ಬೆಂಗಳೂರು: ಇಂದು (ಫೆ.19) ಸುಮಾರು 1000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯ ಭಾಗ್ಯ ಕಂಡ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ನಟ ಡಾಲಿ ಧನಂಜಯ್ ಅಭಿಮಾನಿಗಳು ಮಾತ್ರ ಚಿತ್ರದ ನಿರ್ದೇಶಕ ನಂದ ಕಿಶೋರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಹೌದು, ನಂದ ಕಿಶೋರ ನಿರ್ದೇಶದಲ್ಲಿ ಮೂಡಿ ಬಂದಿರುವ ಪೊಗರು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ನಟಿಸಿದ್ದಾರೆ. ಆದರೆ, ನಿರ್ದೇಶಕರು ಈ ಸಿನಿಮಾದಲ್ಲಿ ಧನಂಜಯ್ ಅವರ ಪ್ರತಿಭೆಗೆ ತಕ್ಕಂತೆ ಪಾತ್ರ ಪೋಷಣೆ ಮಾಡಿಲ್ಲ ಎನ್ನುವುದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಹೊರ ಬಂದ ಡಾಲಿ ಹುಡುಗರು ನಿರ್ದೇಶಕರ ವಿರುದ್ಧ ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಮಗೆ ಪೊಗರು ಚಿತ್ರತಂಡದಿಂದ ಬಹುದೊಡ್ಡ ನಿರಾಸೆ ಆಗಿದೆ. ಕೆಲವರಿಗೆ ಪ್ರಭುದ್ಧ, ಪರಿಪಕ್ವವಾದ ನಟನೆ ಮಾಡೋ ನಟರನ್ನು ಸರಿಯಾಗಿ ಬಳಸಿಕೊಳ್ಳಲು ಬರೋದಿಲ್ಲ. ಸಣ್ಣ ಪುಟ್ಟ ಪಾತ್ರಗಳಿಗೆ ಬಳಸಿಕೊಂಡು ಅವರಿಗೆ ಇರೋ ಬೆಲೆಯನ್ನು ದಯವಿಟ್ಟು ಕಳೆಯಬೇಡಿ ಎಂದು ಮನವಿ ಮಾಡಿದ್ದಾರೆ.
ಒಬ್ಬ ನಟನಿಗೆ ಯಾವುದಾದರೂ ಒಂದು ಪಾತ್ರ ಕೊಡ್ತೀವಿ ಅಂದರೆ ಆ ನಟ ಯಾರು ? ಅವರಿಗೆ ತಕ್ಕಂತ ಪಾತ್ರನಾ ಎಂಬುದರ ಬಗ್ಗೆ ಮೊದಲು ಯೋಚನೆ ಮಾಡಿ. ಆ ನಟ ನಿಮ್ಮ ಮೇಲಿನ ನಂಬಿಕೆ ವಿಶ್ವಾಸಕ್ಕೆ ಒಲ್ಲೆ ಎನ್ನದೆ ಒಪ್ಪಿರುತ್ತಾರೇನೋ, ನೀವು ನೀಡುವ ಪಾತ್ರ ಅವರ ನಟನೆಗೆ ನ್ಯಾಯ ಒದಗಿಸುವಂತಿದ್ದರೆ ಮಾತ್ರ ಹಾಕಿಕೊಳ್ಳಬೇಕೆಂದು ಮತ್ತೊಬ್ಬ ಅಭಿಮಾನಿ ಪೊಗರು ನಿರ್ದೇಶಕರ ವಿರುದ್ಧ ಅಸಮಾಧಾನದಿಂದ ನುಡಿದಿದ್ದಾರೆ.