ಬೆಂಗಳೂರು: ಮಂಗಳೂರು ಹೊರವಲಯದ ಗ್ರಾಮಗಳಿಗೆ ಕುಡಿ ಯುವ ನೀರು ಪೂರೈಸುತ್ತಿರುವ ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯಕ್ಕೆ ಸೇರುತ್ತಿರುವ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆಯಾದ ಕಲುಷಿತ ನೀರು ವಿಷಕಾರಿಯಾಗಿದೆ ಎಂದು ನೀರಿನ ವೈದ್ಯಕೀಯ ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಪ್ರಯೋಗಾಲಯದ ವರದಿಯನ್ನು ಮಂಡಳಿ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ನೀರಿನ ವಿಶ್ಲೇಷಣ ವರದಿ ಹಾಗೂ ಮಂಗಳೂರಿನ ಪರಿಸರ ಅಧಿಕಾರಿಯ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅದರಲ್ಲಿ, ತ್ಯಾಜ್ಯ ಘಟಕದಿಂದ ಹರಿದು ಜಲಾಶಯ ಸೇರುತ್ತಿರುವ ನೀರಿನ ಮಾದರಿಯಲ್ಲಿ ಪರೀಕ್ಷಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ನೀರಿನಲ್ಲಿ ಅಮೋನಿಯಕಲ್ ನೈಟ್ರೋಜನ್ ಮತ್ತು ಕಬ್ಬಿಣದ ಅಂಶ ನಿಗದಿಗಿಂತ ಹೆಚ್ಚಿದೆ. ಇದು ವಿಷಕಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಂಗಳೂರಿನ ಪ್ರಾದೇಶಿಕ ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್, ಭೂಭರ್ತಿ ಘಟಕದಿಂದ ಕಲುಷಿತ ನೀರು ಬಿಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅದನ್ನು ಪರಿಶೀಲಿಸಿದ ನ್ಯಾಯಪೀಠ, ನೀರು ಕಲುಷಿತಗೊಂಡಿರುವುದು ಗಂಭೀರ ವಿಚಾರ. ನೀವು ಜನರಿಗೆ ನೀರಿನೊಂದಿಗೆ ವಿಷ ಕೊಡುತ್ತಿದ್ದೀರಾ? ಶುದ್ಧ ಕುಡಿಯುವ ನೀರಿಗೆ ಏನು ವ್ಯವಸ್ಥೆ ಮಾಡಿದ್ದೀರೀ ಎಂದು ಸರಕಾರ ಮತ್ತು ಪಾಲಿಕೆಯನ್ನು ತರಾಟೆ ತೆಗೆದುಕೊಂಡಿತು.