ಸು. ರಂ. ಎಕ್ಕುಂಡಿ, ಬಿ. ಸಿ. ರಾಮಚಂದ್ರಶರ್ಮ ನಾನು ಒಟ್ಟಿಗೇ ಹೋಗಿದ್ದೆವು. ಪಗಡೆ ಹಾಸಿನ ಹಣ್ಣಿನ ಮನೆಯಲ್ಲಿ ಬೇರೆ ಬೇರೆ ಬಣ್ಣದ ಕಾಯಿಗಳು ಒಟ್ಟಿಗೇ ಸೇರಿದಂತೆ ಇತ್ತು! ಮೊದಲ ಕವಿಗೋಷ್ಠಿ ನೀನಾಸಂ ರಂಗಮಂದಿರದಲ್ಲಿ. ಅದನ್ನು ನಡೆಸಿಕೊಟ್ಟವರು ಕೀರ್ತಿನಾಥ ಕುರ್ತಕೋಟಿ. ಕವಿಗಳನ್ನು ಕುರಿತು ಕೀರ್ತಿ ಕೆಲವು ಮಾತುಗಳನ್ನು ಹೇಳುವುದು. ಆ ಬಳಿಕ ಆಯಾ ಕವಿಗಳು ತಮ್ಮ ಕವಿತೆಗಳನ್ನು ವಾಚಿಸುವುದು. ಕವಿಗೋಷ್ಠಿ ಎಂದರೆ ಹೀಗಿರಬೇಕು ಎನ್ನುವಂತೆ ಗೋಷ್ಠಿ ನಡೆಯಿತು. ಉತ್ಸವದ ಕೊನೆಯ ದಿನ ಸಾಗರದಲ್ಲಿ ಮತ್ತು ಇನ್ನೊಂದು ಗ್ರಾಮಾಂತರ ಪ್ರದೇಶದಲ್ಲಿ ಸುಬ್ಬಣ್ಣ ಕವಿಗೋಷ್ಠಿ ಏರ್ಪಡಿಸಿದ್ದರು. ನಾನಂತೂ ಹಳ್ಳಿಗೆ ಹೋಗಲೊಲ್ಲೆ- ಎಂದು ಶರ್ಮ! ಅಲ್ಲಿ ನನ್ನ ಬಿಕ್ಕಟ್ಟಾದ ಕವಿತೆ ಯಾರಿಗೆ ಅರ್ಥವಾಗುತ್ತದೆ- ಇದು ಅವರ ನಿಲುವು. “ಸಾಗರ ಪಟ್ಟಣದಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಾನು ಕವಿತೆ ಓದುವೆ’ ಎಂದರು ಶರ್ಮಾಜಿ. ಸುಬ್ಬಣ್ಣ ನನಗೆ, “ನೀವು ಎಕ್ಕುಂಡಿಯೊಂದಿಗೆ ಹಳ್ಳಿಗೆ ಹೋಗಿ’ ಎಂದರು. “ನನಗೇನು ಹಳ್ಳಿ ಹೊಸದೆ? ಮರಳಿ ತವರಿಗೆ’ ಎಂದು ಎಕ್ಕುಂಡಿ ಕುಲುಕುಲು ನಕ್ಕರು. ಅವರು ಮಾತಾಡುವಾಗ ತುಸು ಬೆನ್ನ ಬಾಗಿಸಿ, ಬಟ್ಟಲು ಕಣ್ಣುಗಳನ್ನು ಗುಂಡಗೆ ಅರಳಿಸಿ ಖೊಳ್ ಎಂದು ಮಗುವಿನ ಅಕಾರಣ ನಗು ನಗುತ್ತ, “ನಾವು ಹಳ್ಳಿಗೇ ಹೋಗೋಣ ಬಿಡಿ… ಹೂಂ’ ಎಂದು ನನ್ನ ಬೆನ್ನು ಚಪ್ಪರಿಸಿದರು. ಎಕ್ಕುಂಡಿ “ಹೂಂ’ ಎಂದು ರಾಗವೆಳೆಯು ವುದರಲ್ಲೇ ಒಂದು ಸೊಗಸಿತ್ತು. ಹಂ, ಹೂಂ, ಇತ್ಯಾದಿ ಉದ್ಗಾರಗಳನ್ನು ಅವರು ತಮ್ಮ ಸಂಭಾಷಣೆಯ ವೇಳೆ ಮತ್ತೆ ಮತ್ತೆ ಬಳಸುತ್ತ ಇದ್ದರು. ಅವರು ಕವಿತೆ ಓದುವಾಗ ಹಾಡುತ್ತಿರುವರೋ ಎನ್ನುವಂತೆ ಎಳೆದು ಎಳೆದು ಓದುತ್ತಿದ್ದರು. ಹಿಂದಿನಿಂದಲೂ ಅವರ ಕಥನ- ಕವನಗಳು ನನಗೆ ಮೋಡಿ ಹಾಕಿದ್ದವು. ಅವರ ಹಾವಾಡಿಗರ ಹುಡುಗ ಅದೆಷ್ಟು ಬಾರಿ ಓದಿದ್ದೆನೋ! ಅವರೊಂದಿಗೆ ಹಳ್ಳಿಯೊಂದರಲ್ಲಿ ಕವಿತೆ ಓದುವುದು ನನಗೆ ಪ್ರಿಯವಾಗಿತ್ತು. ರಾಮಚಂದ್ರ ಶರ್ಮರನ್ನೂ ನಾನು ವಿಶೇಷವಾಗಿ ಹಚ್ಚಿಕೊಂಡಿದ್ದೆನಾದರೂ ಎಕ್ಕುಂಡಿಯವರೊಂದಿಗೆ ನನ್ನ ಒಡನಾಟ ತುಂಬ ಆಪ್ತವಾಗಿತ್ತು. ವಯಸ್ಸಾದರೂ ಪುತಿನ ಮತ್ತು ಎಕ್ಕುಂಡಿಯವರ ಮುಖಗಳಲ್ಲಿ ಹಾರ್ಲಿಕ್ಸ್ ಬೇಬಿಯ ಮುಗ್ಧ ಸೌಂದರ್ಯವಿರುತ್ತಿತ್ತು. ಆ ಮಗುತನ ಆ ಇಬ್ಬರು ಮಹಾ ಪ್ರೌಢರ ಟ್ರೇಡ್‌ಮಾರ್ಕ್ ಎನ್ನುವಂತಿತ್ತು. ವಯಸ್ಸಾಗಿದ್ದರೂ ಮಗುವಿನ ನಗೆಯನ್ನು ಅವರ ಮುಖಗಳು ಮರೆತೇ ಇರಲಿಲ್ಲ. “”ಓಹೋ, ಮೂರ್ತಿಯವರು… ಬನ್ನಿ ಬನ್ನಿ ಹೂಂ… ನರಹಳ್ಳಿಯವರೂ ಬಂದಿದ್ದಾರೆ” ಎನ್ನುತ್ತಿ ದ್ದರು ಎಕ್ಕುಂಡಿ ಶ್ರೀರಾಂಪುರದ ರೈಲ್ವೇ ಸ್ಟೇಷನ್ ಬಳಿ ಇದ್ದ ಎಕ್ಕುಂಡಿ ಮನೆಗೆ ನಾವು ಹೋದಾಗ. “”ನಿಮ್ಮನ್ನು ಯಾಕೋ ನೋಡಬೇಕೆನ್ನಿಸಿತು. ಬಂದೆವು” ಎಂದು ನಾನು ಹೇಳಿದರೆ, “”ಹಾಂ, ಅಲ್ಲವೇ ಮತ್ತೆ ಬರಲೇಬೇಕು. ಹೂಂ… ಬಾಗಿಲು ತೆರೆದಾಗ ಮನೆಯೊಳಕ್ಕೆ ಎಳೆಬಿಸಿಲು ಬರುತ್ತಲ್ಲ ಹಾಗೆ ವಯಸ್ಸಾದವರ ಮನೆಗೆ ಚಿಕ್ಕವರು ಬರುತ್ತ¤ ಇರಬೇಕು” ಎಂದು ಎಕ್ಕುಂಡಿ ಮುಖದ ತುಂಬ ನಗುತ್ತ¤ ಇದ್ದರು.
Advertisement
ಹೆಗ್ಗೊàಡಿನ ವಿಷಯ ಹೇಳುತ್ತ ಇದ್ದೆ. ಒಂದು ಜೀಪಿನಲ್ಲಿ ನಾನು ಮತ್ತು ಎಕ್ಕುಂಡಿ, ಸುಬ್ಬಣ್ಣ ಸೂಚಿಸಿದ್ದ ಹಳ್ಳಿಗೆ ಹೋದಾಗ ರಾತ್ರಿ ಎಂಟುಗಂಟೆ ಸಮಯ. ಟೀ ಕುಡಿಯಲಿಕ್ಕೆ ಒಂದು ಚಾ ಅಂಗಡಿಗೆ ಹೋದೆವು. ಚಾ ಅಂಗಡಿಯಲ್ಲಿ ಚಿನ್ನಾರಿ ಮುತ್ತದ ಹಾಡು ಹಚ್ಚಿದ್ದರು. “”ಓಹೋ, ಎಲ್ಲಿ ಹೋದರೂ ನಿಮ್ಮದೇ ಹಾಡು. ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಎಷ್ಟು ಸೊಸಾಗಿದೆಯಪ್ಪಾ” ಎಂದು ಎಕ್ಕುಂಡಿ ಉದ್ಗಾರ ತೆಗೆದರು. ಬಹಳ ಹಿಂದಿನಿಂದಲೂ ಎಕ್ಕುಂಡಿ ಮತ್ತು ನನ್ನ ನಡುವೆ ಪತ್ರವ್ಯವಹಾರವಿತ್ತು. ಅವರು ಬೆಂಗಳೂರಿಗೆ ಬಂದ ಮೇಲೆ ನಮ್ಮ ಒಡನಾಟ ಮತ್ತಷ್ಟು ನಿಕಟವಾಯಿತು. ಹೇಳಿ ಕೇಳಿ ಎಕ್ಕುಂಡಿ ಕಥೆ ಹೇಳುವ ಕವಿ ಅಲ್ಲವೆ? ನಾನು ಮಿಥಿಲೆಗೆ ಹೋಗಿ ಜನಕ ರಾಜನ ಹೊಲದ- ಎಂಬ ಅವರ ಮನೋಹರ ಕವಿತೆಯನ್ನು ಅವರು ದೀರ್ಘ ಏರಿಳಿತದೊಂದಿಗೆ ಹಾಡುಮಾಡಿ ಹೇಳುವಾಗ ಅದನ್ನು ಕೇಳಿ ಮರುಳಾಗದವರು ಯಾರು? ಅವರ ಕವಿತೆಗಳಲ್ಲಿ ದೇವತೆಗಳು ಮನುಷ್ಯರಾಗುತ್ತಿದ್ದರು; ಮನುಷ್ಯರು ದೇವತೆಗಳಾಗುತ್ತಿದ್ದರು. ಆ ರಾತ್ರಿ ಎಕ್ಕುಂಡಿ ಆ ಹಳ್ಳಿಯಲ್ಲಿ ಕೊಳದ ಗೌರಿ ಎಂಬ ಪದ್ಯ ಓದಿದರು. ಆ ಪದ್ಯ ಕೇಳಿದಾಗ ಕವಿತೆಯ ಕೊನೆಗೆ ಆಸ್ಫೋಟವಾಗುವ ಬೆರಗು ನನ್ನನ್ನು ದಂಗುಬಡಿಸಿತ್ತು. ಹಳ್ಳಿಯ ರಸಿಕರು ಆಹಾ! ಎಂದು ಉದ್ಗಾರ ತೆಗೆದಿದ್ದರು. ಆ ಪದ್ಯದಲ್ಲಿ ಕೊಳದ ಗೌರಿ ಕೊಳದ ಮೆಟ್ಟಿಲ ಮೇಲೆ ಕೂತು ತನ್ನ ಹೊಂಬಣ್ಣದ ಕೂದಲುಗಳನ್ನು ಬಾಚಿಕೊಳ್ಳುತ್ತ ಇದ್ದಾಳೆ. ಸುತ್ತೂ ಸಂಪನ್ನವಾದ ಪ್ರಕೃತಿ. ತಾವರೆ, ಹಂಸ, ಮೀನ, ತಂಬೆಲರು. ತೇಲುವ ಮೋಡ, ಆಡುವ ನವಿಲುಗಳು. ನವಿಲು ತನ್ನವಳಿಗೆ ಹೇಳುತ್ತದೆ: “ಇಲ್ಲಿ ಬಾ ನೋಡೆ ಇಲ್ಲಿ. ಕಣ್ಣುಗಳ ಪುಣ್ಯವೇ ಹಣ್ಣಾಗಿ ಹೆಣ್ಣಾಗಿ ಕುಳಿತ ಹಾಗಿಲ್ಲವೇ ಮೆಟ್ಟಿಲಲ್ಲಿ?’ ಆ ವೇಳೆಗೆ ಅದೆಲ್ಲಿದ್ದನೋ, ಒಬ್ಬ ಬಳೆಗಾರ ಕೊಳದ ಬಳಿಗೆ ಬಂದ. ಕೊಳದ ಗೌರಿಯನ್ನು ನೋಡಿದ. ಬಳೆಗಾರ ಕೂಗಿದ್ದ, “ಬೇಕೆ ಬಳೆಯು?’
ಗಳ ಬಳೆ, ಹವಳ ಮಾಣಿಕ್ಯಗಳ ಹೆ
ಣೆದ ಬಳೆಯು, ಹಸೆಮಣೆಯನೇ
ರಿಸುವ ಹಸನಾದ ಬಳೆ ಬೇಕೆ? ಬ
ಣ್ಣಗಳ ಗಾಜು ಬಳೆ, ಬೇಕೆ ಬಳೆಯು?
ಬಾರಯ್ಯ ಬಳೆಗಾರ, ಬಳೆ ತೊಡಿಸಿ ಹೋಗು ಎಂದು ಗೌರಿ ಬಳೆಗಾರನನ್ನು ಕೂಗಿದಳು. ಬಳೆಗಾರನಿಗೆ ಒಂದು ಕ್ಷಣ ಬೆರಗು: ಹೊಂಗೂದಲಿನ ತಾಯಿ ಯಾರು ಇವಳು? ಅಷ್ಟರಲ್ಲಿ ಬಳೆಮಾರುವ ವೃತ್ತಿಪರತೆ ಅವನ ಮೈಮರೆಸಿತು. ಮೆಟ್ಟಿಲ ಮೇಲೆ ಕೂತು ಕೊಳದ ಗೌರಿ ಕೈತುಂಬ ಬಳೆ ತೊಡಿಸಿಕೊಂಡಳು. ಹೋಗಿ ಆ ಗುಡಿಯಲ್ಲಿ ಕೇಳು… ಹಣ ಕೊಡುತ್ತಾರೆ ಎಂದಳು. ಬಳೆಗಾರ ಗುಡಿಗೆ ಬಂದ. ಹೊಂಗೂದಲಿನ ತಾಯಿ ಬಳೆ ತೊಡಿಸಿಕೊಂಡಿದ್ದಾರೆ! ನೀವು ಹಣ ಕೊಡುವುದಾಗಿ ಅಮ್ಮ ಹೇಳಿದರು. ಸ್ವಾಮಿ ಹಣ ಕೊಡಿ ಎಂದು ದೇವಿಗೆ ಆರತಿ ಎತ್ತುತ್ತಿದ್ದ ಅರ್ಚಕನ ಕೇಳಿದ. ಯಾವ ಬಳೆ? ಎಲ್ಲಿಯ ಹಣ? ತೊಡಿಸಿಕೊಂಡವರು ಯಾರು? ಎಂದು ಅರ್ಚಕನಿಗೆ ಬೆರಗು. ಕೊಳದ ಬಳಿ ಬಂದು ನೋಡಿದರೆ ಅಲ್ಲಿ ಯಾರೂ ಕಾಣುತ್ತಿಲ್ಲ. ಅರ್ಚಕ ಮತ್ತು ಬಳೆಗಾರ ತಿರುಗಿ ಗುಡಿಗೆ ಬಂದು ಏನೋ ಸಂದೇಹ ಬಂದು ದೇವಿಯನ್ನು ನೋಡುತ್ತಾರೆ. ವಿಗ್ರಹದ ಕೈತುಂಬ ಬಳೆಗಾರ ತೊಡಿಸಿದ್ದ ಹೊಸ ಬಳೆಗಳು ಕಾಣುತ್ತಿವೆ. ಇದು ಎಕ್ಕುಂಡಿಯವರ ಪದ್ಯದ ಒಂದು ಸೊಗಸಾದ ಮಾದರಿ. ದೇವಿ ಗೌರಿಗೆ ಬಳೆಗಾರ ಕಂಡಾಗ ಬಳೆ ಇಡಿಸಿಕೊಳ್ಳುವ ಆಸೆಯಾದದ್ದು ದೇವಿಯ ಮನುಷ್ಯಸಹಜ ವರ್ತನೆ. ಅದಕ್ಕೇ ಎಕ್ಕುಂಡಿ ಅನ್ನುತ್ತಿದ್ದರು: ದೇವರು ಮನುಷ್ಯರಾಗಬೇಕು; ಮನುಷ್ಯರು ದೇವರಾಗಬೇಕು!
ಜನ ನಿರಂಜನರಾಗಬೇಕು ಎನ್ನುವುದು ಅವರ ಬಹು ಪ್ರಸಿದ್ಧವಾದ ಉಕ್ತಿ!
Related Articles
Advertisement
ದಂಡಕದಂತೆ ಉದ್ದಕ್ಕೂ ಲಯದ ಅಲೆ ಮುಕ್ಕುಳಿಸುತ್ತ ಸಾಗುತ್ತಿದ್ದ ಎಕ್ಕುಂಡಿಯವರ ಕಥನ ಶೈಲಿ ಬಕುಳದ ಹೂಗಳು ಎಂಬ ಅವರ ಹೊಸ ಕವಿತಾ ಸಂಗ್ರಹದಲ್ಲಿ ಇದ್ದಕ್ಕಿದ್ದಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಬಿಟ್ಟಿತು. ಸರಾಗ ಸೆಳವಿನ ಬದಲು ನಿಂತು ನಿಂತು ಮುರಿದು ಮುರಿದು ವಿಲಕ್ಷಣ ಲಯದಲ್ಲಿ ಹರಿಯತೊಡಗಿತ್ತು. ಕವಿತೆ ಪೊರೆ ಕಳಚಿ ಹೊಸ ಬೆಡಗು ಪಡೆದ ಎಳೆನಾಗರವಾಗಿತ್ತು. ವಿಷವಿಲ್ಲದ ಎಳೆನಾಗರ! ದೈವವನ್ನು ಈ ಮಣ್ಣಲ್ಲೇ ಒಕ್ಕಿಕೊಳ್ಳುವ ಹೊಸ ಬೇಸಾಯ ಶುರುವಾಗಿಯೇ ಬಿಟ್ಟಿತು. ಕಾಳಿದಾಸನನ್ನು ಉಜ್ಜಯಿನಿಯ ಯಾತ್ರೆಗೆ ಬಂದ ಇಬ್ಬರು ರೈತರು ಭೇಟಿಮಾಡುವ ಕವಿತೆಯಂತೂ ನನ್ನನ್ನು ನಿಬ್ಬೆರಗುಗೊಳಿಸಿತ್ತು. ಆ ಕವನವೂ ಬಕುಳದ ಹೂವುಗಳು (1991) ಸಂಗ್ರಹದಲ್ಲಿ ಇದೆ! ಕುಂಭರಾಮ ಮತ್ತು ಭೈರೋಸಿಂಹ ಎಂಬ ಇಬ್ಬರು ರೈತರು ಶಿವರಾತ್ರಿಯ ಜಾತ್ರೆಗೆ ಬಂದವರು ಕವಿ ಕಾಳಿದಾಸನನ್ನು ನೋಡಲು ಕವಿಯ ಮನೆಗೆ ಬರುತ್ತಾರೆ. ಕವಿಯ ಮನೆ ಚೈತ್ರವೇ ಬಿಡಾರ ಹೂಡಿದಂತೆ ಇತ್ತು. ಇಬ್ಬರೂ ಕೈಮುಗಿದುಕೊಂಡು ಕಾದಿರಲು ಕವಿ ಹೊರಗೆ ಬಂದರು.
ಕೈಮುಗಿದು ಕಾದಿರಲು ಹೊರಗೆ ಬಂದರು ಆತ. ಮಂಜಿರದ ಮುಂಜಾವಿನಂಥ ಬಟ್ಟೆ,
ಹೆಗಲಲ್ಲಿ ಶಾಲು, ಮುಖದಲ್ಲಿ ನಗೆ, ಕೂ
ತಂತೆ ಹೊಂಬಾಳೆ ಎಲೆಯಲ್ಲಿ ಒಂದು ಚಿಟ್ಟೆ!
ಕವಿ ರೈತರನ್ನು ಒಳಗೆ ಕರೆದರು. “”ಸ್ವಾಮಿ ಮಹಾಕಾಲೇಶ್ವರನ ದರ್ಶನವಾಯಿತು. ದೊಡ್ಡವರು ತಾವು ಎಂಬುದು ತಿಳಿದು ತಮ್ಮನ್ನು ನೋಡಿಕೊಂಡು ಹೋಗಲು ನಿಮ್ಮ ಮನೆಗೆ ಬಂದೆವು. ಕವಿರತ್ನ ಕಾಳಿದಾಸರು ನೀವೇ ಅಲ್ಲವೆ? ಶಕುಂತಲೆಯನ್ನು ದೊರೆಗೆ ಒಪ್ಪಿಸಿದವರು ತಾವೇ ತಾನೇ? ತರುಣಿಗೆ ಒದಗಿದ ಶಾಪವನ್ನು ಉಂಗುರದಿಂದ ಕಳಿದವರು ನೀವೇ ಅಲ್ಲವೇ? ನೀವೇ ಅಲ್ಲವೇ ಮೋಡದೊಂದಿಗೆ ಮಾತಾಡಿದವರು?” “”ಈಗ ನನ್ನಿಂದ ತಮಗೆ ಏನಾಗಬೇಕು ಸ್ವಾಮಿ” ಎಂದು ಕಾಳಿದಾಸ ರೈತರನ್ನು ಕೇಳಿದರು. ಭೈರೋಸಿಂಹ ಎನ್ನುವ ರೈತ ನುಡಿದ, “”ನೀವು ಕಳಿಸಿದಿರಲ್ಲ ಒಂದು ಮೋಡ, ರಾಮಗಿರಿಯಿಂದ ಅಲಕಾವತಿಯ ಯಕ್ಷಿಗೆ? ಆ ಬಗ್ಗೆ ತಮ್ಮಲ್ಲಿ ಒಂದು ಬಿನ್ನಹವುಂಟು!” ಬಾಯೊಣಗಿ ನಿಂತಿಹುದು ನಮ್ಮ ಪಯರು
ಹನಿ ನೀರಿಲ್ಲದೆ. ಮೋಡಕ್ಕೆ ಹೇಳುವಿರೆ-
ದಾರಿಯಲ್ಲಿವರಿಗೂ ನೀರು ಸುರಿಸು
ಲೌಕಿಕ ಮತ್ತು ಅಲೌಕಿಕ ಸಹಜವಾಗಿ ಎಕ್ಕುಂಡಿಯವರಲ್ಲಿ ಕೈ ಹಿಡಿಯುವುದು ಹೀಗೆ. ಈ ಕವಿಯು ಸಾಮಾಜಿಕ ಪ್ರಜ್ಞೆ, ಜನಮುಖೀ ಕವಿತ್ವ ಎಂಬ ಮಾತಿಗೆ ಒದಗಿಸಿದ ಹೊಸ ಅರ್ಥವಿದು. ಬಂಡಾಯ ಹೀಗೂ ದನಿ ಪಡೆಯಬಹುದಲ್ಲವೆ?
ಬಕುಲದ ಹೂವುಗಳು ಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆಯಿತು. ಎಕ್ಕುಂಡಿ ಅಭಿಮಾನಿಗಳಾದ ನಮಗೆಲ್ಲÉ ಸಂತೋಷವೋ ಸಂತೋಷ. ಆಗ ವಿದ್ಯಾಭೂಷಣರು ಸುಬ್ರಹ್ಮಣ್ಯ ಮಠದ ಸ್ವಾಮಿಗಳು. ಅವರಿಂದ ನನಗೆ ಕರೆ ಬಂತು. “ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುವ ಎಕ್ಕುಂಡಿಯವರನ್ನು ಮಠ ಸನ್ಮಾನಿಸುತ್ತಿದೆ. ನೀವು ಮತ್ತು ಲಕ್ಷ್ಮೀಶ ತೋಳ್ಪಾಡಿ ಕವಿಯ ಬಗ್ಗೆ ಅಭಿನಂದನೆಯ ನುಡಿಗಳನ್ನು ಆಡಬೇಕು. ಬನ್ನಂಜೆಯವರು ಮುಖ್ಯ ಅತಿಥಿಗಳಾಗಿರುತ್ತಾರೆ!’ ಸುಬ್ರಹ್ಮಣ್ಯ ನೋಡಬೇಕೆಂಬ ಆಸೆಯಿತ್ತು. ಈಗ ಅವಕಾಶ ತಾನಾಗಿ ಒದಗಿಬಂದಿತ್ತು. ಜೊತೆಗೆ ಎಕ್ಕುಂಡಿಯವರೊಂದಿಗೆ ಸಹಪ್ರಯಾಣ. ಎಕ್ಕುಂಡಿ ಪತ್ನಿಯೊಂದಿಗೆ, ನಾನು ನನ್ನ ಶ್ರೀಮತಿಯೊಂದಿಗೆ. ಕಾರ್ಯಕ್ರಮ ಸೊಗಸಾಗಿ ನಡೆಯಿತು. ರಾತ್ರಿ ಊಟ ಮುಗಿದ ಮೇಲೆ ನಾವು ನಾಲ್ವರೂ ಪೌಳಿಯ ಜಗಲಿಯ ಮೇಲೆ ಕೂತು ಆ ಮಾತು ಈ ಮಾತು ಆಡುತ್ತ ಇದ್ದೇವೆ. ನಾನು, “ಸರ್! ನೀವು ಮಾರ್ಕ್ಸ್ ಮತ್ತು ಮಧ್ವರನ್ನು ಒಟ್ಟಿಗೇ ನಿಮ್ಮ ಕಾವ್ಯದಲ್ಲಿ ತರುತ್ತಿರುವ ಬಗ್ಗೆ ಕೆಲವರ ಆಕ್ಷೇಪವಿದೆ’ ಎಂದೆ ನಸುನಗುತ್ತ. ಎಕ್ಕುಂಡಿ ಯಥಾಪ್ರಕಾರ ತಮ್ಮ ಕಣ್ಣುಗಳನ್ನು ಗುಂಡಗೆ ಅರಳಿಸಿ “ಹೌದಾ? ಹಾಗಂತಾರಾ? ಯಾಕೆ ಹಾಗಂತಾರೆ ? ಮಧ್ವ ಮತ್ತು ಮಾರ್ಕ್ಸ್ ಇಬ್ಬರೂ ಮನುಷ್ಯರ ಹಕ್ಕಿನ ಪರವಾಗಿ ಹೋರಾಡಿದವರಲ್ಲವಾ?’
“ಹಕ್ಕಿನ ಬಗ್ಗೆಯಾ?’
“”ಹೂಂ… ಅಲ್ಲವಾ ಮತ್ತೆ. ಮಾರ್ಕ್ಸ್ ಮಹಾಶಯರು ಪ್ರತಿ ಮನುಷ್ಯನಿಗೂ ಒಂದು ತುಂಡು ನೆಲದ ಮೇಲೆ ಹಕ್ಕಿದೆ ಎನ್ನುತ್ತಾರೆ. ಮಧ್ವಾಚಾರ್ಯರು ಪ್ರತಿಯೊಬ್ಬ ಮನುಷ್ಯನಿಗೂ ಒಂದು ತುಂಡು ಆಕಾಶದ ಮೇಲೆ ಹಕ್ಕಿದೆ ಎನ್ನುತ್ತಾರೆ! ಅವರಿಬ್ಬರೂ ಒಟ್ಟಿಗೇ ಯಾಕೆ ಇರಬಾರದು?”
ಈವತ್ತಿಗೂ ಸುಬ್ರಹ್ಮಣ್ಯದ ಅರೆಬೆಳಕಿನ ಇರುಳಲ್ಲಿ ಜಗಲಿಯ ಮೇಲೆ ಕೂತು ಎಕ್ಕುಂಡಿ ಹೇಳಿದ ಈ ಮಾತು ನನ್ನ ಕಿವಿಯಲ್ಲಿ ಅನುರಣಿಸುತ್ತ ಇದೆ. ಎಚ್. ಎಸ್. ವೆಂಕಟೇಶಮೂರ್ತ