Advertisement

12 ಗಂಟೆಯಲ್ಲಿ ಕೊಲೆ-ಅತ್ಯಾಚಾರ ಆರೋಪಿಗಳ ಸೆರೆ

04:51 PM Jun 03, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಶಿಗ್ಗಾವಿಯಲ್ಲಿ ಬುಧವಾರ ಹಲ್ಲೆ ಮಾಡಿ ಕೊಲೆಗೈದ ಆರೋಪಿಗಳು, ಆಡೂರು ಠಾಣೆ ವ್ಯಾಪ್ತಿಯಲ್ಲಿ ವಿಕಲಚೇತನ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು 12 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವಿಧ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಶಿಗ್ಗಾವಿ ಎಪಿಎಂಸಿ ಬಳಿ ಲಾರಿ ಗ್ರೀಸಿಂಗ್‌ ಮಾಡುತ್ತಿದ್ದ ಉಮೇಶ ಶಿವಜೋಗಿಮಠ ಎಂಬುವರ ಮೇಲೆ ಅಲ್ಲಿ ಸರಗೋಲ ಆಟವಾಡುತ್ತಿದ್ದವರು ಹಲ್ಲೆ ನಡೆಸಿ ಹತ್ಯೆಗೈದಿದ್ದರು.

ಪ್ರಕರಣದ ಆರೋಪಿಗಳಾದ ಜಕ್ಕನಕಟ್ಟಿ ಗ್ರಾಮದ ಅಲಪಾಜ, ಜಾರ್ಫ್‌ ನೂರಿ, ಖಾಜಾ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರು ಸೇರಿದಂತೆ 6 ಜನ ಆರೋಪಿಗಳನ್ನು ಬಂ ಧಿಸಲಾಗಿದೆ. ಉಮೇಶ ಅವರು ಚಾಲಕ ಸಂತೋಷ ಲಮಾಣಿಯೊಂದಿಗೆ ಲಾರಿ ಗ್ರೀಸಿಂಗ್‌ ಮಾಡುತ್ತಿದ್ದಾಗ ಸರಗೋಲ ಆಡುತ್ತಿದ್ದ ವೇಳೆ ಲಾರಿಗೆ ಕೋಲು ಬಡಿದಿದೆ.

ಇದನ್ನು ಪ್ರಶ್ನಿಸಿದ ಉಮೇಶನೊಂದಿಗೆ ವಾಗ್ವಾದ ನಡೆಸಿದ ಆರೋಪಿಗಳು, ಕೊರಳು ಪಟ್ಟಿಗೆ ಕೈ ಹಾಕಿ ಹಿಚುಕಿ ಟಿಪ್ಪರ್‌ ಗೆ ದೂಡಿ, ಬಡಿಗೆಯಿಂದ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದರು. ಗಾಯಗೊಂಡಿದ್ದ ಉಮೇಶನನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಈ ಕುರಿತು ಆರೋಪಿಗಳ ಪತ್ತೆಗೆ 3 ತಂಡಗಳನ್ನು ರಚಿಸಲಾಗಿತ್ತು. ಕೇವಲ 12 ಗಂಟೆಯೊಳಗಾಗಿ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಶಿಗ್ಗಾವಿ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದ ಶೂಟೌಟ್‌ ಪ್ರಕರಣದಲ್ಲಿ ಆರೋಪಿಗೆ ಪಿಸ್ತೂಲ್‌ ಪೂರೈಸಿದ್ದ ಬಿಹಾರದ ಮೂವರು ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ ಎಂದರು.

Advertisement

ಶಿಗ್ಗಾವಿ ತಾಲೂಕು ಹುಲಗೂರು ಗ್ರಾಮದಲ್ಲಿ ಸಲ್ಮಾಬಾನು ಅಬ್ದುಲಖಾದರ್‌ ಮುಲ್ಲಾನವರ ಎಂಬುವಳ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಗಳನ್ನು ಬಂಧಿ ಸಲಾಗಿದೆ. ಆಕೆಯ ಪತಿಯೇ ಮತ್ತೂಂದು ಮದುವೆಯಾಗಲು ಕೊಲೆ ಸಂಚು ನಡೆಸಿರುವುದು ಗೊತ್ತಾಗಿದೆ. ಪ್ರಮುಖ ಆರೋಪಿ ಅಬ್ದುಲಖಾದರ್‌ ಮುಲ್ಲಾನವರ ಕೊಲೆ ಮಾಡಲು ಸಂಚು ರೂಪಿಸಿ, ತನ್ನ ಅಳಿಯ ದಾವಲಸಾಬ ಸೈದಲ್ಲಿ ಮತ್ತು ಮೌಲಾಲಿ ಬೆಂಡಿಗೇರಿಯೊಂದಿಗೆ ಸೇರಿ ಸಲ್ಮಾಬಾನುಳ ಕೊಲೆಗೆ ಮುಂದಾಗಿದ್ದರು. ಇವರಿಬ್ಬರೂ ಕೊಲೆ ಮಾಡಲು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಬ್ದುಲ್‌ ಖಾದರ್‌ನ ಹೇಳಿಕೆ ಆಧರಿಸಿ ದಾವಲನನ್ನು ಕಾರವಾರ ಪೊಲೀಸರು ಬಂಧಿಸಿ ಬಂದೂಕು ಜಪ್ತಿ ಮಾಡಿದ್ದಾರೆ. ಮೌಲಾಲಿಯನ್ನು ಬೆಂಗಳೂರಿನ ವಿಜಯನಗರದಲ್ಲಿ ಪತ್ತೆ ಹಚ್ಚಿ ಬಂ ಧಿಸಲಾಗಿದೆ. ಸಲ್ಮಾಳನ್ನು ಕೊಲೆ ಮಾಡಲು ಇವರು 3-4 ಬಾರಿ ಹುಲಗೂರಿಗೆ ಹೋಗಿದ್ದರು. ಮೇ 25ರಂದು ಸಲ್ಮಾಬಾನು ಮನೆಯ ಕಟ್ಟೆಯ ಮೇಲೆ ಕುಳಿತಾಗ ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆಂದು ಮಾಹಿತಿ ನೀಡಿದರು.

ಆಡೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತಿಳವಳ್ಳಿಯಲ್ಲಿ ಮನೆಯ ಮುಂದೆ ಕುಳಿತಿದ್ದ ವಿಕಲಚೇತನ ಮಹಿಳೆಯನ್ನು ಒಳಗೆ ಎತ್ತುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪರಶುರಾಮ ಮಡಿವಾಳರ, ಪರಾರಿಯಾಗಿದ್ದ ಶಿಕಾರಿಪುರದ ಯಶವಂತ ಬೆಣಗೇರಿ ಹಾಗೂ ಆತನಿಗೆ ಆಶ್ರಯ ನೀಡಿದ ಬಸವಂತಪ್ಪ ಶ್ಯಾಡಗುಪ್ಪಿ ಎಂಬುವರನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದ ಆರೋಪಿಗಳನ್ನು ಧರ್ಮಸ್ಥಳದಲ್ಲಿ ಪತ್ತೆಹಚ್ಚಿ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣವನ್ನೂ ಶೀಘ್ರದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಹಾನಗಲ್ಲ ಗಂಗಾನಗರದ ಪಾರ್ವತಿ ಎಂಬುವಳು ಮೇ 31ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದಾಖಲಾದ ಪ್ರಕರಣವನ್ನು ಭೇದಿಸಲಾಗಿದೆ. ಈ ಪ್ರಕರಣದಲ್ಲಿ ಆಕೆಯ ಪತಿ ರಾಜೇಶ ಹುಲಮನಿ ಎಂಬಾತ ಪ್ರೀತಿಸಿ ಮದುವೆಯಾಗಿದ್ದ ಪಾರ್ವತಿಯನ್ನು ವರದಕ್ಷಿಣೆ ಕಿರುಕುಳ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿ ನಂತರ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ. ತನಿಖೆ ವೇಳೆ ಕೊಲೆ ಮಾಡಿರುವುದು ಗೊತ್ತಾಗಿದೆ. ಬುಧವಾರ ಆರೋಪಿ ರಾಜೇಶನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶಸ್ತ್ರಾಸ್ತ್ರ ಪರವಾನಗಿ ಪಡೆದವರನ್ನು ವಿಚಾರಿಸಲಾಗುವುದು. ಕ್ರಿಮಿನಲ್‌ ಹಿನ್ನೆಲೆ ಇರುವವರ ಮನೆ ಜಾಲಾಡಲಾಗುವುದು. ಇಂಥ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅಪರಾಧ ಚಟುವಟಿಕೆ ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕೆಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ, ವಿವಿಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಶಿಗ್ಗಾವಿ ಡಿವೈಎಸ್ಪಿ ಎಂ.ಎಸ್‌.ಪಾಟೀಲ, ಇನ್ಸ್‌ಪೆಕ್ಟರ್‌ಗಳಾದ ಬಸವರಾಜ ಹಳಬಣ್ಣನವರ, ಮಹಂತೇಶ ಲಂಬಿ, ದೇವಾನಂದ, ಎಸ್‌.ಆರ್‌.ಗಣಾಚಾರಿ, ಪಿಎಸ್‌ ಐಗಳಾದ ಸಂತೋಷ ಪಾಟೀಲ, ಮಹಾಂತೇಶ ಎಂ.ಎಂ., ಯಲ್ಲಪ್ಪ ಹಿರಗಣ್ಣನವರ, ಪರಶುರಾಮ ಕಟ್ಟಿಮನಿ, ಎಂ.ಎಂ. ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಇದ್ದರು.

82 ಮೊಬೈಲ್‌ ವಶ: ಕಳ್ಳತನ ಮಾಡಿದ್ದ 82 ಮೊಬೈಲ್‌ಗ‌ಳನ್ನು ತಡಸ ಕಡೆಯಿಂದ ಹಾನಗಲ್ಲ ತಾಲೂಕು ಹುಲಗಿನಕೊಪ್ಪಕ್ಕೆ ಬೈಕ್‌ನಲ್ಲಿ ಸಾಗಿಸುತ್ತಿದ್ದ ಹುಲಗಿನಕೊಪ್ಪ ಗ್ರಾಮದ ಆನಂದ ಈಶ್ವರ ದೊಡ್ಡಮನಿ ಎಂಬಾತನನ್ನು ಬಂಧಿ ಸಲಾಗಿದೆ. ಇವುಗಳ ಒಟ್ಟು ಅಂದಾಜು ಮೊತ್ತ 4 ಲಕ್ಷ ರೂ. ಆಗಿದ್ದು, ಹೈದಾರಾಬಾದ್‌ ಕಡೆ ಕಳ್ಳತನ ಮಾಡಿದ್ದ ಮೊಬೈಲ್‌ಗ‌ಳನ್ನು ಹುಲಗಿನಕೊಪ್ಪದ ಇನ್ನಿತರ ಸಹಚರರು ಮಾರಾಟ ಮಾಡುತ್ತಿದ್ದರು. ಈ ಭಾಗದ ಜಾತ್ರೆ, ಸಂತೆ, ಸಮಾವೇಶಗಳಲ್ಲಿ ಕಳ್ಳತನ ಮಾಡುವ ಮೊಬೈಲ್‌ಗ‌ಳನ್ನು ಮುಂಬೈ, ಪುಣೆ ಮುಂತಾದ ಕಡೆ ಇರುವ ಸಹಚರರಿಗೆ ಸಾಗಿಸುವ ದೊಡ್ಡ ಜಾಲವೇ ಇದೆ. ಇದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುವುದೆಂದು ಎಸ್ಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next