ವಿಜಯಪುರ: ಕೋವಿಡ್ ರೋಗಿಗಳಿಗೆ ತುರ್ತು, ಅಗತ್ಯವಾಗಿ ನೀಡಬೇಕಿರುವ ರೆಮಿಡಿಸಿವಿರ್ ಲಸಿಕೆಯನ್ನು ಅಕ್ರಮವಾಗಿ ಪಡೆದು ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ಐವರನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಲಗುಂಬಜ ಠಾಣೆ ವ್ಯಾಪ್ತಿಯಲ್ಲಿ ರೆಮಿಡಿಸಿವಿರ್ ಲಸಿಕೆ ತನ್ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಲಭ್ಯ ಎಂದು ಶೃತಿ ಮಹೇಶ ಹಡಪದ ಎಂಬಾಕೆ ಕಾಳಸಂತೆ ದಂಧೆಯಲ್ಲಿ ತೊಡಗಿದ್ದಾಗಿ ಔಷದಿ ನಿಯಂತ್ರಣ ಇಲಾಖೆಯ ನೀಲಕಂಠ ತಾರು ರಾಠೋಡ ದೂರು ನೀಡಿದ್ದರು.
ಇದನ್ನು ಆಧರಿಸಿ ಗೋಲಗುಂಬಜ ಠಾಣೆಯ ಸಿಪಿಐ ಬಸವರಾಜ ಮೂಕರ್ತಿಹಾಳ, ಎಸೈ ಆರ್.ಎಸ್. ಲಮಾಣಿ ನೇತೃತ್ವದಲ್ಲಿ ಪೇದೆ ಫೈಜಲ್ ಶಬ್ಬೀರ ಇನಾಮದಾರ ಇವರನ್ನು ಸಮವಸ್ತ್ರ ರಹಿತರಾಗಿ ಕಳುಹಿಸಿ, ರೆಮಿಡಿಸಿವಿರ್ ಅಕ್ರಮ ಜಾಲದಲ್ಲಿದ್ದ ಐವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ: ಸಚಿವ ಸುಧಾಕರ್
ಬಂಧಿತರನ್ನು ಆನಂದ ಸೋಹನ್ ರುಣವಾಲ್, ಆದಿತ್ಯ ಅಣ್ಣಾರಾಯ ಜೋಶಿ, ವಿಜಯ ಪ್ರಭಾಕರ ದೇಶಪಾಂಡೆ, ಮಹ್ಮದ್ ಅಬ್ದುಲ್ ಆಲಂ ಮುಲ್ಲಾ, ಶೃತಿ ಹಡಪದ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.