Advertisement
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳದ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯು ಇತ್ತೀಚೆಗಷ್ಟೇ ಪುನರ್ ನಿರ್ಮಾಣಗೊಂಡು, ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ಆಕರ್ಷಿಸುತ್ತಿದೆ. ನೀವು ಈ ದೇವಾಲಯಕ್ಕೆ ಹೋದರೆ, ದೇವರ ಜೊತೆಗೆ ಗರ್ಭಗುಡಿಯ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸುವುದನ್ನು ಮರೆಯಬೇಡಿ.
Related Articles
Advertisement
ಗರ್ಭಗೃಹದ ನಿರ್ಮಾಣಕ್ಕೂ ಸಾಂಪ್ರದಾಯಿಕ ಶೈಲಿಯನ್ನೇ ಅನುಸರಿಸಲಾಗಿದೆ. ಅಂದರೆ, ಸುರಥ ಮಹಾರಾಜನ ಕಾಲದಲ್ಲಿ ಯಾವ ವಸ್ತುಗಳನ್ನು ಬಳಸಲಾಗಿದೆಯೋ ಅದೇ ರೀತಿ ಈಗಿನ ನಿರ್ಮಾಣವನ್ನು ಮಾಡಲಾಗಿದೆ. ಗರ್ಭಗುಡಿಗೆ ಒಂದೇ ಜಾತಿಯ ಮರವನ್ನು ಉಪಯೋಗಿಸಿರುವುದೂ ಇನ್ನೊಂದು ವಿಶೇಷ.
ಗರ್ಭಗುಡಿಯ ಹೊರಭಾಗದಲ್ಲಿ ಹಾಗೂ ಕೆಳಗಿನ ಕಲ್ಲಿನ ಭಾಗದಲ್ಲಿ ಕ್ಷೇತ್ರದ ಇತಿಹಾಸ ಸಾರುವ ಕೆತ್ತನೆಯ ಚಿತ್ರಗಳನ್ನು ಬಳಸಲಾಗಿದೆ. ಇಂಥ ಕೆತ್ತನೆಗಳು ಕ್ಷೇತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ವಾಸ್ತುಶಿಲ್ಪಿ ಮಹೇಶ ಭಟ್ ಮುನಿಯಂಗಳ ಅವರು ವಿವರಿಸುತ್ತಾರೆ.
ಅತ್ಯಂತ ಎತ್ತರ ಹಾಗೂ ವಿಶಿಷ್ಟ ಮೃಣ್ಮಯ(ಮಣ್ಣಿನ) ಮೂರ್ತಿಯಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಹಿಂದೆ, ಕಡುಗೆಂಪು ವರ್ಣದಲ್ಲಿ ಶೋಭಿಸುತ್ತಿದ್ದಳು. ಆದರೆ ಈಗ ತಾಯಿ ಚಂದನ ವದನಾರಿಯಾಗಿ ಭಕ್ತರನ್ನು ಹರಸುತ್ತಿದ್ದಾಳೆ. ಕಡುಶರ್ಕರ ಲೇಪನದ ಮೂಲಕ ದೇವಿಯ ಮುಖವರ್ಣಿಕೆಯು ವಿಶೇಷ ರೀತಿಯಲ್ಲಿ ಕಂಗೊಳಿಸುತ್ತಿದೆ.
ಹಿಂದೆ ದೇವಿಯನ್ನು ಲೇಪಾಷ್ಟಬಂಧ ಲೇಪನದಿಂದ ಸಿಂಗಾರಗೊಳಿಸಲಾಗುತ್ತಿತ್ತು. ಅಂದರೆ ಪ್ರಾಕೃತಿಕವಾಗಿ ಲಭ್ಯವಾಗುವ 8 ವಿಧದ ಮಣ್ಣು ಸೇರಿದಂತೆ 64 ದ್ರವ್ಯಗಳ ಮೂಲಕ ಲೇಪಾಷ್ಟಬಂಧವನ್ನು ತಯಾರಿಸಲಾಗುತ್ತಿತ್ತು. ಈ ರೀತಿಯ ಲೇಪನದಿಂದ ದೇವಿಯು ಕಡುಕೆಂಪು ವರ್ಣದಲ್ಲಿ ಕಂಗೊಳಿಸುತ್ತಿದ್ದಳು. ಆದರೆ ಜೀರ್ಣೋದ್ಧಾರದ ಸಂದರ್ಭದಲ್ಲಿ ತಜ್ಞ ಕೃಷ್ಣ ನಂಬೂದಿರಿಪಾಡ್ ಹಾಗೂ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಕೇರಳ ತಜ್ಞರು ಕಡುಶರ್ಕರ ಲೇಪನ ಮುಖೇನ ದೇವಿಯ ಮುಖವರ್ಣಿಕೆ ಚಿತ್ರಿಸಿದ್ದಾರೆ.
ಕಡುಶರ್ಕರ ತಯಾರಿ ಹೀಗೆ…
ಸುಮಾರು 64 ಬಗೆಯ ಗಿಡ ಮೂಲಿಕೆಗಳ ಕಷಾಯವನ್ನು ತಯಾರಿಸಿ 45 ದಿನಗಳ ಕಾಲ ಇಡಲಾಗುತ್ತದೆ. ಜತೆಗೆ 32 ಬಗೆಯ ಮಣ್ಣನ್ನು ಕೂಡ ಹದ ಮಾಡುವುದಕ್ಕೆಂದು, 45 ದಿನಗಳ ಕಾಲ ಮುಚ್ಚಿ ಇಡಲಾಗುತ್ತದೆ. ಮುಂದೆ ಬೆಳ್ಳಿ, ಚಿನ್ನ, ತಾಮ್ರ ಸಹಿತ ಪಂಚಲೋಹದ ಹುಡಿಯನ್ನು ಮಿಶ್ರಣಗೊಳಿಸಲಾಗುತ್ತದೆ. ಈ ರೀತಿಯಲ್ಲಿ ಕಡುಶರ್ಕರ ಸಿದ್ಧವಾಗುತ್ತದೆ.
ಮುಂದೆ ಮೃಣ್ಮಯ ಮೂರ್ತಿಯ ಹಾನಿಯಾದ ಭಾಗಕ್ಕೆ ಕಡುಶರ್ಕರ ಲೇಪನ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಇದು ಪೂರ್ತಿಗೊಂಡ ಬಳಿಕ ಬಿಳಿ, ಹಳದಿ, ಕಪ್ಪು, ಕೆಂಪು, ಹಸಿರು ಬಣ್ಣದ ಮೂಲಕ ಮೂರ್ತಿಯ ಮುಖವನ್ನು ಸಿಂಗಾರಗೊಳಿಸಲಾಗುತ್ತದೆ. ಇದರ ಕುರಿತು ತಂತ್ರ ಸಂಶಯ, ಕುಳಿಕ್ಕಾಟು ಪಚ್ಚ ಗ್ರಂಥದಲ್ಲಿ ಉಲ್ಲೇಖವಿದೆ.
ಉತ್ತರ ಭಾರತದ ಹಿಮಾಲಯ ಸೇರಿದಂತೆ ದೇಶದ ಹಲವು ಕಡೆಗಳ ಅಪರೂಪದ ಗಿಡಮೂಲಿಕೆ, ನದಿ, ಸಮುದ್ರ, ಗದ್ದೆಯ ಆಳದ ಮಣ್ಣು, ಆವೆ, ಹುತ್ತದ ಮಣ್ಣು, ಗಜ ಮೃತ್ತಿಕೆ, ಗೋವಿನ ಮೃತ್ತಿಕೆ ಸಹಿತ ಹಲವು ವಸ್ತುಗಳ ಮೂಲಕ ಕಡುಶರ್ಕರವನ್ನು ತಯಾರಿಸಲಾಗಿದೆ. ವಿಶೇಷವೆಂದರೆ ಸುಮಾರು 3 ತಿಂಗಳ ಪರಿಶ್ರಮದ ಮೂಲಕ ಈ ಲೇಪನ ತಯಾರಿಸಲಾಗುತ್ತದೆ.
ಕಿರಣ್ ಸರಪಾಡಿಚಿತ್ರಗಳು- ಸತೀಶ್ ಇರಾ