ಮಂಡ್ಯ: ವಿಷ ಮಿಶ್ರಿತ ನೀರು ಕುಡಿದು 11 ಮಂದಿ ಶಾಲಾ ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಎ.ಹುಲ್ಲುಕೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಾದ ಪ್ರಜ್ವಲ್, ಚಂದ್ರ, ಧನುಷ್, ನಿಶಾ, ಮಯೂರಗೌಡ, ತೇಜು, ವಿನಯ್, ಶಿವಲಿಂಗ, ಯಶವಂತ್, ಸೋಮಶೇಖರ್ ಸೇರಿದಂತೆ ಮತ್ತಿತರೆ 11 ಮಕ್ಕಳು ಅಸ್ವಸ್ಥರಾಗಿದ್ದಾರೆ.
ಎ.ಹುಲ್ಲುಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗೆ ಭಾನುವಾರ ರಾತ್ರಿಯೇ ದುಷ್ಕರ್ಮಿಗಳು ಕ್ರಿಮಿನಾಶಕ ಮಿಶ್ರಣ ಮಾಡಿದ್ದಾರೆ. ಬೆಳಗ್ಗೆ ಹಾಲು ಸೇವಿಸುವ ಮುನ್ನ ಲೋಟ ತೊಳೆಯಲು ತೆರಳಿದ ವೇಳೆ ಕೆಲವು ವಿದ್ಯಾರ್ಥಿಗಳು ನೀರು ಕುಡಿದಿದ್ದಾರೆ. ಕೆಟ್ಟ ವಾಸನೆ ಬಂದದ್ದರಿಂದ ಮಕ್ಕಳು ಬಾಯಲ್ಲಿದ್ದ ನೀರನ್ನು ಹೊರಹಾಕಿ ಶಿಕ್ಷಕರಿಗೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ಹಲವು ವಿದ್ಯಾರ್ಥಿಗಳು ನೀರು ಅದೇ ನೀರು ಕುಡಿದಿದ್ದರು. ನಂತರ ನೀರು ಸೇವಿಸದಂತೆ ಉಳಿದ ಮಕ್ಕಳಿಗೆ ಸೂಚಿಸಲಾಯಿತು.
ಮಿಮ್ಸ್ ಆಸ್ಪತ್ರೆಗೆ ದಾಖಲೆ: ವಿಷಮಿಶ್ರಿತ ನೀರು ಸೇವಿಸಿದ ಕೆಲವೇ ನಿಮಿಷದಲ್ಲೇ ಮಕ್ಕಳಿಗೆ ಹೊಟ್ಟೆನೋವು, ವಾಂತಿ, ತಲೆ ಸುತ್ತು ಕಾಣಿಸಿಕೊಂಡು ಅಸ್ವಸ್ಥರಾದರು. ನಂತರ ಶಿಕ್ಷಕರು ಸ್ಥಳೀಯರ ಸಹಕಾರದಿಂದ ಸಮೀಪದ ಕೊತ್ತತ್ತಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.
ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಎಲ್ಲ ಮಕ್ಕಳನ್ನು ದಾಖಲಿಸಿದ್ದು, ಮಕ್ಕಳ ತಜ್ಞರು ಎಲ್ಲ ಮಕ್ಕಳನ್ನು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದರು. ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ನೇತೃತ್ವದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಸದಸ್ಯ ತೂಬಿನಕೆರೆ ರಾಮಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಡಿಡಿಪಿಐ ರಘುನಂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಯ್ಯ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು. ಶ್ವಾನ ದಳ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಗದ್ದೆಗಳಿಗೆ ಇಲಿ ಇತರೆ ಕೀಟಗಳಿಂದ ಬೆಳೆ ರಕ್ಷಣೆಗೆ ಬಳಸುವ ಕ್ರಿಮಿನಾಶಕದ ಒಂದು ಕೆ.ಜಿ. ತೂಕದ ಪ್ಯಾಕೆಟ್ನ್ನು ವಾಟರ್ ಟ್ಯಾಂಕ್‌ಗೆ ದುಷ್ಕರ್ಮಿಗಳು ಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.