ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ 2 ದಿನಗಳ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರರಾವ್ ಚಾಲನೆ ನೀಡಿದರು.
ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಮಾತನಾಡಿ, ಪೊಲೀಸ್ ವೃತ್ತಿಯಲ್ಲಿ ಕ್ರೀಡಾಸ್ಪೂರ್ತಿ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ನಾವುಗಳು ಪೊಲೀಸ್ ಅಧಿಕಾರಿ, ಸಿಬ್ಬಂದಿಯಾಗುವ ಮೊದಲು ಕ್ರೀಡಾಪಟುವಾಗಿರುತ್ತೇವೆ.
ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಕೂಟ ಎಂಬುದು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಹಬ್ಬವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಧರ್ಮವಿಲ್ಲ, ನಮಗೆ ಖಾಕಿ ಧರ್ಮ, ಖಾಕಿಯೇ ಜಾತಿ ಎಂದರು.
ತಮ್ಮ ವೃತ್ತಿಯಲ್ಲಿ ಸದಾ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸದ ಒತ್ತಡಗಳನ್ನು ಬದಿಗಿಟ್ಟು ಕ್ರೀಡಾಕೂಟದಲ್ಲಿ ಅತ್ಯುತ್ಸಾಹದಿಂದ ಭಾವಹಿಸಿದ್ದರು. ಎರಡು ದಿನಗಳ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆ, ಗುಂಡು ಎಸೆತ, ಸ್ಲೋ ಬೈಕ್ ರೈಡಿಂಗ್ ಇನ್ನಿತರ ಸ್ಪ$ರ್ಧೆಗಳು ನಡೆಯಿತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಕರ್ನಾಟಕ ಪೊಲೀಸ್ ಅಕಾಡೆಮಿ ಪ್ರಾಂಶುಪಾಲರಾದ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವಹಿಸಿದ್ದರು.