಡು ಆಟೋ ಸಿಗದೇ ನರಳಾಡುತ್ತಿದ್ದ ಗರ್ಭಿಣಿಯೊಬ್ಬರನ್ನು ಪೊಲೀಸ್‌ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜಿಲ್ಲಾ ಪೊಲೀಸ್‌ ಇಲಾಖೆ ಮಾನವೀಯತೆ ಮೆರೆದಿದೆ.

Advertisement

ಡಿ. 30ರಂದು ಬೆಳಗಿನಜಾವ 3ರ ಸುಮಾರಿಗೆ ಬೆಟಗೇರಿಯ ಕಬಾಡಿ ಓಣಿಯ ಜ್ಯೋತಿ ರಾಘವೇಂದ್ರ ಕಬಾಡಿ ಎಂಬುವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತೆರಳಲು ಸಕಾಲಕ್ಕೆ ಆಟೋ ಸೇರಿದಂತೆ ಇತರೆ ಯಾವುದೇ ವಾಹನ ಲಭಿಸಲಿಲ್ಲ. ತಕ್ಷಣ ಆಸ್ಪತ್ರೆಗೆ ದಾಖಲಾಗದಿದ್ದರೆ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗುವ ಸಂಭವವಿತ್ತು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ನೆನಪಾಗಿದ್ದು ಜಿಲ್ಲಾ ಪೊಲೀಸ್‌ ಇಲಾಖೆ ಆರಂಭಿಸಿರುವ ಮಹಿಳಾ ಸಹಾಯವಾಣಿ. ತಕ್ಷಣ ಮೊ: 9480804400 ಗೆ ಕರೆ ಮಾಡಿ ನೆರವು ಕೋರಿದರು.

ಈ ಕುರಿತು ಕಂಟ್ರೋಲ್‌ ರೂಂ ಬೆಟಗೇರಿ ಗಸ್ತು ತಿರುಗುತ್ತಿದ್ದ ವಾಹನಕ್ಕೆ ಸಂದೇಶ ರವಾನಿಸಲಾಯಿತು. ಪೊಲೀಸ್‌ ಗಸ್ತು ಸಿಬ್ಬಂದಿ ಎಂ.ಬಿ. ಮೇಟಿ, ದಶರಥ ಎಂ. ಅವರು ಕೆಲವೇ ನಿಮಿಷಗಳಲ್ಲಿ ಗರ್ಭಿಣಿಯ ಮನೆ ತಲುಪಿದ ಪೊಲಿಸರು, ತಮ್ಮದೇ ಜೀಪ್‌ ನಲ್ಲಿ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಬಳಿಕ ಕೆಲವೇ ಸಮಯದಲ್ಲಿ ಆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹೈದ್ರಾಬಾದ್‌ ನಿರ್ಭಯಾ ಪ್ರಕರಣದಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್‌ ಇಲಾಖೆ, ರಾತ್ರಿ ಸಮಯದಲ್ಲಿ ಪರ ಊರುಗಳಿಂದ ಆಗಮಿಸುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಶ್ರೀನಾಥ ಜೋಶಿ ಆರಂಭಿಸಿರುವ ಈ ಯೋಜನೆಯಿಂದ ಗರ್ಭಿಣಿಯೊಬ್ಬರಿಗೆ ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next