Advertisement
ಈಗ ಮತ್ತೆ ಆ ಪ್ರೀತಿಯ ಜೀವವನ್ನು ಇರುಳ ತುದಿಯ ನಸುಕಿನ ಏಕಾಂತದಲ್ಲಿ ನೆನಪಿಸಿಕೊಳ್ಳುತ್ತ ಕೂತಿದ್ದೇನೆ. ಶರ್ಮರಿಗೆ ಕಾವ್ಯವೆಂಬುದು ಹೇಗಿರಬೇಕು ಎಂಬ ಬಗ್ಗೆ ತಮ್ಮದೇ ಆದ ನಿಷ್ಠುರ ನಿಲುವುಗಳಿದ್ದವು. ಸಿದ್ಧ ಸೂತ್ರಗಳೂ ಇದ್ದವು. ತಮಗೆ ತಾವೇ ಹಾಕಿಕೊಂಡ ಲಕ್ಷ್ಮಣರೇಖೆಯನ್ನು ಈ ಮರ್ಯಾದಾ ರಾಮಚಂದ್ರ ಎಂಥ ಸಂದರ್ಭದಲ್ಲೂ ಮೀರುವ ಪೈಕಿಯಲ್ಲ. ಕಾವ್ಯ ಕಥೆ ಹೇಳಬಾರದು, ಕಾವ್ಯ ಹಾಡಿಗೆ ಒಗ್ಗುವಂತೆ ಇರಬಾರದು, ಅಸಲಿ ಕಾವ್ಯವನ್ನು (ಕವಿತೆಗಳನ್ನು) ಹಾಡಲೇ ಬಾರದು, ಹಾಡುವಂಥ ಕಾವ್ಯ ಬರೆದರೆ ಕಾವ್ಯನಿಷ್ಠೆಯ ವ್ರತಭಂಗವಾದಂತೆಯೇ, ಕಾವ್ಯವು ಜಾಳಾಗುವುದಕ್ಕೆ ಗೀತೆಗಳ ರಚನೆ ಕಾರಣವಾಗುವುದು ಎಂದು ಶರ್ಮರು (ನಾನು ಅವರನ್ನು ಶರ್ಮಾಜಿ ಎಂದೇ ಕರೆಯುತ್ತಿದ್ದೆ) ದೃಢವಾಗಿ ನಂಬಿದ್ದವರು. “ಒಳ್ಳೆಯ ಕಾವ್ಯ ಬರೆಯುವ ನೀವು, ಲಕ್ಷ್ಮಣ ರಾವ್ ಹಾಡು ಬರೆದು ಯಾಕೆ ಹಾಳಾಗುವಿರಿ’ ಎಂದು ಅವಕಾಶ ಸಿಕ್ಕಾಗಲೆಲ್ಲ ಬೈಯುತ್ತಿದ್ದರು. ಆದರೆ, ಚಿಂತಾಮಣಿಯಲ್ಲಿ ನಡೆದ ನಮ್ಮ ಹಾಡುಗಳ ಸಂಗ್ರಹವನ್ನು ಬಿಡುಗಡೆ ಮಾಡಲು ಶರ್ಮರನ್ನೇ ನಾವು ಆಹ್ವಾನಿಸಿದ್ದೆವು. ಆಗ ಅವರು ಒಂದು ಲೇಖನವನ್ನೇ ಬರೆದು ತಂದು ಓದಿದರು. ಆ ಲೇಖನದಲ್ಲಿ ನಮ್ಮಿಬ್ಬರ ಬರವಣಿಗೆಯನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸಿ, ಕಾವ್ಯಗುಣವನ್ನು ಮನಸಾರೆ ಮೆಚ್ಚಿ , ಜೊತೆಗೆ ಯಥಾಪ್ರಕಾರ ಹಾಡು ಬರೆಯುವುದರ ವಿರುದ್ಧ ಎಚ್ಚರಿಕೆಯ ಕಿವಿಮಾತನ್ನೂ (ಲೌಡ್ ಸ್ಪೀಕರ್ ಮೂಲಕವೇ) ಹೇಳಿದ್ದರು. ಶರ್ಮರ ಕಟೂಕ್ತಿಗೆ ಅವರ ಅಲಂಘನೀಯ ಕಾವ್ಯ ಸಿದ್ಧಾಂತ ಮತ್ತು ಅನನ್ಯವಾದ ಕಾವ್ಯಪ್ರೀತಿಯೇ ಕಾರಣವೆಂಬುದು ತಿಳಿದಿದ್ದರಿಂದ ಅವರ ಟೀಕೆ ಯಾವತ್ತೂ ನಮ್ಮ ಸ್ನೇಹಸಂಬಂಧಕ್ಕೆ ಅಡ್ಡಬರಲಿಲ್ಲ.
Related Articles
Advertisement
ಬಂಡಾಯದ ಆವೇಶದಲ್ಲಿ ತಮ್ಮ ಕಾವ್ಯರಚನೆ ಶುರುಮಾಡಿದ ಶರ್ಮಾಜಿ, ಎರಡನೆಯ ಘಟ್ಟದಲ್ಲಿ ಸಮಷ್ಠಿಯ ನೆಲೆಯಿಂದ ವ್ಯಷ್ಠಿಯ ನೆಲೆಗೆ ಹೊರಳಿದರು. ಗಹನವಾದ ಕೆಲವು ನವ್ಯ ಕವಿತೆಗಳನ್ನು ಬರೆದರು. ಕಾಮದ ಮೂಲಕ ಅನುಭವದ ಶೋಧಮಾಡಿದರು. ತಮ್ಮ ದೇಶಾಂತರದ ಅನುಭವಗಳನ್ನು ಕನ್ನಡಕ್ಕೆ ದಕ್ಕಿಸಲು ತಮ್ಮ ಕಾವ್ಯಜೀವನದ ಉದ್ದಕ್ಕೂ ಪಟ್ಟುಬಿಡದೆ ಹೋರಾಡಿದರು. ಒಂದೊಂದು ಕವಿತೆಯೂ ಭರವಸೆಯ ವ್ಯವಸಾಯ; ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ- ಎಂದು ನಂಬಿ ಬರೆದರು. ಕವಿತೆಯ ರಚನೆಯನ್ನು ಸಮುದ್ರದಾಳಕ್ಕೆ ಮುಳುಗಿ ಮುತ್ತು ತರುವ ಮುಳುಗುಗಾರ ಕುಂಗನ ನಿಷ್ಠೆಗೆ ಹೋಲಿಸಿಕೊಂಡು ಅರ್ಥಪೂರ್ಣ ಕಾವ್ಯ ಕಟ್ಟಿದರು. ಅವರ ಏಳು ಸುತ್ತಿನ ಕೋಟೆಯ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಹೇಸರಗತ್ತೆ ಅಸಹಜ ಬೆರಕೆಯಿಂದ ನಿರ್ವೀರ್ಯಗೊಳ್ಳುವ ಜೀವದ ವಿಫಲತೆಯನ್ನು ಆವತ್ತಿನ ಸಾಮಾಜಿಕ ವಿಷಮತೆಯ ಹಿನ್ನೆಲೆಯಲ್ಲಿ ಧ್ವನಿಪೂರ್ಣವಾಗಿ ಕಟ್ಟಿಕೊಟ್ಟರು. ಯಾವತ್ತೂ ಅವರ ಕಾವ್ಯ ಲಯ ತಪ್ಪಲಿಲ್ಲ. ಪ್ರತಿಮಾ ಮಾರ್ಗವನ್ನು ಬಿಟ್ಟುಕೊಡಲಿಲ್ಲ. ಅವರ ವಾಚನದ ಏರುಧ್ವನಿ, ಅತಿ ನಾಟಕೀಯತೆ ಕೆಲವೊಮ್ಮೆ ಅವರ ಕಾವ್ಯದ ಸೂಕ್ಷ್ಮತೆಗೆ ತದ್ವಿರುದ್ಧವಾಗಿ ನಿಲ್ಲುತ್ತ ಇತ್ತು. ಆದರೆ, ಕಾವ್ಯದಲ್ಲಿ ಮಾತಿನ ರೆಟರಿಕ್ಕನ್ನು ಅವರು ಯಾವತ್ತೂ ಬಳಸಲಿಲ್ಲ. ಕೆಲವೇ ಮಾತುಗಳಲ್ಲಿ ಹೃದಯ ಝಲ್ಲೆನ್ನುವಂತೆ ಹೃದ್ಯವಾದ ಅನುಭವವನ್ನು ಕಟ್ಟಿಕೊಡುವ ಅವರ ಕ್ರಮ ಅತ್ಯಂತ ವಿಧಾಯಕವಾದದ್ದು. ತಕ್ಷಣ ನನಗೆ ಅವರ ಯುದ್ಧದ ಶೀತಲ ಅನುಭವವನ್ನು ಚಿತ್ರಿಸುವ ಕಿರುಗವನವೊಂದು ನೆನಪಾಗುತ್ತದೆ.
ಹಠಾತ್ತನೆ ಬಿಸಿಲುತಗುಲಿ ಥಳ ಥಳ ಹೊಳೆದ
ಪಿಸ್ತೂಲು ಕಂಡು
ಯೋಧ ಕೂಗಿದ
ನೆಲಕ್ಕೆಸೆದು ಕೈಯೆತ್ತಿ ನಿಲ್ಲು
ಮಾತು ಕೇಳದೆ ನಡೆದ
ಹುಟ್ಟು ಕಿವುಡ ಹುಡುಗನೆದೆ ಹೊಕ್ಕ ಗುಂಡು
ಬೆನ್ನಿಂದ ಹೊರಬಂತು
ಮುಗ್ಗುರಿಸಿ ಓಡೋಡಿ ಬಂದ ಮುದಿಉಕಿ ಕೆಂಪು ತಿರುಗುತ್ತಿದ್ದ ಹುಲ್ಲೊಳಗೆ ಹುಡುಕಿ ಹಬ್ಬಕ್ಕೆ ಕೊಂಡು ತಂದಿದ್ದ ನಿಗಿನಿಗಿ ಗೊಂಬೆ
ಹಿಡಿದೆದ್ದು ನಿಂತು ತಲೆಯೆತ್ತಿದಾಗ ಸೂಜಿ ಬಿಸಿಲು ಚುಚ್ಚಿ ಕಣ್ಣಲ್ಲಿ ನೀರೊಡೆಯಿತು ಅವಳ ಮುಖದ ಹತ್ತು ಕಾಲುವೆ ತುಂಬ ಕೋಡಿ ಹರಿಯಿತು. ಈ ಕವಿತೆಯಲ್ಲಿ ಕಾಣುವ ಮಾತಿನ ಸಂಯಮ, ಚಿತ್ರದ ಜೀವಂತಿಕೆ, ಯುದ್ಧದ ಕ್ರೌರ್ಯ, ಆವರಿಸುವ ದುರಂತವ್ಯಂಗ್ಯ ಅಸಾಮಾನ್ಯವಾದುದು. ಶರ್ಮರ ಈ ಅದ್ಭುತ ಕವಿತೆಯನ್ನು ನಾನು ಯಾವತ್ತೂ ಮರೆಯಲಾರೆ. ಶರ್ಮರ ಕೊನೆಯ ಕಾವ್ಯ ಸಂಗ್ರಹ ಸಪ್ತಪದಿ ಗಂಡು-ಹೆಣ್ಣಿನ, ಅದರಲ್ಲೂ ಪತಿ-ಪತ್ನಿಯ ಸಂಬಂಧದ ಸಂಕೀರ್ಣತೆಯನ್ನು ಚಿತ್ರವತ್ತಾಗಿಯೂ ಹೃದ್ಯವಾಗಿಯೂ ಚಿತ್ರಿಸುವ ಬಹಳ ಸೊಗಸಾದ ಸಾನೆಟ್ಟುಗಳ ಸಂಗ್ರಹ (ಶರ್ಮ ಮತ್ತು ಸೂಕ್ಷ್ಮ ಸಾಹಿತ್ಯ ಸಂವೇದನೆಯ ಪದ್ಮಾ ರಾಮಚಂದ್ರಶರ್ಮರ ಸುದೀರ್ಘ ದಾಂಪತ್ಯ ಜೀವನದ ಪಕ್ವ ಫಲ ಈ ಕಾವ್ಯ ಎನ್ನಬಹುದು). ಶರ್ಮರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರಕಿಸಿದ ಕವಿತಾಸಂಗ್ರಹವಿದು.ನಲವತ್ತು ವರ್ಷಗಳ ಸುದೀರ್ಘ ಪ್ರಯಾಣ ಕೊನೆಯಾಗಿ ಇಲ್ಲಿ ಈಗ ಬೆಳ್ಳಿà ಮರಳಲ್ಲಿ ನಿಂತ ನಾವಿಕ ನಾನು. ಮಂಜಾದ ಮುದಿಗಣ್ಣ ಕೆಣಕುವ ಹಾಗೆ ಎಗ್ಗಿಲ್ಲದಂತೆ ಮೈಚೆಲ್ಲಿ ಮಲಗಿದ ಕಡಲು ನೀನು. ಇಂಥ ಸಾಲುಗಳನ್ನು ಸಪ್ತಪದಿಯಲ್ಲಿ ಓದಿದಾಗ ಶರ್ಮರ ಕಾವ್ಯದ ಅಸಲಿ ಕಸುಬಿನ ಬಗ್ಗೆ ಯಾರಿಗೆ ತಾನೆ ಗೌರವ ಮೂಡುವುದಿಲ್ಲ?
.
ಶರ್ಮರನ್ನು ನೆನೆದಾಗ ಕೆಲವು ಬಿಡಿಚಿತ್ರಗಳು ಥಟ್ಟನೆ ನನ್ನ ಕಣ್ಮುಂದೆ ಪ್ರಜ್ವಲಿಸುತ್ತವೆ:
ಚಿತ್ರ 1: ಚಿಂತಾಮಣಿಯ ಕಾರ್ಯಕ್ರಮವೊಂದಕ್ಕೆ ನಾವೆಲ್ಲ ಹೋಗಿದ್ದಾಗ ಕಾರ್ಯಕ್ರಮ ಶುರುವಾಗುವ ಮುನ್ನ ಬಳಗದ ಸಂಪ್ರದಾಯದಂತೆ ದೇವಾಲಯಕ್ಕೆ ಸಂಜೆಯ ಆರತಿಗೆ ಹೋದಾಗ, ಶರ್ಮ, “ನಾನು ಗುಡಿಯ ಒಳಗೆ ಬರಲಾರೆ’ ಎಂದು ದೇವಾಲಯದ ಹೊರಗೆ ಜಗಲಿಯ ಮೇಲೆ ಕೂತ ಚಿತ್ರ.
ಚಿತ್ರ 2: ಪಾರ್ಟಿಯೊಂದು ಮುಗಿದಾಗ ಸರಿರಾತ್ರಿಯಲ್ಲಿ ಪರ್ಸಿಗಾಗಿ ಜೇಬು ತಡಕಿ “ಮೈಗಾಡ್ ನನ್ನ ಪರ್ಸ್ ಮರೆತು ಬಂದಿದ್ದೇನಲ್ಲ’ ಎಂದು ಕೈ ಕೊಡವಿ ಪೇಚಾಡುತ್ತ ನಿಂತ ಕಸಿವಿಸಿಯ ಚಿತ್ರ.
ಚಿತ್ರ 3: ಧರ್ಮಸ್ಥಳದಲ್ಲಿ ನಾವು ಉಳಿದಿದ್ದ ಮೂರಂತಸ್ತಿನ ಮಹಡಿಯಿಂದ ಅವರ ಕೈಜಾರಿ ಕನ್ನಡಕ ಕಿಟಕಿಯಾಚೆ ಬಿದ್ದಾಗ, ನಾವೆಲ್ಲಾ ಕೆಳಕ್ಕೆ ಹೋಗಿ ಶರ್ಮರ ಕನ್ನಡಕವನ್ನು ಅವರೊಂದಿಗೆ ಸೇರಿ ಟಾರ್ಚಿನ ಬೆಳಕಲ್ಲಿ ಹುಡುಕುವ ಚಿತ್ರ!
ಚಿತ್ರ 4: ಶರ್ಮರನ್ನು ಕಾಣಲು ನಾವು ಕೆಲವರು ಅವರ ಮನೆಗೆ ಹೋದಾಗ ಅವರು ಲಾನ್-ಟೆನ್ನಿಸ್‌ನ ವೀಕ್ಷಣೆಯಲ್ಲಿ ಮಗ್ನರಾಗಿ ಮೈಮರೆತಿದ್ದವರು, ಕಾವ್ಯಕ್ಕೆ ಬದಲು ಟೆನ್ನಿಸ್‌ನ ಬಗ್ಗೆ ನಮಗೆ ಅರ್ಧ ತಾಸು ಕಾಮೆಂಟರಿ ಕೊಟ್ಟ ಚಿತ್ರ!
ಹೋಳು ಮುಖ, ಚೂಪುಗಣ್ಣು, ಬಾಯಿಂದ ಉಗುಳುವ ಸಿಗರೇಟಿನ ಹೊಗೆ, ಮೆಟ್ಟಿಲು ಮೆಟ್ಟಿಲು ಕ್ರಾಪು, ಆಗಾಗ ಎದೆಯನ್ನೊತ್ತಿಕೊಂಡು ಉಸಿರಾಟದ ಸಿಕ್ಕು ಬಿಡಿಸಿಕೊಂಡು ಸಲೀಸು ಮಾಡಿಕೊಳ್ಳುವಾಗ ಅವರ ಕಣ್ಣಲ್ಲಿ ಹೊರಳುವ ನೀರಪಸೆ, ಹರಟೆ ಮುಗಿಸಿ ಮನೆಗೆ ಹೊರಡುವಾಗ ಗಟ್ಟಿಯಾಗಿ ಕೈಹಿಡಿದು ಬೀಳ್ಕೊಡುವ ಸ್ನೇಹದ ಬಿಸಿ ಮರೆಯಲಿಕ್ಕಾಗದ್ದು. ಕನ್ನಡದ ಈ ಗಟ್ಟಿಕವಿ ರಾಮಚಂದ್ರಶರ್ಮ ನನ್ನನ್ನು ಸದಾ ಕಾಡುವ ಕಾವ್ಯಪ್ರತಿಮೆ. – ಎಚ್. ಎಸ್. ವೆಂಕಟೇಶಮೂರ್ತಿ