Advertisement
ಸಿದ್ದಲಿಂಗಯ್ಯ ಅವರು 1954ರ ಫೆಬ್ರವರಿ 3ರಂದು ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಅವರು 1974ರಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ, 1976ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರೊ| ಡಿ.ಎಲ್. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನು ಪಡೆದರು. ಪ್ರೊ| ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ “ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಪಿಎಚ್.ಡಿ. ಪದವಿಯನ್ನು ಗಳಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯೊಡೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನು ವ್ಯಕ್ತಪಡಿಸಲು ಸಿದ್ದಲಿಂಗಯ್ಯಅವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ “ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ “ಸಾವಿರಾರು ನದಿಗಳು’, “ಕಪ್ಪುಕಾಡಿನ ಹಾಡು’, “ಮೆರವಣಿಗೆ’, “ನನ್ನ ಜನಗಳು ಮತ್ತು ಇತರ ಕವಿತೆಗಳು’, “ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡವು.
Related Articles
Advertisement
ಸಿದ್ದಲಿಂಗಯ್ಯಅವರು ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದು, ಜಾನಪದ ಸಾಹಿತ್ಯ ಸಂಪಾದಕ ಮಂಡಲಿ, ಅಂಬೇಡ್ಕರ್‌ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನ ಸಮಿತಿ, ರಾಮಮನೋಹರ ಲೋಹಿಯಾ ಅವರ ಕೃತಿಗಳ ಭಾಷಾಂತರ ಮತ್ತು ಸಂಪಾದನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಮಂಡಲಿ ಮುಂತಾದವುಗಳಲ್ಲಿ ಸದಸ್ಯರಾಗಿದ್ದುದರ ಜತೆಗೆ ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿದ್ದರು. ಸಿದ್ದಲಿಂಗಯ್ಯ ಅವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ| ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ| ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.
ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿ 1988-94, 1995-2001 ರ ವರೆಗೆ ಎರಡು ಬಾರಿ ಕಾರ್ಯನಿರ್ವಹಿಸುವುದರ ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ 2006-08 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಿದ್ದಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಉಪನ್ಯಾಸಗಳು ಮತ್ತು ಅವರ ಸರಳ ಸ್ನೇಹ ಗುಣ ಸದಾ ನೆನಪಲ್ಲಿ ಉಳಿಯುವಂತದ್ದು.
ವಿಜಯಕುಮಾರ್‌ಎಚ್. ಕೆ.
ಎ.ಜೆ. ಕಾಲೇಜು ಫಾರ್ಮಸಿ, ಮಂಗಳೂರು