ಲಂಡನ್: ಲಂಡನ್‌ನ ಸೇವೇನೋಕ್ಸ್ ಕೆಂಟ್‌ನಲ್ಲಿರುವ ಮೂಲತಃ ಮೈಸೂರಿನವರಾದ ಡಾ| ವಿಶ್ವನಾಥ್ ಮತ್ತು ಡಾ| ಮಮತಾ ಅವರ ಪುತ್ರ 11 ವರ್ಷದ ಈಶ್ವರ್ ಶರ್ಮಾ ಆಟಿಸಂ ಮತ್ತು ಎಡಿಎಚ್‌ಡಿ ಹೊಂದಿರುವ ಯುವ ಯೋಗ ಚಾಂಪಿಯನ್ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಗೆ ಭಾಜನರಾಗಿದ್ದು, ಯುಕೆ ಪ್ರಧಾನಿಯವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಮ್ಮ ಸಾಧನೆಗಳಿಂದ ಸಮಾಜದಲ್ಲಿ ಬದಲಾವಣೆ ತರಬಲ್ಲ ಮತ್ತು ಪ್ರೇರಣೆಯಾಗಬಲ್ಲವರಿಗೆ 2014ರಿಂದ ಈ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ. ಯುಕೆಯ ಪ್ರಧಾನಿಯವರಿಂದ ಈ ಪ್ರಶಸ್ತಿ ಪಡೆದವರಲ್ಲಿ ಈಶ್ವರ್ 1646ನೇಯವರಾಗಿದ್ದು, ಜೂ. 1ರಂದು ಪ್ರಶಸ್ತಿ ಸ್ವೀಕರಿಸಿದರು.
ಕೊರೊನಾ ಸಾಂಕ್ರಾಮಿಕದ ಲಾಕ್‌ಡೌನ್ ಅವಧಿಯಲ್ಲಿ 14 ದೇಶಗಳ 40 ಮಕ್ಕಳಿಗೆ ದೈನಂದಿನ ಯೋಗ ತರಗತಿಗಳನ್ನು ನಡೆಸಿಕೊಟ್ಟಿರುವ ಈಶ್ವರ್ ಶರ್ಮಾ, ಈಗಾಗಲೇ ಮೂರು ಬಾರಿ ವಿಶ್ವ ಯೋಗ ಚಾಂಪಿಯನ್ ಆಗಿದ್ದಾರೆ. ಯೋಗದಿಂದ ಇತರ ಮಕ್ಕಳಿಗೆ, ವಿಶೇಷವಾಗಿ ತನ್ನಂತಹ ವಿಶೇಷ ಅಗತ್ಯವಿರುವವರಿಗೆ ಸಹಾಯ ಮಾಡಲು ಅವರು, ಉಚಿತ ಆನ್‌ಲೈನ್ ತರಗತಿಗಳನ್ನು ಆಯೋಜಿಸಲು ಪ್ರಾರಂಭಿಸಿದರು.
ಈಶ್ವರ್ ಅವರಿಗೆ ಪತ್ರ ಬರೆದಿರುವ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಲಾಕ್ ಡೌನ್ ಸಮಯದಲ್ಲಿ ನೀವು ಜಾಗತಿಕವಾಗಿ ನೂರಾರು ಮಕ್ಕಳಿಗೆ ಯೋಗದ ಸಂತೋಷವನ್ನು ತಂದಿದ್ದೀರಿ. ವಿಶೇಷ ಅಗತ್ಯವಿರುವ ಮಕ್ಕಳಿಗೆ ನೀವು ನೀಡುತ್ತಿರುವ ಚಟುವಟಿಕೆಯನ್ನು ಆನಂದಿಸಲು ಮತ್ತು ಉತ್ಕೃಷ್ಟಗೊಳಿಸಲು ಸಹಾಯ ಮಾಡಿದ್ದೀರಿ ಎಂದು ಕೇಳಿ ನನಗೆ ವಿಶೇಷವಾಗಿ ಸ್ಫೂರ್ತಿ ದೊರಕಿತಂದಂತಾಗಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಈಶ್ವರ್ ಶರ್ಮಾ, ಈ ಮಾನ್ಯತೆಯಿಂದ ನಾನು ಗೌರವ ಮತ್ತು ವಿನಮ್ರನಾಗಿದ್ದೇನೆ. ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳಲ್ಲಿ ಅಭೂತಪೂರ್ವ ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಮತೋಲ ನಗೊಳಿಸಲು ಸಹಾಯ ಮಾಡುವ ಶಿಸ್ತಾಗಿ ಇದು ಯೋಗಕ್ಕೆ ಮಾನ್ಯತೆ ಎಂದು ನಾನು ಭಾವಿಸುತ್ತೇನೆ. ಈ ಪ್ರಶಸ್ತಿಯು ಯೋಗದ ಸಂದೇಶವನ್ನು ಪ್ರಪಂಚದಾದ್ಯಂತ ಹರಡಲು ನನ್ನ ಪ್ರಯತ್ನವನ್ನು ಮುಂದುವರಿಸಲು ಪ್ರೇರೇಪಿಸಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಶಾಲಾ ಪಠ್ಯಕ್ರಮದಲ್ಲಿ ಯೋಗ ಮತ್ತು ಧ್ಯಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.