Advertisement
ಪ್ಲಾಸ್ಟಿಕ್ ತಿನ್ನುತ್ತಿದ್ದೀರಾ?ಇದೆಂಥ ಹುಚ್ಚು ಪ್ರಶ್ನೆ ಅಂದುಕೊಂಡಿರಾ? ತಡೆಯಿರಿ. ನೀವು ಯಾವೆಲ್ಲಾ ಬಗೆಯಲ್ಲಿ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಅಂತ ಹೇಳುತ್ತೇನೆ. ಬನ್ನಿ, ನಿಮ್ಮ ಅಡುಗೆ ಮನೆಯೊಳಗೆ ಒಂದು ಸುತ್ತು ಹಾಕಿ ಬರೋಣ. ಅಲ್ಲಿರುವ ಎಲ್ಲಾ ಡಬ್ಬಗಳನ್ನು ತೆಗೆಯೋಣ. ಏನಿದೆ ಅದರಲ್ಲಿ? ಮುತುವರ್ಜಿ ವಹಿಸಿ ತಂದ ಅಡುಗೆ ಸಾಮಗ್ರಿಗಳು ಇವೆ. ಅದನ್ನೆಲ್ಲ ಯಾವುದರಲ್ಲಿ ಶೇಖರಿಸಿ ಇಟ್ಟಿದ್ದೀರಾ? ಪ್ಲಾಸ್ಟಿಕ್ ಡಬ್ಬದಲ್ಲಿ ತಾನೇ. ಇನ್ನೊಂದೆಡೆ, ತಾಜಾ ಹಸಿ ತರಕಾರಿಗಳು ಇವೆ. ಆದರೆ, ಅವುಗಳನ್ನು ಪ್ಲಾಸ್ಟಿಕ್ ಮಣೆಯ ಮೇಲಿಟ್ಟು ಕತ್ತರಿಸುತ್ತಿದ್ದೀರಿ. ಇನ್ನು ಶಾಲೆಗೆ ಹೋಗುವ ಮಕ್ಕಳಿಗೆ ಬಾಯಾರಿಕೆ ಆಗದಿರಲಿ ಎಂದು ನೀರನ್ನು, ಮಧ್ಯಾಹ್ನದ ಊಟವನ್ನು ಸ್ಪಿಲ್‌ಪ್ರೂಫ್ ಪ್ಲಾಸ್ಟಿಕ್ ಬಾಟಲಿ ಮತ್ತು ಡಬ್ಬದಲ್ಲಿ ತುಂಬಿ ಕಳುಹಿಸುತ್ತಿದ್ದೀರಿ. ಈಗಲಾದ್ರೂ ಒಪ್ಪಿಕೊಳ್ಳುತ್ತೀರಾ, ನೀವು ಊಟದ ಜೊತೆಗೆ ಪ್ಲಾಸ್ಟಿಕ್ ಅನ್ನೂ ತಿನ್ನುತ್ತಿದ್ದೀರೆಂದು?
Related Articles
Advertisement
ಪ್ಲಾಸ್ಟಿಕ್ ಎಂಬ ವಿಷಕಂಠಪ್ರಕೃತಿಯ ಪ್ರತಿಯೊಂದು ವಸ್ತುವೂ ಇದೇ ಪ್ರಕೃತಿಯಲ್ಲಿ ಲೀನವಾಗಿ ಹೋಗಬೇಕು. ಹಾಗೆ ಆಗದೇ ಹೋದರೆ, ಅದು ಸ್ರವಿಸುವ ಒಡಲಿನಿಂದ ಬರುವ ಪದಾರ್ಥ ಪ್ರಕೃತಿಗೆ ವಿಷವಾಗುತ್ತದೆ. ಮಾನವ ನಿರ್ಮಿತ ಈ ಪ್ಲಾಸ್ಟಿಕ್ ನಾನ್ ಬಯೊಡಿಗ್ರೇಡಬಲ್ (ಮಣ್ಣಿನಲ್ಲಿ ಕರಗುವುದಿಲ್ಲ) ಎಂಬುದು ಎಲ್ಲರಿಗೂ ಗೊತ್ತಿದೆ. ಒಂದೇ ಒಂದು ಸಲ ಬಳಸಿ ಎಸೆಯುವ ಸಿಂಗಲ್ ಯೂಸ್ ಪ್ಲಾಸ್ಟಿಕ್‌ನಿಂದ ಹಿಡಿದು, ಬಹು ಬಳಕೆಯ ಪ್ಲಾಸ್ಟಿಕ್‌ಗಳವರೆಗೆ ಎಲ್ಲವೂ ಪ್ರಕೃತಿಗೆ ಹಾನಿ ಮಾಡುತ್ತವೆ. ಈಗ ಬ್ಯಾನ್ ಆಗಿರುವ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಎರಡನೇ ಬಾರಿ ಬಳಸುವಂತೆಯೇ ಇಲ್ಲ, ಅಷ್ಟೊಂದು ತೀವ್ರಗತಿಯಲ್ಲಿ ವಿಷ ಕಕ್ಕುತ್ತಿರುತ್ತದೆ. ಇದರಿಂದ ನಿರಂತರವಾಗಿ ವಿಷ ಉತ್ಪತ್ತಿಯಾಗುತ್ತಿರುತ್ತದೆ. ಅಡುಗೆಮನೆಯಲ್ಲಿ ಅಡಗಿದೆ ವಿಷ
ಫಾಸ್ಥಲೇಟ್ ಎಂಬ ವಸ್ತುವಿನಿಂದ ಪಾಲಿಥೀನ್ ಚೀಲಗಳು, ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‌ನಿಂದ ಟಫ್ಲಾನ್ ಪಾತ್ರೆಗಳು, ಮೆಲಮೈನ್ ಎಂಬುದರಿಂದ ತಟ್ಟೆಗಳು, ದಿನನಿತ್ಯ ಬಳಸುವ ಇತರ ವಸ್ತುಗಳ ಮೇಲೆ ಅಚ್ಚಾದ ನಂ. 7 ಅಥವಾ ಟc ಎಂಬ ಸೂಚನೆಗಳು, ಅವು ಪಾಲಿಕಾರ್ಬನೇಟ್‌ಗಳಿಂದ ಆದದ್ದೇದೂ, ನಂ. 3 ಪಾಲಿವಿನೈಲ್‌ನಿಂದ ಆದದ್ದೇದೂ ಹೇಳುತ್ತವೆ. ಈ ಟಫ್ಲಾನ್ ಬಾಂಡ್ಲಿ, ತವಾಗಳ ಜಾಹೀರಾತಿನಲ್ಲಿ- ಅಡುಗೆ ಮಾಡಬೇಕಾದರೆ ಕಾವಲಿಗೆ ಎಣ್ಣೆ ಸುರಿಯಬೇಕು. ಹೀಗೆ ಎಣ್ಣೆ ತಿನ್ನುವುದರಿಂದ ತೂಕ ಹೆಚ್ಚುತ್ತದೆ. ಆದರೆ, ಈ ಟಫ್ಲಾನ್ ಪಾತ್ರೆಗಳಲ್ಲಿ ಎಣ್ಣೆ ಹುಯ್ಯದೆಯೇ ರೊಟ್ಟಿ, ದೋಸೆ, ಅಡುಗೆ ಮಾಡಬಹುದು ಎಂದು ಹೇಳಿದರು. ಪಲ್ಯಕ್ಕೆ ಎಣ್ಣೆ ಬೇಡವೇ ಬೇಡ ಎಂದರು. ಡಯಟೀಶಿಯನ್ ಆದ ನನಗೆ ಆಗ ಅನಿಸಿದ್ದು, ಈ ರೀತಿಯ ಪ್ರಚಾರ ಅಡುಗೆಯ ವಿಧಾನವನ್ನೇ ಗೇಲಿ ಮಾಡುತ್ತಿದೆ ಎಂದು. ಹಾಗಾದರೆ, ಈ ಟಫ್ಲಾನ್ ಬಳಸುವುದರಿಂದ ಜಗತ್ತಿನಲ್ಲಿ ಸ್ಥೂಲಕಾಯಿಗಳು ಕಡಿಮೆ ಆಗಿದ್ದಾರಾ? ವಿಪರ್ಯಾಸ ಅಂದರೆ, ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ, ಟಫ್ಲಾನ್ ಪದಾರ್ಥ, ಬೆಂಕಿಯ ಬಿಸಿಗೆ ಸ್ವಲ್ಪ ಸ್ವಲ್ಪವಾಗಿ ಕರಗುತ್ತಾ ಆಹಾರದ ಜೊತೆ ಸೇರಿಕೊಂಡು ನಮ್ಮ ಹೊಟ್ಟೆಯನ್ನು ಸೇರುತ್ತದೆ. ಹೀಗೆ ಒಳಗೆ ಹೋದ ಪ್ಲಾಸ್ಟಿಕ್, ದೇಹದಲ್ಲಿ ವಿಷವಾಗಿ ಪರಿಣಮಿಸುತ್ತದೆ. ಈ ಟಫ್ಲಾನ್ ಪಾತ್ರೆಗಳ ಜೊತೆ ಅದನ್ನು ಬಳಸುವ ವಿಧಾನವನ್ನು ಸೂಚಿಸಿರುತ್ತಾರೆ. ಅದರಲ್ಲಿ ಈ ಪಾತ್ರೆಯನ್ನು ನೀರುಹಾಕದೆ ಒಲೆಯ ಮೇಲಿಡಬೇಡಿ ಎಂದಿರುತ್ತದೆ. ಏಕೆಂದರೆ, ನೀರು ಇಲ್ಲದಿದ್ದರೆ ಈ ಪಾತ್ರೆ 150 ಅಥವಾ 200 ಡಿಗ್ರಿ ಸೆಲಿಯಸ್ ಉಷ್ಣಕ್ಕೆ ಹೋಗುತ್ತದೆ. ಆಗ ಈ ಟಫ್ಲಾನ್ ಇನ್ನೂ ಸುಲಭವಾಗಿ ಕರಗಿ, ಆಹಾರದಲ್ಲಿ ಸೇರಿಕೊಳ್ಳುತ್ತದೆ. ಹಾಗಂತ ನೀರು ಹಾಕಿದರೆ ಟಫ್ಲಾನ್ ಕರಗುವುದಿಲ್ಲ ಅಂತ ಅರ್ಥ ಅಲ್ಲ. ಹೇಗಿದ್ದರೂ ಅದು ಆಹಾರದಲ್ಲಿ ಸೇರಿ ಹೋಗುತ್ತದೆ. ಪ್ಲಾಸ್ಟಿಕ್ ಮಣೆಯ ಮೇಲೆ ತರಕಾರಿಯನ್ನಿಟ್ಟು ಚೂಪಾದ ಚಾಕುವಿನಿಂದ ಕತ್ತರಿಸುವಾಗ, ಮಣೆಯ ಪ್ಲಾಸ್ಟಿಕ್ ಕೂಡ ಚೂರುಚೂರಾಗಿ ಒ¨ªೆ ತರಕಾರಿಗೆ ಅಂಟುಕೊಂಡು ಪ್ಲಾಸ್ಟೋಕ್ಯಾರೆಟ್, ಪ್ಲಾಸ್ಟೋ ಹುರಳಿಕಾಯಿ ಪಲ್ಯವಾಗಿ ಹೊಟ್ಟೆ ಸೇರುತ್ತಿದೆ. ವಿಷ ಬೆರೆಸಿ ಕುಡಿಯುವಿರಾ?
ಪ್ಲಾಸ್ಟಿಕ್ ಬಾಟಲಿಯಲ್ಲಿ ಕುಡಿಯುವ ನೀರು ಕೊಡುವ ಮೂಲಕ, ಮಕ್ಕಳು ಕುಡಿಯುವ ನೀರಿಗೆ ಹೆತ್ತವರೇ ವಿಷ ಬೆರೆಸುತ್ತಿದ್ದಾರೆ. ಆ ಮಕ್ಕಳು ಆಟವಾಡುವಾಗ ಬಾಟಲಿಯನ್ನು ಬಿಸಿಲಲ್ಲಿ ಇಟ್ಟು, ಇನ್ನಷ್ಟು ಬೇಗಬೇಗ ವಿಷ ಹೊರ ಸೂಸುವಂತೆ ಮಾಡಿಕೊಳ್ಳುತ್ತಾರೆ. ಪ್ರತಿನಿತ್ಯ ಹೀಗೆ ನೀರು ಕುಡಿದ ವಿಷ ಬಾಲಕ/ ವಿಷ ಕನ್ಯೆಯರ ಆರೋಗ್ಯದ ಬಗ್ಗೆ ಯೋಚಿಸಿ. ಟ್ಯಾಕ್ಸಿ ಮತ್ತು ರಿಕ್ಷಾ ಡೈವರ್‌ಗಳು ಸಿಂಗಲ್ ಯೂಸ್ ಬಾಟಲಿಯಲ್ಲಿ ನೀರು ತುಂಬಿ ವಾಹನದಲ್ಲಿಟ್ಟುಕೊಳ್ಳುತ್ತಾರೆ. ವಾಹನದಿಂದ ಉಂಟಾಗುವ ರೇಡಿಯೇಶನ್ ಮತ್ತು ಸೂರ್ಯನಿಗೆ ಒಡ್ಡಿಕೊಂಡ ಬಾಟಲಿಯಿಂದಾಗಿ ಅತಿಯಾದ ವಿಷವನ್ನು ಅರಿವಿಲ್ಲದೆ ಕುಡಿಯುತ್ತಿ¨ªಾರೆ. ಇನ್ನು ಹೋಟೆಲ್‌ಗಳ ಪ್ಯಾಕಿಂಗ್‌ನಲ್ಲೂ ಬಿಸಿ ಆಹಾರವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಡುವ ದುರಭ್ಯಾಸ ಬೆಳೆದು ಬಂದಿದೆ. ಅಡುಗೆ ಮನೆಯ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವುದರಿಂದ ಉತ್ಪತ್ತಿಯಾದ ವಿಷ ಆಹಾರದ ಒಳಗೆ ಸೇರಿಬಿಡುತ್ತದೆ. ನಂತರ ನೀವೆಷ್ಟೇ ತೊಳೆದರೂ ಇದು ಹೋಗುವುದಿಲ್ಲ. ಈ ಎಲ್ಲಾ ಬಗೆಬಗೆಯ ಪ್ಲಾಸ್ಟಿಕ್‌ನಲ್ಲೂ ಬಿಸ್ ಫಿನಾಲ್ ಏ (ಆಕಅ) ಎಂಬ ಹಾನಿಕಾರಕ ವಸ್ತು ಬಿಡುಗಡೆಯಾಗುತ್ತದೆ. ಇದು ನಮ್ಮ ರಕ್ತದಲ್ಲಿ ಸೇರಿಕೊಂಡು, ಜೀವರಾಸಾಯನಿಕ ಕ್ರಿಯೆಯಲ್ಲಿ ಮೂಗು ತೂರಿಸಿ, ಅಡ್ಡಗಾಲು ಹಾಕಿ ಕ್ರಿಯೆಯ ದಿಕ್ಕನ್ನು ತಪ್ಪಿಸುತ್ತದೆ. ಪ್ರಮುಖವಾಗಿ ಈಸ್ಟ್ರೋಜನ್ ಹಾರ್ಮೋನ್‌ಗೆ ತೊಂದರೆ ಮಾಡಿ, ಹೆಣ್ಣುಮಕ್ಕಳನ್ನು ಅತಿ ಚಿಕ್ಕವಯಸ್ಸಿಗೇ ಋತುಮತಿಯಾಗುವಂತೆ ಮಾಡುತ್ತದೆ. ನಂತರ, ಇದುವೇ ಅನಿಯಂತ್ರಿತ ಮುಟ್ಟಿಗೂ ಕಾರಣವಾಗುತ್ತದೆ. ಹಾಗೆಯೇ ಆಂಡ್ರೋಜನ್ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳ ಸ್ರವಿಕೆಯಲ್ಲೂ ಏರುಪೇರು ಮಾಡಿ ಪುರುಷರಲ್ಲಿ ವಿರ್ಯಾಣುಗಳ ಕೊರತೆಮಾಡಿ ನಪುಂಸಕತ್ವ ಉಂಟುಮಾಡುತ್ತದೆ. ಇಷ್ಟೇ ಸಾಲದು ಎಂದು ಅತಿತೂಕ, ಡಯಾಬಿಟಿಸ್‌ಗಳಿಗೂ ದೇಹದಲ್ಲಿ ಸೇರಿಕೊಂಡ ಪ್ಲಾಸ್ಟಿಕ್ ವಿಷವೇ ಕಾರಣವಾಗುತ್ತದೆ. ಈಗ ಹೇಳಿ, ಇಷ್ಟೇಲ್ಲಾ ಅವಘಡಗಳನ್ನು ಉಂಟುಮಾಡೂವ ಈ ಪ್ಲಾಸ್ಟಿಕ್ ವಿಷ ನಮಗೆ ಬೇಕೇ? ಪಂಚಭೂತಗಳಲ್ಲಿ ಲೀನವಾಗದ, ಮಾನವನನ್ನು ನಿಧಾನವಾಗಿ ಕೊಲ್ಲುತ್ತಿರುವ, ಕಡೆಗೆ ಬ್ಯಾಕ್ಟೀರಿಯಾ ಮತ್ತು ವೈರಾಣುಗಳಿಗೂ ಬೇಡದ ವಸ್ತುವನ್ನು ಅಡುಗೆಮನೆಯೊಳಗೆ ಬಿಟ್ಟುಕೊಂಡಿರುವುದು ಸರಿಯಾ? ದಿನಕ್ಕೆ 137 ಕೋಟಿ ಬಾಟಲ್‌ಗಳು!
ದೇಶದಲ್ಲಿ ಇರುವ ಎಲ್ಲರೂ ದಿನಕ್ಕೆ ಒಂದು ಬಾಟಲಿ ನೀರನ್ನೋ, ಹಣ್ಣಿನ ರಸವನ್ನೋ ಕುಡಿದು ಎಸೆಯುತ್ತಾರೆ ಅಂತಿಟ್ಟುಕೊಂಡರೆ, ಒಂದು ದಿನಕ್ಕೆ 137 ಕೋಟಿ ಪ್ಲಾಸ್ಟಿಕ್ ಬಾಟಲ್‌ಗಳು ಭೂಮಿಗೆ ಎಸೆಯಲ್ಪಡುತ್ತವೆ! ಇನ್ನು, ಬಹು ಬಳಕೆಯ ಪ್ಲಾಸ್ಟಿಕ್‌ನಿಂದಲೂ ನಿಧಾನವಾಗಿ ವಿಷ ಉತ್ಪತ್ತಿಯಾಗುತ್ತಿರುತ್ತದೆ. ವ್ಯತ್ಯಾಸವೆಂದರೆ, ಈ ಪ್ಲಾಸ್ಟಿಕ್ ಅನ್ನು ದಿನವೂ ಎಸೆಯುವುದಿಲ್ಲ ಅನ್ನುವುದಷ್ಟೇ. ಮೂಲದಲ್ಲಿ ಎಲ್ಲವೂ ವಿಷಯುಕ್ತವೇ. ಪ್ಲಾಸ್ಟಿಕ್‌ಗೆ, ಪ್ರಕೃತಿಯ ಜೊತೆ ಅಂದರೆ, ಪಂಚಭೂತಗಳ ಜೊತೆ ಸಹಬಾಳ್ವೆ ಮಾಡಲು ಸಾಧ್ಯವಿಲ್ಲ. ಅಡುಗೆಯ ಬಿಸಿಗೆ ಕರಗಿ ಹೋಗಿ ಅಲ್ಲಿಯೇ ವಿಷ ಕಾರುವ, ನೀರಿನಲ್ಲಿ ಇಟ್ಟರೆ ಅಲ್ಲಿಯೇ ವಿಷವಾಗುವ, ಬಳಸದೆ ಹಾಗೆಯೇ ಇಟ್ಟರೂ ಗಾಳಿಯನ್ನು ವಿಷಯುಕ್ತ ಮಾಡುವ, ಮಣ್ಣಿನಲ್ಲಿ ಹೂತರೆ ಮಣ್ಣಾಗದೆ, ಶತಕಗಳ ಕಾಲ ನಿರಂತರವಾಗಿ ವಿಷವನ್ನು ಉತ್ಪತ್ತಿ ಮಾಡುವ ಈ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಹಾನಿಯನ್ನು ಊಹಿಸಿಕೊಳ್ಳಿ. – ಡಾ. ಹೆಚ್. ಎಸ್ .ಪ್ರೇಮಾ, ಆಹಾರ ತಜ್ಞೆ