Advertisement
ಅಕ್ಕಲ್‌ಕೋಟೆ ತಾಲೂಕಿನ ಅಂದೇವಾಡಿ ಗ್ರಾಮದ ಗೈಬಿಶಾ ಮಕಾನದಾರ್ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರೂ ಕನ್ನಡ ಜಾನಪದ ಸಾಹಿತ್ಯದ ಭಂಡಾರವೇ ಅವರಲ್ಲಿದೆ. ಇಂಡಿಯ ಸದ್ಗುರು ಮಲ್ಲೇಶ್ವರ ಶಿರ್ಕನಳ್ಳಿ ಅವರಿಂದ 14 ವರ್ಷ ಆಯುರ್ವೇದ ಜೋತಿಷ, ಆಧ್ಯಾತ್ಮಿಕ ಮತ್ತು ಪುರಾಣವನ್ನು ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿರುವ ಅವರು, ಲಕ್ಷಕ್ಕೂ ಹೆಚ್ಚು ಕನ್ನಡ ಮತ್ತು ಮರಾಠಿ ಜಾನಪದ ಹಾಡುಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.
Related Articles
Advertisement
ಗೈಬಿಶಾ ಹಾಡಿನ ಖ್ಯಾತಿ ಹೆಚ್ಚಿಸಿದವರು : ಸುರೇಶ್ ಕುಲಕರ್ಣಿ, ಸೊಮಲಿಂಗ ಬಿಜ್ಜರಗಿ, ಶ್ರೀಕಾಂತ್ ಕಾಜಿಬೆಳಗಿ, ಝಾಕಿರ ಕಾರ್ಕಲ್, ಅಭಿಮನ್ಯು ಖರಾತ್ ಚಿಕ್ಕಲೋಣಿ, ಗೋವಿಂದ್ ಉಡಚಣ ಹಟ್ಟಿ ಡೊಳ್ಳಿನ ಹಾಡು ಹಾಡಿ ಖ್ಯಾತಿ ಪಡೆದಿದ್ದಾರೆ. ಆಕಾಶ ಮನಗುಳಿ, ದೇವೇಂದ್ರ ಧಾರವಾಡ ದಿಕ್ಸಂಗಿ, ಸುನಿಲ್ ನರಸಪ್ಪ ಬಡದಾಳೆ, ಸಂತೋಷ್ ಮುರ್ಗೆಪ್ಪ, ಅಯಸಿದ್ಧ ಐವಾಡೆ, ಸಂತೋಷ್ ನಿವಾಲಖೋಡೆ ಅವರು ಗೈಬಿಶಾ ರಚಿಸಿದ ಭಜನೆ ಗೀತೆಗಳನ್ನು ಹಾಡಿದ್ದಾರೆ. ಆಳಂದದ ಕಾಶಿನಾಥ ಹತ್ತಿಕಾಳೆ, ಲಕ್ಷ್ಮಣ್ ರಾಠೊಡ ಸಬಿನಾಡ, ಸಿದ್ಧಮ್ಮ ಬಿಜಾಪುರ, ರಾಮದುರ್ಗದ ಭೌರಮ್ಮ ಕ್ವಾಟಲಗಿ, ಮಕು¤ಂ ಮಕಂದರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಭಾಗಣ್ಣ ಮದರಿ, ರೇಣುಕಾ ಗಣಿಯಾರ, ಫಕೀರಪ್ಪ ಅಯವಳೆ ಮಂದ್ರುಪ ಅವರು ಗೈಬಿಶಾರು ರಚಿಸಿದ ಹಾಡುಗಳನ್ನು ಹಾಡಿ ಪ್ರಸಿದ್ಧಿ ಪಡೆದಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ : ಲಕ್ಷಾಂತರ ಕನ್ನಡ, ಮರಾಠಿ ಇನ್ನಿತರ ಭಾಷೆಗಳ ಜಾನಪದ ಕವನಗಳನ್ನು ರಚಿಸಿ ಗ್ರಾಮೀಣ ಭಾಗದ ಜಾತ್ರೆಗಳಲ್ಲಿ ಹಾಡುವ ಮೂಲಕ ಜಾನಪದ ಕಲೆಯನ್ನು ಉಳಿಸಿ-ಬೆಳೆಸಲು ಪ್ರಯತ್ನಿಸುತ್ತಿರುವ ಕವಿ ಗೈಬಿಶಾ ಮಕಾನದಾರ್ ಅವರ ನೋವಿನ ಕತೆಯನ್ನು ಕೇಳುವವರಿಲ್ಲದೆ, ಸಂಕಷ್ಟದಿಂದಲೇ ತನ್ನ ಬದುಕಿನ ಗಾಡಿಯನ್ನು ಎಳೆಯುತ್ತಿದ್ದು, ನೋಡುಗರ ಹೃದಯ ಕಲಕುತ್ತಿದೆ. ಪತ್ನಿ ಸುಗ್ರಾಬಾಯಿ, ಮೂವರು ಪುತ್ರರು, ಇಬ್ಬರು ಪುತ್ರಿಯರಿರುವ ಗೈಬಿಶಾ ಕುಟುಂಬ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ನೆರವಿನ ಹಸ್ತದ ನಿರೀಕ್ಷೆಯಲ್ಲಿದೆ. ಗೈಬಿಶಾ ಅವರಿಂದ ಸಾಕಷ್ಟು ಆಧ್ಯಾತ್ಮದ ಜ್ಞಾನ ಗಂಗೆ ಹರಿಯುತ್ತಿದೆ. ತಮ್ಮ ಹಾಡುಗಳ ಮೂಲಕ ಸಮಾಜ ಪರಿವರ್ತನೆಯ ಕಾರ್ಯ ನಿರಂತರವಾಗಿ ಕೈಗೊಂಡಿದ್ದಾರೆ.
ಕವನ, ಹಾಡು ಬರೆಯುವುದು ನನ್ನ ಜೀವನವಾಗಿದೆ. ಜಾಗೃತ ಸಮಾಜ ನಿರ್ಮಿಸುವುದು ನನ್ನ ಕಾಯಕ. ಲಕ್ಷಾಂತರ ಕವನಗಳನ್ನು ರಚಿಸಿದ್ದೇನೆ. ನನ್ನ ಕವನಗಳನ್ನು ಹಾಡಿಯೇ ಹಲವರು ಪ್ರಸಿದ್ಧರಾಗಿದ್ದಾರೆ. ಆದರೆ ನನ್ನ ಜೀವನ ಸುಧಾರಿಸಿಲ್ಲ. ಸ್ವಂತ ಮನೆ, ಜಮೀನು ಇಲ್ಲ. ಕವಿತೆ, ಕವನ ಬರೆದ ಮೇಲೆ ನನ್ನ ಮನೆಯ ಅಡುಗೆ ಒಲೆ ಉರಿಯುತ್ತದೆ. ಗಡಿನಾಡಿನ ಪ್ರತಿಭೆಗಳ ನೆರವಿಗೆ ಸರಕಾರಗಳು ಬರಬೇಕು. -ಗೈಬಿಶಾ ಮಕಾನದಾರ್, ಪ್ರಸಿದ್ಧ ಕವಿಗಳು