Advertisement
ಸಾಹಿತ್ಯ ಕ್ಷೇತ್ರಕ್ಕೆ ಕಥೆ, ಕಾದಂಬರಿ, ಅಂಕಣ ಸಾಹಿತ್ಯ, ನಾಟಕ, ಪ್ರಬಂಧ ಹೀಗೆ ಯಾವುದೇ ಮಾರ್ಗದ ಮೂಲಕ ಪ್ರವೇಶಿಸಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯಪ್ರೇಮಿಯ ಮೊದಲ ಒಲವು ಮಾತ್ರ ಕವನವೇ. ಕಾರಣ ಇಷ್ಟೇ, ಅಕ್ಷರಲೋಕಕ್ಕೆ ಧುಮುಕುವ ಹುಮ್ಮಸ್ಸಿಗೆ ಪೂರಕವೆಂಬಂತೆ ಕಡಿಮೆ ಸಮಯ ಮತ್ತು ಕಡಿಮೆ ಪದಗಳಲ್ಲಿ ತನ್ನ ಒಳಗುದಿಯನ್ನು ವ್ಯಕ್ತಪಡಿಸುವ ಧಾವಂತಕ್ಕೆ ದ್ವಾರವಾಗಿ ಕವಿತೆಯೇ ಆಯ್ಕೆಯಾಗಿಬಿಡುತ್ತದೆ.
Related Articles
Advertisement
ಒಂದೊಂದು ಕವಿತೆಯೂ ಒಂದೊಂದು ಭಾವಬೀಜ. ಓದಿದಾಗ ಅಥವಾ ಕೇಳಿದಾಗ ಮನದ ಮಣ್ಣಲ್ಲಿ ಬಿತ್ತರಗೊಂಡು ನಿರಂತರವಾಗಿ ನಿಧಾನವಾಗಿ ಸಾತತ್ಯದಲ್ಲಿ ಚಿಗುರುತ್ತದೆ; ವಿಕಸಿತಗೊಳ್ಳುತ್ತದೆ; ಮೊಗ್ಗು ಮೂಡುತ್ತದೆ; ಅರಳಿ ಹೂವಾಗುತ್ತದೆ. ಆಗಲೇ ನೋಡಿ ಕವಿತೆಯ ಘಮಲು, ಹೊಳಹು ಪಸರಿಸಿ ಹೃದಯಕ್ಕೆ ಮುದದಾಲಿಂಗನ ದಕ್ಕುವುದು. ಆ ಹೂವು ನಿಧಾನಕ್ಕೆ ಬೀಜವೊಂದನ್ನು ನೀಡಿದಾಗ ಓದುಗನಲ್ಲಿ ಹೊಸತೊಂದು ಸ್ಪೂರ್ತಿ ಚಿಮ್ಮಿ ಮನದಗರ್ಭದಲ್ಲೊಂದು ಕವಿತೆ ಆವಿರ್ಭವಿಸುತ್ತದೆ. ಹೊಸ ಕವಿತೆ ಹೊರಬರುತ್ತದೆ.
ಕವಿತೆಯ ಅರ್ಥ ಕೂಡ ಒಂದೇ ಬಗೆಯದ್ದಲ್ಲ. ಕವಿತೆ ಅಂಗೈಲಿ ಜೋಪಾನವಾಗಿ ಹಿಡಿದಿಟ್ಟ ದೀಪ. ಯಾರಿಗೆ ಯಾವ ಬೆರಳ ಸಂದಿಯಿಂದ ಹೊಮ್ಮಿದ ಬೆಳಕು ದಕ್ಕುವುದೋ ಅದೇ ಅವರ ಪಾಲಿನ ಅರ್ಥ. ಈ ನಮ್ಯತೆ ಕವಿತೆಗೆ ಇರುವ ಕಾರಣಕ್ಕೆ ಕವಿತೆಗೆ ಅನಂತತೆ ಮತ್ತು ಜನಪ್ರಿಯತೆ ಸಿಕ್ಕಿರುವುದು. ಕವಿತೆಯ ಸ್ವಾದ ದಕ್ಕಬೇಕಾದರೆ ಒಂದು ಕವಿತೆ ಓದಬೇಕು, ಅದನ್ನೇ ಮನದಲ್ಲಿ ಧ್ಯಾನಿಸಬೇಕು. ಅದು ಮಾಗಿ ತಾನೇ ತನ್ನೊಳಗಿನ ಒಂದು ಅರ್ಥವನ್ನು ಕೊಡುವ ತನಕ ಕಾಯಬೇಕು. ಅದರೊಟ್ಟಿಗೆ ಮಾಗಬೇಕು. ನಾವೂ ಕವಿತೆಯಾಗಿಬಿಡಬೇಕು…. ಕವಿತೆಯೊಂದಿಗೆ ಸಾಫಲ್ಯ ಸಾಧಿಸುವ ಸುಲಭ ಸಾಧ್ಯತೆ ಇದು.
-ಚಿದಂಬರ ಕುಲಕರ್ಣಿ
ಧಾರವಾಡ ವಿವಿ