ನವದೆಹಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ನಂತರ ಕೊನೆಯ ಪ್ರಯತ್ನ ಎಂಬಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಫ್ಲಾಪ್ ಶೋ ಎಂದು ಪಿಒಕೆ ಸಾಮಾಜಿಕ ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಖಾನ್ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಎಎನ್ ಐ ನ್ಯೂಸ್ ಏಜೆನ್ಸಿ ಜತೆ ಮಾತನಾಡುತ್ತ, ಮುಜಾಫರಬಾದ್ ನಲ್ಲಿ ಇಮ್ರಾನ್ ಖಾನ್ ನಡೆಸಿದ ಬೃಹತ್ ಸಮಾವೇಶಕ್ಕೆ ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಜನರನ್ನು ಕರೆತಂದಿರುವುದಾಗಿ ಆರೋಪಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಮ್ರಾನ್ ಆಯೋಜಿಸಿದ್ದ ಸಮಾವೇಶ ಜನರಿಲ್ಲದೆ ಖಾಲಿ, ಖಾಲಿಯಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಲಾರಿಗಳಲ್ಲಿ ಜನರನ್ನು ಕರೆತಂದಿದ್ದರು ಎಂದು ಮಿರ್ಜಾ ಮಾಹಿತಿ ನೀಡಿದ್ದಾರೆ.
ಪಿಒಕೆ ಜನರು ಇಮ್ರಾನ್ ಸಮಾವೇಶಕ್ಕೆ ಬೆಂಬಲ ನೀಡಿಯೇ ಇಲ್ಲ:
ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಬಲಪ್ರದರ್ಶನ ನಡೆಸಲು ಇಮ್ರಾನ್ ಖಾನ್ ಕರೆಕೊಟ್ಟಿದ್ದ ಸಮಾವೇಶಕ್ಕೆ ಪಿಒಕೆ ಜನರು ಭಾಗವಹಿಸಿರಲಿಲ್ಲವಾಗಿತ್ತು. ಈ ಪ್ರದೇಶದಲ್ಲಿ ಪಾಕ್ ಸರಕಾರ ನಡೆಸಿದ್ದ ದೌರ್ಜನ್ಯ ಖಂಡಿಸಿ ರಾಲಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು ಎಂದು ಮಿರ್ಜಾ ಹೇಳಿದರು.
ಇಮ್ರಾನ್ ಖಾನ್ ಸಮಾವೇಶವನ್ನು ಬಹಿಷ್ಕರಿಸಿರುವ ಪಾಕ್ ಆಕ್ರಮಿತ ಕಾಶ್ಮೀರ ಜನರ ದಿಟ್ಟ ನಿರ್ಧಾರಕ್ಕೆ ಇಡೀ ವಿಶ್ವವೇ ಅಭಿನಂದನೆ ಹೇಳಿದೆ ಎಂದರು.
ಗೋ ಬ್ಯಾಕ್ ಇಮ್ರಾನ್ ಖಾನ್:
ಅಷ್ಟೇ ಅಲ್ಲ ಇತ್ತೀಚೆಗೆ ಇಮ್ರಾನ್ ಖಾನ್ ಮುಜಾಫರಬಾದ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ನೂರಾರು ಮಂದಿ ಗೋ ಬ್ಯಾಕ್ ಇಮ್ರಾನ್ ಖಾನ್ ಎಂದು ಘೋಷಣೆ ಕೂಗಿದ್ದು, ಇದರಿಂದ ಭಾರೀ ಮುಖಭಂಗಕ್ಕೊಳಗಾದ ಘಟನೆ ನಡೆದಿತ್ತು.