Advertisement

ವಿದ್ಯಾರ್ಥಿನಿಯರಿಂದ ಪೊಲೀಸರಿಗೆ ರಕ್ಷಾ ಬಂಧನ

03:18 PM Aug 27, 2018 | |

ವಿಜಯಪುರ: ಮಹಾರಾಷ್ಟ್ರದ ಗಡನಾಡ ಕನ್ನಡದ ಜತ್ತ ತಾಲೂಕು ಉಮದಿ ಕಾಲೇಜಿನ ವಿದ್ಯಾರ್ಥಿನಿಯರು ನಿತ್ಯವೂ ತಮ್ಮನ್ನು ರಕ್ಷಿಸುವವ ಪೊಲೀಸರಿಗೆ ರಾಖೀ ಕಟ್ಟಿ ರಕ್ಷಾ ಬಂಧನ ಹಬ್ಬ ವಿಶಿಷ್ಟವಾಗಿ ಆಚರಿಸಿದರು. ಉಮದಿ ಪಟ್ಟಣದ ಲೀಡರ್ ಎಕ್ಸಲ್‌ರೇಟಿಂಗ್‌ ಡೆವಲೆಪಮೆಂಟ್‌ ಪ್ರೋಗ್ರಾಂ ಸರ್ವೋದಯ ಮಹಾವಿದ್ಯಾಲಯ ಉಪನ್ಯಾಸಕಿ ಶೀತಲ್‌ ನೇತೃತ್ವದಲ್ಲಿ 20 ವಿದ್ಯಾರ್ಥಿನಿಯರ ತಂಡ ರಕ್ಷಾ ಬಂಧನ ಆಚರಿಸಿದರು.

Advertisement

ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಹಲವಾರು ವ್ಯಕ್ತಿಗಳು ನಿತ್ಯವೂ ನಮ್ಮನ್ನು ರಕ್ಷಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಪೊಲೀಸರಂತೂ ಪ್ರತಿ ಕ್ಷಣವೂ ಸಮಾಜದ ರಕ್ಷಣೆಗೆ ತಮ್ಮನ್ನು ಮುಡಿಪಾಗಿಸಿಕೊಂಡಿರುತ್ತಾರೆ. ಅವರನ್ನು ಇಂಥ ಸಂದರ್ಭದಲ್ಲಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ವಿದ್ಯಾರ್ಥಿನಿಯರು ಹೇಳಿದರು. ಆರ್‌.ಪ್ರೀಯಾಂಕಾ ಮಾತನಾಡಿ, ಒಂದಿಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ಆದರ್ಶಪ್ರಾಯದ ಮೌಲಿಕ ಮಾರ್ಗದರ್ಶನ ನೀಡುತ್ತಿರುವ ದೇಶ ಸೇವಕರೊಂದಿಗೆ ರಕ್ಷಾಬಂಧನ ಆಚರಿಸುತ್ತಿರುವುದು ಸಂತಸ ಮೂಡಿಸಿದೆ ಎಂದರು.

ವಿದ್ಯಾರ್ಥಿ ಪ್ರಕಾಶ ಪರೀಟ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಸೇವೆ ತಲುಪಬೇಕಿದೆ. ಪ್ರಸ್ತುತ
ಆಧುನಿಕತೆ ಭರಾಟೆಯ ಜೀವನ ಶೈಲಿಯಲ್ಲಿ ಭಾರತೀಯ ಯುವ ಸಮೂಹ ಭಾತೃತ್ವದ ಸಂಸ್ಕೃತಿ ರಕ್ಷಣೆ ಹಾಗೂ
ಪರಿಪಾಲನೆ ಇಲ್ಲದಂತಾಗಿದೆ. ಈ ಪರಂಪರೆ ಮತ್ತೆ ಕಟ್ಟಿಕೊಡಲು ರಕ್ಷಾ ಬಂಧನ ಜನಮಾನಸದಲ್ಲಿ ಮತ್ತೆ ಬೆರೆಯುವುದು ಇಂದಿನ ಅಗತ್ಯವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ರಾಣಿ ಮಾಶ್ಯಾಳ, ಶಿಲ್ಪಾ ಮಾಳಿ, ಎಸ್‌.ಎಂ. ವಾಲೀಕಾರ, ಶ್ರುತಿ ಬಡಿಗೇರ, ರೇಷ್ಮಾ ಕೋಳಿ, ವೈಷ್ಣವಿ ಸಾವಂತ, ಸಚೀನ, ಪ್ರವೀಣ ವಾಲೀಕಾರ ಇದ್ದರು.

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಣ್ಣ-ತಂಗಿಯರ ಹಬ್ಬವಾದ ರಕ್ಷಾ ಬಂಧನವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ರವಿವಾರ ಪಟ್ಟಣದಲ್ಲಿ ಪ್ರತಿಯೊಬ್ಬರೂ ಬೆಳಗ್ಗೆ ಮನೆಯಲ್ಲಿ ಸಹೋದರ ಸಹೋದರತೆ ಸಂಬಂಧ ಬೆಸೆಯುವ ರಕ್ಷಾ ಬಂಧನವನ್ನು ತಂಗಿ ಅಣ್ಣನಿಗೆ, ಅಕ್ಕ ತಮ್ಮನಿಗೆ ರಾಖೀ ಕಟ್ಟುವ ಮೂಲಕ ಆಚರಿಸಿದರು.

Advertisement

ಮುದ್ದೇಬಿಹಾಳ ರಸ್ತೆಯ ಅಗ್ನಿಶಾಮಕ ಠಾಣೆಯಲ್ಲಿ ಡಾ.ನೀರಜ್‌ ಪಾಟೀಲ ಅಭಿಮಾನಿ ಬಳಗದಿಂದ ರಕ್ಷಾ ಬಂಧನ ಕಾರ್ಯಕ್ರಮ ಜರುಗಿತು. ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ರಾಖೀ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ ಮಾತನಾಡಿ, ಆಧುನಿಕ ಯುಗದಲ್ಲಿ ಮೊಬೈಲ್‌, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳಿಂದ ನಮ್ಮ ಸಂಪ್ರದಾಯ, ಸಂಸ್ಕೃತಿ ಮರೆಯಾಗುತ್ತಿದ್ದು ಸಂಬಂಧದ ಸಹೋದರತೆ ಬೆಳೆಯಬೇಕಾದರೆ, ಭಾರತೀಯ ಸಂಸ್ಕೃತಿ ಹಬ್ಬಗಳನ್ನು ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನ್ಯಾಯವಾದಿ ಪ್ರಕಾಶ ಹೊಸಮನಿ, ಬ್ರಹ್ಮ ಕುಮಾರಿಯ ಭಾವನಾ ಅಕ್ಕನವರು, ಶರಣು ಕಾಟಕರ, ಡಾ| ಅಮರೇಶ ಮಿಣಜಗಿ ಇದ್ದರು. ಅಗ್ನಿಶಾಮಕ ಠಾಣಾಧಿಕಾರಿ ಎಸ್‌.ಶಿವಕುಮಾರ ಅಧ್ಯಕ್ಷತೆವಹಿಸಿದ್ದರು. ಕಾಶೀನಾಥ ಅವಟಿ ನಿರೂಪಿಸಿದರು.

ಅನಾಥಾಶ್ರಮದಲ್ಲಿ ಆಚರಣೆ
ವಿಜಯಪುರ:
ಜೈ ಭೀಮ ಸೇನಾ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ರಕ್ಷಾ ಬಂಧನ ಆಚರಿಸಿದರು. ಆಶ್ರಮದಲ್ಲಿರುವ ಮಕ್ಕಳಿಗೆ ರಾಖೀ ಕಟ್ಟಿ, ಸಿಹಿ ಹಂಚಿ ಮಕ್ಕಳ ಮನದಲ್ಲಿ ಸಹೋದರ ಬಾಂಧವ್ಯದ ಭಾವ ಮೂಡಿಸಿದರು.

ಈ ವೇಳೆ ಮಾತನಾಡಿದ ಜೈ ಭೀಮ ಸಂಘಟನೆ ಸಂಚಾಲಕ ಸಂತೋಷ ಭಾಸ್ಕರ್‌, ಸದರಿ ಆಶ್ರಮದಲ್ಲಿರುವ ಪ್ರತಿ ಮಗುವೂ ಸಮಾಜದ ಮಗು. ಹೀಗಾಗಿ ಇಲ್ಲಿನ ಮಕ್ಕಳಿಗೆ ಅನಾಥಪ್ರಜ್ಞೆ ಮೂಡದಂತೆ ಅವರನ್ನು ಸಮಾಜದ
ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಹೊಣೆ. ಹೀಗಾಗಿ ಹಬ್ಬ ಹಾಗೂ ಇತರೆ ಸಂದರ್ಭದಲ್ಲಿ ಇಂಥ ಮಕ್ಕಳೊಂದಿಗೆ ಸಂಭ್ರಮಿಸಿದರೆ ಆ ಮಕ್ಕಳಲ್ಲಿ ಕೀಳರಿಮೆ ದೂರವಾಗಲಿದೆ ಎಂದರು.

ಜೈ ಭೀಮ ಮಹಿಳಾ ಸೇನೆಯ ಅಶ್ವಿ‌ನಿ ಕಾಲೇಬಾಗ, ಪ್ರವೀಣ ಚವಡಿಕರ, ಸಚಿನ್‌ ಕಾಂಬಳೆ, ರುದ್ರಪ್ಪ ಕೊಳ್ಳದ, ಸುನಿಲ ಹೊಸಳ್ಳಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next