Advertisement

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

12:31 AM May 15, 2024 | Team Udayavani |

ಪಾಕಿಸ್ಥಾನ ಸರಕಾರದ ವಿರುದ್ಧ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ಜನರು ಅಕ್ಷರಶಃ ದಂಗೆ ಎದ್ದಿದ್ದಾರೆ. ಅವರ ಪ್ರತಿಭಟನೆ ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಿಂಸಾಚಾರದಲ್ಲಿ ಮತ್ತೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಪಿಒಕೆ ಜನರ ಪ್ರತಿಭಟನೆ, ಅದರ ಹಿಂದಿರುವ ಕಾರಣಗಳು, ಪರಿಣಾಮಗಳು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ಪಾಕಿಸ್ಥಾನ್‌ ಸೇ ಲೇಂಗೇ ಆಜಾದಿ…!
ಕಳೆದ ಐದು ದಿನಗಳಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಮೊಳಗುತ್ತಿರುವ ರಣಕಹಳೆ ಇದು. ದೀರ್ಘ‌ ಕಾಲದಿಂದ ಪಾಕಿಸ್ಥಾನ ನಡೆಸುತ್ತಿರುವ ದಬ್ಟಾಳಿಕೆಯ ವಿರುದ್ಧ ಅಲ್ಲಿನ ಜನರು ಈಗ ತಿರುಗಿ ಬಿದ್ದಿದ್ದಾರೆ ಮತ್ತು ನೆರವಿಗಾಗಿ ಭಾರತದತ್ತ ಆಸೆ ಕಂಗಳಿಂದ ನೋಡುತ್ತಿದ್ದಾರೆ.

ಪಿಒಕೆ ಪ್ರತಿಭಟನೆಗೆ ವಿದ್ಯುತ್‌ ದರ ಮತ್ತು ಗೋಧಿ ಹಿಟ್ಟು ಬೆಲೆ ಏರಿಕೆಯು ತತ್‌ಕ್ಷಣದ ಕಾರಣಗಳಾದರೂ 1948 ರಿಂದಲೂ ಅನುಭವಿಸಿಕೊಂಡು ಬಂದಿರುವ ದಬ್ಟಾಳಿಕೆ, ದೌರ್ಜನ್ಯದ ವಿರುದ್ಧದ ಆಕ್ರೋಶವು ಈಗ ಹೊರ ಬಿದ್ದಿದೆ.
ಪಿಒಕೆಯಲ್ಲಿರುವ ಕೈಗೊಂಬೆ ಸರಕಾರದ ಮೂಲಕ ಭಿನ್ನ ದನಿಗಳನ್ನು ಹತ್ತಿಕ್ಕುವುದು, ಚುನಾವಣೆಗಳಲ್ಲಿ ಅಕ್ರಮ ನಡೆಸುವುದು, ರಾಜಕೀಯ ಕಾರ್ಯಕರ್ತರ ಬಂಧನ, ಕೊಲೆ ಇತ್ಯಾದಿ ದೌರ್ಜನ್ಯಗಳನ್ನು ಪಾಕಿಸ್ಥಾನ ಸರಕಾರವು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ರಾಜಕೀಯ ಸ್ವಾತಂತ್ರ್ಯದ ಕೊರತೆಯು ಸ್ಥಳೀಯರಲ್ಲಿ ಪಾಕಿಸ್ಥಾನದ ವಿರುದ್ಧ ಸಿಟ್ಟು ಮಡುಗಟ್ಟುವಲ್ಲಿ ಕಾರಣವಾಗಿದೆ.

ಈ ಪ್ರದೇಶದಲ್ಲಿ ಸೂಕ್ತ ಆರೋಗ್ಯ ಸೇವೆ, ಶಿಕ್ಷಣ, ಮೂಲಸೌಕರ್ಯಗಳ ಕೊರತೆಯನ್ನು ಉದ್ದೇಶ ಪೂರ್ವಕವಾಗಿಯೇ ಮಾಡಲಾಗಿದೆ. ಪರಿಣಾಮ, ಪಿಒಕೆ ನಿರುದ್ಯೋಗ ಮತ್ತು ಬಡತನದಿಂದ ಬಳಲುತ್ತಿದೆ. ಇಲ್ಲಿನ ಜನರಿಗೆ ಸ್ವಾತಂತ್ರ್ಯವೇ ಇಲ್ಲ. ಹೆಸರಿಗೆ ಸ್ವಾಯತ್ತ ಸರಕಾರವಿದ್ದರೂ, ಎಲ್ಲವೂ ಇಸ್ಲಾಮಾಬಾದ್‌ನ ಅಣತಿಯಂತೆ ನಡೆಯುತ್ತಿದೆ. ಆದರೆ ಇದೆಲ್ಲಕ್ಕೂ ಪೂರ್ಣ ವಿರಾಮ ನೀಡುವ ನಿರ್ಧಾರವನ್ನು ಅಲ್ಲಿನ ಜನರು ಮಾಡಿದಂತಿದೆ. ಪರಿಣಾಮ ಹಿಂಸಾತ್ಮಕ ಪ್ರತಿಭಟನೆ ನಮ್ಮ ಕಣ್ಣ ಮುಂದಿದೆ.

ಎಲ್ಲೆಲ್ಲಿ ಪ್ರತಿಭಟನೆ?
ಪಿಒಕೆ ರಾಜಧಾನಿ ಮುಜಫ‌#ರಾಬಾದ್‌, ರಾವಲಾಕೋಟ್‌, ಮೀರ್ಪುರ್‌, ಪೂಂಚ್‌ ಸೇರಿ ವಿವಿಧೆಡೆ ಪ್ರತಿಭಟನೆಯು ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಶಾಲಾ-ಕಾಲೇಜು, ಸರಕಾರಿ ಕಚೇರಿಗಳು, ಮಾರುಕಟ್ಟೆಗಳು ಎಲ್ಲವೂ ಬಂದ್‌ ಆಗಿದ್ದು, ಜನಜೀವನ ಅಸ್ತವ್ಯವಸ್ತವಾಗಿದೆ.

Advertisement

ಹಿಂಸೆಗೆ ತಿರುಗಿದ್ದು ಹೇಗೆ?
ಜಮ್ಮು ಮತ್ತು ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ(ಜೆಎಎಸಿ) ಪಾಕಿಸ್ಥಾನ ಸರಕಾರ ವಿರುದ್ಧ ಮೇ 11ರಂದು ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ಥಾನ ಸರಕಾರವು ಸಮಿತಿಯ 70 ಕಾರ್ಯಕರ್ತರನ್ನು ಬಂಧಿಸಿದ್ದಲ್ಲದೇ, ಭದ್ರತಾ ಪಡೆಗಳನ್ನು ನಿಯೋಜಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ ಒಂದು ದಿನ ಮುಂಚಿತವಾಗಿಯೇ ಅಂದರೆ ಮೇ 10ರಂದೇ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪಿಒಕೆ ಜನರ ಬೇಡಿಕೆಗಳೇನು?
– ಪಾಕ್‌ ಸರಕಾರ ಅನುಸರಿಸುತ್ತಿರುವ ತಾರತಮ್ಯ ನೀತಿ ಕೊನೆಯಾಗಬೇಕು.
– ಪಿಒಕೆಯಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ನಿಯಂತ್ರಿಸಬೇಕು.
– ಸಬ್ಸಿಡಿ ಬೆಲೆಯಲ್ಲಿ ಗೋಧಿ ಹಿಟ್ಟು ಪೂರೈಸಬೇಕು.
– ಮಂಗಲ್‌ ಡ್ಯಾಂನಿಂದ ಉತ್ಪಾದಿಸಲಾಗುವ ವಿದ್ಯುತ್‌ ತೆರಿಗೆರಹಿತವಾಗಿ ಪೂರೈಸಬೇಕು.
– ಸಮಾಜದ ಕೆಲವೇ ಜನರಿಗೆ ದೊರೆಯುತ್ತಿರುವ ವಿಶೇಷ ಸವಲತ್ತುಗಳು ರದ್ದಾಗಬೇಕು.

ಪ್ರತಿಭಟನೆಗೆ ಜೆಎಎಸಿ ನೇತೃತ್ವ
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಈಗಿನ ಪ್ರತಿಭಟನೆಯನ್ನು ಜಮ್ಮು ಮತ್ತು ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ(ಜೆಎಎಸಿ) ವಹಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ಪಾಕಿಸ್ಥಾನ ಸರಕಾರ ಮತ್ತು ಜೆಎಎಸಿ ನಡುವೆ ಮಾತುಕತೆ ನಡೆದು ಒಪ್ಪಂದ ಏರ್ಪಟ್ಟಿತ್ತು. ಜೆಎಎಸಿ ಮುಂದಿಟ್ಟಿರುವ ಬೇಡಿಕೆಗಳನ್ನು ಪೂರೈಸುವುದಾಗಿ ಪಾಕಿಸ್ಥಾನವು ಹೇಳಿತ್ತು. ಆದರೆ ಪಾಕ್‌ ಮಾತುತಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ಪಾಕ್‌ ಆರ್ಥಿಕ ನೆರವು
ಪಿಒಕೆ ಕೈ ಮೀರಿ ಹೋಗುತ್ತಿರುವುದು ಖಚಿತವಾಗುತ್ತಿದ್ದಂತೆ ಪಾಕಿಸ್ಥಾನ ಪ್ರಧಾನಿ ಶೆಹಭಾಜ್‌ ಶರೀಫ್ ಅವರು 2,300 ಪಾಕಿಸ್ಥಾನಿ ಕೋಟಿ ರೂ. ನೆರವು ಘೋಷಿಸಿದ್ದಾರೆ. ಸ್ಥಳೀಯ ನಾಯಕರ ಜತೆಗೂಡಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸ್ಥಳೀಯರು ಮಾತ್ರ ಪಾಕ್‌ನ ಯಾವುದೇ ಆಶ್ವಾಸನೆಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.

ಯಾವಾಗ ನೆರವಿಗೆ ಬರುತ್ತೀರಿ: ಭಾರತಕ್ಕೆ ಪಿಒಕೆ ಜನರ ಪ್ರಶ್ನೆ
ಪಿಒಕೆ ಪ್ರತಿಭಟನೆಯ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಪಾಕ್‌ ಸರಕಾರ ಮಾಡುತ್ತಿದೆ. ಆದರೆ ಕಾರ್ಯಕರ್ತ ಅಮ್ಜದ್‌ ಅಯೂಬ್‌ ಮಿರ್ಜಾ ಪ್ರಕಾರ, ಭಾರತವು ಈಗ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಈಗ ನೆರವಿಗೆ ಬಾರದಿದ್ದರೆ ಭಾರತ ಇನ್ನಾéವಾಗ ನೆರವಿಗೆ ಬರಲಿದೆ? ಪಿಒಕೆ ಮತ್ತು ಗಿಲಿYಟ್‌-ಬಾಲ್ಟಿಸ್ಥಾನ್‌ ಪ್ರದೇಶವನ್ನು ಈಗ ಮುಕ್ತ ಮಾಡದಿದ್ದರೆ, ಭಾರತವು ಸುವರ್ಣಾವಕಾಶವನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಇದೇ ಭಾವನೆ ಪಿಒಕೆ ಎಲ್ಲ ಜನರಲ್ಲೂ ಇದೆ.

ಪಿಒಕೆ ಮೇಲೆ ಭಾರತದ ಹಕ್ಕು
ಭಾರತವು ಮೊದಲಿನಿಂದಲೂ ಪಿಒಕೆ ಭಾರತಕ್ಕೆ ಸೇರಿದ್ದು ಎಂದು ಹೇಳುತ್ತಾ ಬಂದಿದೆ. ಮೋದಿ ಸರಕಾರವು ಈ ವಿಷಯದಲ್ಲಿ ಇನ್ನಷ್ಟು ಗಟ್ಟಿತನ ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರ ಪುನರ್‌ ಸಂಘಟನೆ (ತಿದ್ದುಪಡಿ) ಮಸೂದೆ, ಜಮ್ಮು ಮತ್ತು ಕಾಶ್ಮೀರ ಮೀಸಲು(ತಿದ್ದುಪಡಿ) ಮಸೂದೆ ಮೂಲಕ ಕಾಶ್ಮೀರ ವಿಧಾನ  ಸಭೆ ಯಲ್ಲಿ ಪಿಒಕೆಗಾಗಿ 24 ಕ್ಷೇತ್ರಗಳನ್ನು ಮೀಸಲಿಟ್ಟಿದೆ. ಆ ಮೂಲಕ, ಪಿಒಕೆ ಮೇಲೆ ಅಧಿಕೃತವಾಗಿ ತನ್ನ ಹಕ್ಕು ಚಲಾಯಿಸಿದೆ. ಪಿಒಕೆಯನ್ನು ಭಾರತದ ಜತೆ ಸೇರಿಸಿಕೊಳ್ಳಲು ಈಗ ಕಾಲ ಪಕ್ವವಾಗಿದೆ. ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next