ಕೆಂಭಾವಿ: ಸುಳ್ವಾಡಿ “ವಿಷ ಪ್ರಸಾದ’ ದುರ್ಘಟನೆ ಮಾಸುವ ಮುನ್ನವೇ ಯಾದಗಿರಿ ಜಿಲ್ಲೆ ಮುದನೂರು ಗ್ರಾಮದಲ್ಲಿ ಬುಧವಾರ ಕುಡಿಯುವ ನೀರಿನ ಬಾವಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದ ನೀರು ಸೇವಿಸಿದ ತೆಗ್ಗೆಳ್ಳಿ ಗ್ರಾಮದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ.
ಮುದನೂರ ಗ್ರಾಮದಿಂದ ಸುಮಾರು 5 ಕಿ.ಮೀ. ಅಂತರದಲ್ಲಿ ಇರುವ ತೆಗ್ಗೆಳ್ಳಿ ಹಾಗೂ ಶಾಖಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಾವಿಯಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಬೆರೆಸಿದ್ದರು.
ವಿಷ ಮಿಶ್ರಿತ ನೀರು ಕುಡಿದು ಎರಡೂ ಗ್ರಾಮದ ಐವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು. ಐದು ಜನರ ಪೈಕಿ ಹೊನ್ನಮ್ಮ(62)ಅವರಿಗೆ ಬುಧವಾರ ರಾತ್ರಿ ತೀವ್ರ ರಕ್ತ ವಾಂತಿ ಆದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಮಾರ್ಗ ಮಧ್ಯೆ ಹೊನ್ನಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ಗುರುವಾರ ಇದೇ ಘಟನೆಗೆ ಸಂಬಂಧಿಸಿದಂತೆ ಏಳು ವರ್ಷದ ಬಾಲಕ ಸೇರಿ ಮೂವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದನೂರ ಗ್ರಾಮದ ಕುಡಿಯುವ ನೀರು ಪೂರೈಸುವ ಬಾವಿ ಹಾಗೂ ತೆಗ್ಗಳ್ಳಿ ಗ್ರಾಮಗಳಿಗೆ ಜಿಲ್ಲಾ ಧಿಕಾರಿ ಕೂರ್ಮಾರಾವ್ ಹಾಗೂ ಎಸ್‌ಪಿ ಯಡಾ ಮಾರ್ಟಿನ್ ಮರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಷ ಬೆರೆಸಿದ ಕಿಡಿಗೇಡಿಗಳ ಸುಳಿವಿನ ಬಗ್ಗೆ ಈಗಾಗಲೇ ತನಿಖೆ ನಡೆಸಿದ್ದು, ಶೀಘ್ರ ಬಂಧಿಸಲಾಗುವುದು. ಜಿಲ್ಲಾಡಳಿತ ಸೂಚನೆ ನೀಡುವವರೆಗೂ ನೀರು ಕುಡಿಯಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
– ಯಡಾ ಮಾರ್ಟಿನ್ ಮರ್ಬನ್ಯಾಂಗ್, ಎಸಿ