ಚಿಕ್ಕಬಳ್ಳಾಪುರ: ತನ್ನ ಮಾಲೀಕತ್ವದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಯಾರು ದುಷ್ಕರ್ಮಿಗಳು ಬಾರ್ ಗೋಡೆ ಕೊರೆದು ಮದ್ಯ ಕಳುವು ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದ ಬಾರ್ ಮಾಲೀಕನೇ ಈಗ ಪೊಲೀಸರ ತನಿಖೆ ವೇಳೆ ಮದ್ಯ ಕಳುವು ಮಾಡಿ ಬಂಧನಕ್ಕೆ ಒಳಗಾಗಿರುವ ಪ್ರಸಂಗ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಈ ಸಂಬಂಧ ನಂದಿ ಗ್ರಾಮಾಂತರ ಠಾಣೆ ಪೊಲೀಸರು ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ, ಹಾಲಿ ನಗರಸಭಾ ಸದಸ್ಯ ಕಂದವಾರದ ನಿವಾಸಿ ದೀಪಕ್ ಕೆ.ಆರ್. ನನ್ನು ಬಂಧಿಸಿದ್ದು ಇತನ ಕೃತ್ಯಕ್ಕೆ ಸಹಕರಿಸಿರುವ ಆತನ ಸ್ನೇಹಿತರಾದ ಕಂದವಾರದ ವಿಜಯ್, ಸಂತೋಷ್ ಸೇರಿ ನಾಲ್ವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಹಿನ್ನಲೆ: ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಮಾ.22 ರಿಂದ ಲಾಕ್‌ಡೌನ್ ಘೋಷಣೆ ಮಾಡಿದ್ದು ಇದರಿಂದ ಬಾರ್‌ಗಳು ಮದ್ಯ ಮಾರಾಟ ಮಾಡದೇ ಬಂದ್ ಆಗಿವೆ. ಇದರ ನಡುವೆ ಕಳೆದ ಏ.30 ರಂದು ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ದೀಪಕ್, ತಮ್ಮ ಬಾರ್‌ನಲ್ಲಿ ಮದ್ಯ ಕಳುವು ಆಗಿದೆಯೆಂದು ನಂದಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಹಲವು ಮಹತ್ವದ ಸಾಕ್ಷ್ಯಧಾರಗಳ ಸಿಕ್ಕ ಹಿನ್ನಲೆಯಲ್ಲಿ ಪೊಲೀಸರು ಬಾರ್ ಮಾಲೀಕ ದೀಪಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ನಡೆಸಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿ ಕೊಂಡಿದ್ದಾನೆ. ಬಾರ್‌ನ ಗೋಡೆ ಕೊರೆದು 29 ಕ್ರೇಟುಗಳಲ್ಲಿದ್ದ 80 ಸಾವಿರ ಮೌಲ್ಯದ ಮದ್ಯವನ್ನು ಕಳುವು ಮಾಡಿ ನಿಗಧಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಾಹನಗಳ ಜಪ್ತಿ: ದ್ವಿಚಕ್ರ ವಾಹನಗಳು, ಮೊಬೈಲ್, ಗೋಡೆ ಕೊರೆಯುವ ಹಾರೆ ಸೇರಿದಂತೆ ಅಕ್ರಮವಾಗಿ ಮಾರಾಟ ಮಾಡಿ ಗಳಿಸಿದ ನಗದನ್ನು ನಂದಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರು ತನಿಖೆ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಿಸಿದ ಆಟೋ, ದ್ವಿಚಕ್ರ ವಾಹನ, ಮೊಬೈಲ್, ಗಳಿಸದ ಹಣ ವಶಪಡಿಸಿಕೊಂಡಿದ್ದಾರೆ