ಹೊಸದಿಲ್ಲಿ: ಜಗತ್ತಿನಲ್ಲೇ ಹಾವು ಕಚ್ಚಿ ಅತೀ ಹೆಚ್ಚು ಮಂದಿ ಸಾವಿಗೀಡಾಗುವ ರಾಷ್ಟ್ರ ಯಾವುದಿರಬಹುದು? ಇದಕ್ಕೆ ಉತ್ತರ ನಮ್ಮದೇ ದೇಶ. ಹೌದು, ಭಾರತದಲ್ಲಿ ಪ್ರತೀ ವರ್ಷವೂ ಅತೀ ಹೆಚ್ಚು ಮಂದಿ ಹಾವಿನ ವಿಷಕ್ಕೆ ಬಲಿಯಾಗುತ್ತಿದ್ದಾರೆ. 2000ದಿಂದ 2019ರವರೆಗೆ ಬರೋಬ್ಬರಿ 12 ಲಕ್ಷ ಮಂದಿ ಹಾವು ಕಚ್ಚಿದ್ದರಿಂದ ಅಸುನೀಗಿದ್ದಾರೆ.
ಹೀಗೆಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್ ಮತ್ತು ಮಹಾರಾಷ್ಟ್ರ ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ವಿಷಪೂರಿತ ಹಾವುಗಳ ಕುರಿತು ಜಾಗೃತಿ ಹಾಗೂ ಮಾಹಿತಿಯ ಕೊರತೆಯೇ ರಿಸ್ಕ್ ಹೆಚ್ಚಾಗಲು ಕಾರಣ ಎಂದು ವರದಿ ತಿಳಿಸಿದೆ.
ಸರ್ಪಗಳ ಕಚ್ಚುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು “ಆದ್ಯತೆ ನೀಡಬೇಕಾದ ನಿರ್ಲಕ್ಷಿತ ಕಾಯಿಲೆ’ ಎಂದು ಪರಿಗಣಿಸಿದೆ. ಜಗತ್ತಿನಾದ್ಯಂತ ಪ್ರತೀ ವರ್ಷವೂ 54 ಲಕ್ಷ ಮಂದಿಗೆ ಹಾವುಗಳು ಕಚ್ಚುತ್ತವೆ. ಆ ಪೈಕಿ 18-27 ಲಕ್ಷ ಮಂದಿಗೆ ವಿಷಸರ್ಪಗಳು ಕಚ್ಚಿರುತ್ತವೆ. ಇದರಲ್ಲಿ 80 ಸಾವಿರದಿಂದ 14 ಲಕ್ಷ ಸಾವುಗಳು ಸಂಭವಿಸುತ್ತವೆ. ಇವುಗಳ ಪೈಕಿ ಶೇ.50ಕ್ಕೂ ಹೆಚ್ಚು ಪ್ರಕರಣ ವರದಿಯಾಗುವುದು ಭಾರತದಲ್ಲಿ.
18-27ಲಕ್ಷ : ವಿಷಸರ್ಪಗಳು ಕಚ್ಚಿದ ಪ್ರಕರಣಗಳು
14ಲಕ್ಷ : ಈ ಪೈಕಿ ಉಂಟಾಗುವ ಸಾವು
50% ಕ್ಕೂ ಹೆಚ್ಚು ಭಾರತದ ಪಾಲು
ಬುಡಕಟ್ಟು ಜನರೇ ಹೆಚ್ಚು :
ಹಾವು ಕಚ್ಚಿದಾಗ ನೀಡಬೇಕಾದ ಚಿಕಿತ್ಸೆಯ ಕುರಿತು ಅರಿವಿನ ಕೊರತೆ, ಚಿಕಿತ್ಸೆಗೆ ಅವೈಜ್ಞಾನಿಕ ವಿಧಾನಗಳ ಬಳಕೆ, ನಾಗಗಳ ಕುರಿತ ಮೂಢನಂಬಿಕೆ ಮತ್ತಿತರ ಕಾರಣಗಳಿಂದಾಗಿ ವಿಶೇಷವಾಗಿ ಬುಡಕಟ್ಟು ಜನರೇ “ಹಾವು ಕಚ್ಚುವಿಕೆ’ಗೆ ಬಲಿಯಾಗುತ್ತಾರೆ.