ಚಾಮರಾಜನಗರ:ಹನೂರು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷಬೆರಕೆ ಮಾಡಿ ಒಟ್ಟು 11 ಮಂದಿಯನ್ನು ಬಲಿತೆಗೆದುಕೊಂಡ ಘಟನೆಯಲ್ಲಿ 7 ಮಂದಿ ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಏತನ್ಮಧ್ಯೆ ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಿಗೆ ಹಾಗೂ ಮನೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಲ್ಲಿ ಬಿದರಹಳ್ಳಿಯ ಏಳು ಮಂದಿ ಸೇರಿದ್ದಾರೆ. ಒಟ್ಟು ಈವರೆಗೆ 11 ಮಂದಿ ಸಾವನ್ನಪ್ಪಿದ್ದು, 104 ಮಂದಿ ಅಸ್ವಸ್ಥರಾಗಿದ್ದಾರೆ. 93 ಮಂದಿ ಬೇರೆ, ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ 29 ಮಂದಿಯನ್ನು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಪಿಸಿಸಿಯಿಂದ 1ಲಕ್ಷ ರೂಪಾಯಿ ಪರಿಹಾರ ಘೋಷಣೆ:
ಹನೂರು ಕಿಚ್ಚುಗತ್ತಿ ಮಾರಮ್ಮ ದೇಗುಲದ ವಿಷಬೆರೆತ ಪ್ರಸಾದ ಸೇವಿಸಿ ಮೃತಪಟ್ಟ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರನ್ನು ಭೇಟಿಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಯಾರೋ ಕಿಡಿಗೇಡಿಗಳು ವಿಷಬೆರಿಸಿದ್ದರಿಂದ ಈ ಘಟನೆ ನಡೆದಿದೆ. ಇದೊಂದು ಹೀನ ಕೃತ್ಯ. ಮೃತರ ಕುಟುಂಬಕ್ಕೆ ನಾವು ನೀಡಿರುವುದು ತಾತ್ಕಾಲಿಕ ಪರಿಹಾರವಷ್ಟೇ ಎಂದು ಹೇಳಿದರು.
ಮೃತರ ಕುಟುಂಬಕ್ಕೆ ಹಾಗೂ ಅಸ್ವಸ್ಥರಿಗೆ ಎಲ್ಲಾ ರೀತಿಯ ನೆರವು: ಸಿಎಂ
ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಘೋಷಿಸಿದ್ದರು. ಇಂದು ಕೆಆರ್ ಆಸ್ಪತ್ರೆಗೆ ಭೇಟಿ ನೀಡಿ ವಿಷಪ್ರಸಾದ ಸೇವಿಸಿ ಅಸ್ವಸ್ಥಗೊಂಡಿರುವವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟನೆಯಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸೆಯ ವೆಚ್ಚ ಸೇರಿದಂತೆ ಎಲ್ಲಾ ರೀತಿಯಿಂದಲೂ ಸರ್ಕಾರ ನೆರವು ನೀಡಲು ಸಿದ್ಧ ಎಂದು ತಿಳಿಸಿದರು.
ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು: ಸಿದ್ದರಾಮಯ್ಯ
ಸುಳ್ವಾಡಿ ಗ್ರಾಮದಲ್ಲಿ ವಿಷಬೆರೆಸಿದ ಪ್ರಕರಣದಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಎಂ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಕೊಳ್ಳೇಗಾಲ ವಕೀಲರ ಸಂಘದಿಂದ ಕೋರ್ಟ್ ಕಲಾಪ ಬಹಿಷ್ಕಾರ:
ಪ್ರಸಾದದಲ್ಲಿ ವಿಷ ಬೆರೆಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಕೊಳ್ಳೇಗಾಲ ವಕೀಲರ ಸಂಘದ ಸದಸ್ಯರು ಕೋರ್ಟ್ ಕಲಾಪ ಬಹಿಷ್ಕರಿಸಿತ್ತು. ಅಲ್ಲದೇ ಆರೋಪಿಗಳ ಪರ ವಕಾಲತ್ತು ವಹಿಸದಿರುವಂತೆ ನಿರ್ಧಾರ ಕೈಗೊಂಡಿದೆ.