Advertisement

ಕಾವ್ಯ ಕಸುಬಿಯ ಅನುಭವ ವಿಶೇಷ

08:24 PM Jul 27, 2019 | mahesh |

ತಮ್ಮ ಕತೆ, ಕಾದಂಬರಿ, ಕವಿತೆ, ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ವೈವಿಧ್ಯಮಯ ಪ್ರಯೋಗಶೀಲತೆಯನ್ನು ತೋರಿಸಿಕೊಟ್ಟಿರುವ ಕೆ.ವಿ. ತಿರುಮಲೇಶ್‌, ಈಗಾಗಲೇ ಅಕ್ಷಯ ಕಾವ್ಯ ಎಂಬ ಹೆಸರಿನ ಸುದೀರ್ಘ‌ ಕಾವ್ಯವನ್ನು ನೀಡುವ ಮೂಲಕ ಸಿಂಫ‌ನಿ ಕಾವ್ಯ (ಭಿನ್ನ ವಿಭಿನ್ನ “ಸ್ವರ’ಗಳ ಮೂಲಕ ಒಂದು ಕಾವ್ಯವಸ್ತುವನ್ನು ನಾಟಕೀಯ ರೀತಿಯಲ್ಲಿ ಮಂಡಿಸುವ ರಚನೆ) ಮಾದರಿಯನ್ನು ಕನ್ನಡ ಓದುಗರಿಗೆ ಪರಿಚಯಿಸಿ ಕೊಟ್ಟಿದ್ದಾರೆ. ಇದೀಗ ಇದೇ ಮಾದರಿಯ ಅವ್ಯಯ ಕಾವ್ಯ ಎಂಬ ನೀಳಾYವ್ಯವನ್ನು ಕನ್ನಡಿಗರ ಮುಂದಿಡುತ್ತಿದ್ದಾರೆ. ಇಲ್ಲಿ ವಿವಿಧ ಚಿಂತಕರ, ಕವಿಗಳ, ನಾನಾ ಸಿದ್ಧಾಂತಿಗಳ ವಾಕ್ಯಗಳು, ಶಿಷ್ಟ-ಜಾನಪದ ವಾಗ್ಮಿಯ ಮೂಲಗಳ ವಿಶಿಷ್ಟ ಸಂವೇದನೆಗಳು, ಎಲ್ಲೋ ನೋಡಿದ ದೃಶ್ಯಗಳು, ಎಲ್ಲೋ ಕೇಳಿಸಿದ ಮಾತುಗಳು, ನಿತ್ಯವೂ ನೋಡುವ ಸ್ಥಳಗಳು, ವರ್ಷಗಳ ಹಿಂದೆ ಒಡನಾಡಿದ ವ್ಯಕ್ತಿಗಳು ಹಾಗೂ ಪ್ರದೇಶಗಳು ಕಾಲಾಂತರದಲ್ಲಿ ನಮ್ಮಲ್ಲಿ ಹುಟ್ಟಿಸುವ ಸ್ಮತಿ-ಸಂವೇದನೆಗಳು, ಯಾವುದೋ ಪರಿಸರದ ಚಿತ್ರ/ವ್ಯಕ್ತಿಯ ಚಹರೆ/ ಪುರಾಣ-ಐತಿಹ್ಯ-ಚರಿತ್ರೆಗಳು ಕಲಿಸಿದ ಜೀವನ ದೃಷ್ಟಿಕೋನಗಳು ಇತ್ಯಾದಿ ಭಿನ್ನ ವಸ್ತು ವಿಷಯ/ಪ್ರಕಾರಗಳನ್ನು ಬಳಸಿಕೊಂಡು ಮುಖ್ಯ ವಸ್ತು (ಒಟ್ಟು ಅಸ್ತಿತ್ವದ ಅರ್ಥವೇನೆಂಬ ಅನ್ವೇಷಣೆ)ವಿನ ನಿರ್ವಹಣೆಯೊಂದಿಗೆ ಮನಗಾಣಿಸುವ ಕಲೆಗಾರಿಕೆಯನ್ನು ನೋಡುತ್ತೇವೆ. ಹೀಗೆ ಕಾವ್ಯ ನಿರೂಪಣೆಯಲ್ಲಿ ನಾಟಕೀಯ ವ್ಯಂಜಕತೆಯ ಸ್ವಾರಸ್ಯವನ್ನು ಓದುಗರು ಅನುಭವಿಸಬಹುದಾದ ವಿಶಿಷ್ಟ ಸಾಧ್ಯತೆಯನ್ನು ಕವಿ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಮುಖ್ಯ ಕಾವ್ಯ ವಸ್ತುವನ್ನು ಕಾವ್ಯೇತರ ವಸ್ತು ವಿಷಯಗಳ ಸಹಮೇಳನದೊಂದಿಗೆ ಪ್ರಸ್ತುತಪಡಿಸುವ ಈ ಮಾದರಿ ವಸ್ತುತಃ ಕ್ಲಿಷ್ಟಕರ ಕಾವ್ಯತಂತ್ರವೇ ಆಗಿದೆ.

Advertisement

ಇದೊಂದು ರೀತಿಯಲ್ಲಿ, ನಾಟಕ ಪ್ರಕಾರದಲ್ಲಿ ಕಾಣಿಸುವ ಏರುದನಿಯ ಸ್ವಗತದ (ಸಾಲಿಲೋಕ್ವಿ) ತಂತ್ರ; ಓದುಗನನ್ನು ಒಂದು ಅನುಭವ ಪ್ರಪಂಚದಿಂದ ಇತರ ವಿಭಿನ್ನ ಸಂವೇದನೆಯ ವಸ್ತು ಪ್ರಪಂಚಗಳೆಡೆಗೆ ಸಾಗುವಂತೆ ಮಾಡಿ, ಮೂಲ ವಸ್ತುವನ್ನು ಮುಂದುವರಿಸಲು ಅಗತ್ಯವಿರುವ ನಿರೂಪಣ ತಂತುವನ್ನು ರಕ್ಷಿಸಿಕೊಂಡು ಸ್ವಂತ ಅನುಭವ ವಿಶೇಷಗಳನ್ನು ಓದುಗರಿಗೆ ದಾಟಿಸುವ ರೀತಿಯಲ್ಲಿ ಸಾದರಪಡಿಸುವ ಶೈಲಿ ಇದು. ಒಂದು ರೀತಿಯಲ್ಲಿ ಇದು ತಿರುಮಲೇಶರು ತನ್ನ ಬರವಣಿಗೆಯ ಕಾಯಕದ ಹಿಂದಿನ ಪ್ರೇರಣೆಗಳನ್ನು ವಿವರಿಸುತ್ತಲೇ, ಸಮಷ್ಟಿಯ ಸೌಖ್ಯವೆಂದರೇನೆಂದು ಚಿಂತನೆಗೆ ಹಚ್ಚುವ; ತನ್ಮೂಲಕ ಅಸ್ತಿತ್ವದ ಸಾರ್ಥಕತೆ ಅಥವಾ ಅಸಾರ್ಥಕತೆಯ ವಿಶ್ಲೇಷಣೆ ನಡೆಸುತ್ತ, ಕೊನೆಗೂ ತನ್ನ ಅನುಭವವೇ ತನ್ನನ್ನು ನಿತ್ಯ ತಳಮಳಗಳಿಂದ ಕಾಪಾಡುವ ತೇಲು ತೆಪ್ಪ ಎಂಬುದನ್ನು ಏರುದನಿಯ ಸ್ವಗತದಲ್ಲಿ ಬಿತ್ತರಿಸಿರುವ ಆತ್ಮಕಥನಾತ್ಮಕ ರಚನೆಯೆನ್ನಬಹುದಾಗಿದೆ. ಇಲ್ಲಿನ ಬಹುಮುಖ್ಯ ಯಶಸ್ಸೆಂದರೆ, ತನ್ನ ನಿರೂಪಣೆ ಎಲ್ಲೂ ಹರಿಗಡಿಯದಂತೆ ಅದನ್ನು ಮೊದಲಿನಿಂದ ಕೊನೆಯ ತನಕವೂ ಮುಂದುವರಿಸುವಲ್ಲಿ ಹಾಗೂ ಓದುಗರನ್ನು ಸಹಪಯಣಿಗರನ್ನಾಗಿಸುವಲ್ಲಿ ತೋರಿರುವ ಓದುಗ ಸ್ನೇಹಿ ಕಾವ್ಯಶೈಲಿ. ಇದನ್ನು ರಂಗರೂಪಕವಾಗಿ ಪ್ರಯೋಗಿಸಬಹುದಾದ ಸಾಧ್ಯತೆಯೂ ಇದೆ ಎನ್ನುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

ಜಯರಾಮ ಕಾರಂತ

Advertisement

Udayavani is now on Telegram. Click here to join our channel and stay updated with the latest news.

Next