Advertisement

ಜನಿಸಿದ ಊರು ಮರೆಯದ ಚೆಂಬೆಳಕಿನ ಕವಿ

06:21 PM Feb 17, 2022 | Team Udayavani |

ಗದಗ: ಕನ್ನಡ ಕಾವ್ಯ ಲೋಕಕ್ಕೆ ಚೆಂಬಳಕಿನ ಕವಿ ಚೆನ್ನವೀರ ಕಣವಿ ಅವರ ಕೊಡುಗೆ ಅಪಾರ. ಸಾರಸ್ವತ ಲೋಕದಲ್ಲಿ ಅವರು ಎಷ್ಟೇ ಎತ್ತರಕ್ಕೇರಿದ್ದರೂ ತಾವು ಜನಿಸಿದ ಊರು ಹಾಗೂ ಬೆಳೆದು ಬಂದ ದಾರಿಯನ್ನು ಕೊನೆವರೆಗೂ ಮರೆತಿರಲಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

Advertisement

ಜೊತೆಗೆ ಅನೇಕ ಯುವ ಹಾಗೂ ಉದಯೋನ್ಮುಖ ಸಾಹಿತಿಗಳ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರೆದು, ಕನ್ನಡ ಸಾಹಿತ್ಯ ಕೃಷಿಗೆ ಬೆಳಕಾಗಿದ್ದರು. ಚೆಂಬಳಕಿನ ಕವಿ ಎಂದೇ ಖ್ಯಾತಿ ಹೊಂದಿದ್ದ ನಾಡೋಜಾ ಡಾ|ಚನ್ನವೀರ ಕಣವಿ ಅವರು ಮೂಲತಃ ಧಾರವಾಡದವರೇ ಆಗಿದ್ದರೂ, ಅವರು ಜನಿಸಿದ್ದು(28-6-1928)ಮಾತ್ರ ಗದಗ ತಾಲೂಕಿನ ಹೊಂಬಳ ಗ್ರಾಮದ ತಾಯಿಯ ತವರು ಮನೆಯಲ್ಲಿ. ಅವರ ತಂದೆ ಇದೇ ತಾಲೂಕಿನ ಶಿರುಂದದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಅವರ ನಿವೃತ್ತಿ ಬಳಿಕ ಅವರ ಕುಟುಂಬ ಧಾರವಾಡ ಸಮೀಪದ ಗರಗ ಗ್ರಾಮಕ್ಕೆ ಸ್ಥಳಾಂತರಗೊಂಡಿತು. ಆ ನಂತರ ಅವರ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಧಾರವಾಡದಲ್ಲೇ ಪೂರೈಸಿದರು. ಆದರೆ, ಅವರ ಜನ್ಮಭೂಮಿ ಗದಗ ಎಂಬುದನ್ನು ಎಂದೂ ಮರೆತಿರಲ್ಲ ಎಂಬುದು ವಿಶೇಷ.

ಗದಗ ನಗರದ ಜ|ತೋಂಟದಾರ್ಯ ಮಠ ಹಾಗೂ ಜ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಪೂಜ್ಯರ ನೇತೃತ್ವದಲ್ಲಿ ಆರಂಭಗೊಂಡಿದ್ದ ಗೋಕಾಕ್‌ ಚಳವಳಿಯಲ್ಲೂ ಕಣವಿ ಅವರು ಜೊತೆ ಜೊತೆಯಾಗಿ ಹೆಜ್ಜೆ ಹಾಕಿ, ಸಕ್ಕರೆಯ ಮಾತುಗಳಿಂದಲೇ ಯುವ ಸಾಹಿತಿಗಳು, ಸಾಮಾಜಿಕ ಚಿಂತಕರು ಹೋರಾಟಕ್ಕೆ ಧುಮುಕುವಂತೆ ಮಾಡಿದ್ದರು ಎಂಬುದನ್ನು ಅನೇಕ ಬಾರಿ ಶಿವಾನುಭವದಲ್ಲಿ ಪೂಜ್ಯರು ಸ್ಮರಿಸುತ್ತಿದ್ದರು ಎನ್ನುತ್ತಾರೆ ಹಿರಿಯ ಸಾಹಿತಿ ಚಂದ್ರಶೇಖರ್‌ ವಸ್ತ್ರದ.

ಕಪ್ಪತ್ತಗುಡ್ಡ ಹೋರಾಟದಲ್ಲೂ ಭಾಗಿ: ನಾಡುಕಂಡ ಶ್ರೇಷ್ಠ ಹಾಗೂ ಸೌಮ್ಯ ಸ್ವಭಾವದ ಕವಿಗಳಾಗಿದ್ದ ಚೆನ್ನವೀರ ಕಣವಿ ಅವರು ತಮ್ಮ ಇಳಿವಯಸ್ಸಿನಲ್ಲೂ ಕಪ್ಪತ್ತಗುಡ್ಡ ಹೋರಾಟಕ್ಕೆ ಸಾಥ್‌ ನೀಡಿದ್ದರು. ಪೋಸ್ಕೋ ಹೋರಾಟದ ಬಳಿಕ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಹಾಗೂ ವನ್ಯಜೀವಿ ಧಾಮವನ್ನಾಗಿ ಘೋಷಿಸಬೇಕೆಂದು ಜ|ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ 2017ರ ಫೆ.13 ರಿಂದ 15ರ ವರೆಗೆ ನಡೆದಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲೂ ಸಾಹಿತಿ ಕಣವಿ ಅವರು ಪಾಲ್ಗೊಂಡಿದ್ದರು. ತಮ್ಮ ಸಾತ್ವಿಕ ನುಡಿಗಳಿಂದಲೇ ರಾಜ್ಯ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದರು ಎಂಬುದು ಇತಿಹಾಸ.

ಮುನ್ನುಡಿ-ಬೆನ್ನುಡಿಯಿಂದ ಬೆಳಕಾದ ಸಾಹಿತಿ: ಆಧುನಿಕ ಕಾವ್ಯ ಪ್ರಪಂಚಕ್ಕೆ ನೂರಾರು ಕವಿತೆಗಳನ್ನು ಕೊಡುಗೆ ನೀಡಿರುವ ನಾಡೋಜ ಚನ್ನವೀರ ಕಣವಿ ಅವರು, ಕನ್ನಡ ಕಾವ್ಯ ಪರಂಪರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತಹ ಮಹಾನ್‌ ಕವಿಯಾಗಿದ್ದರೂ ಸದಾ ಹಸ್ಮನುಖದಿಂದ ಎಲ್ಲರನ್ನೂ ಆಷರ್ಕಸುವ ವ್ಯಕ್ತಿತ್ವ ಹೊಂದಿದ್ದರು. ಯಾವುದೇ ಹಮ್ಮು, ಬಿಮ್ಮು ಇಲ್ಲದೇ ಯುವ ಹಾಗೂ ಉದಯೋನ್ಮುಖ ಸಾಹಿತಿಗಳಿಗೆ ಬೆನ್ನು ತಟ್ಟಿದ್ದಾರೆ.

Advertisement

ಎಷ್ಟೇ ಸಣ್ಣ ಪುಸ್ತಕ, ಅದು ಶಾಲಾ-ಕಾಲೇಜು ವಿದ್ಯಾರ್ಥಿಯಾಗಿದ್ದರೂ, ಹಿರಿ-ಕಿರಿ ಎನ್ನದೇ ಅವರ ಅಪೇಕ್ಷೆಯಂತೆ ಪುಸ್ತಕ್ಕೆ ಮುನ್ನುಡಿ, ಬೆನ್ನುಡಿ ಬರೆದುಕೊಡುತ್ತಿದ್ದರು. ಸಾಹಿತ್ಯ ರಂಗದಲ್ಲಿ ಮಾಡಬೇಕಾದ ಕೃಷಿ, ಹೊಸ ಆಯಾಮಗಳು, ವಿಷಯ ವಸ್ತುಗಳು, ಅಧ್ಯಯನ ಶೈಲಿ, ವಿಷಯವನ್ನು ನೋಡುವ ದೃಷ್ಟಿಕೋನ, ಸಾಹಿತ್ಯದ ಮೂಲಕ ಓದುಗರ ಆಪ್ಯಾಯತೆ ಗಳಿಸುವ ಪರಿಯನ್ನೂ ವಿವರಿಸುವ ಮೂಲಕ ಹೆಚ್ಚೆಚ್ಚು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ
ಪ್ರೇರೇಪಿಸುತ್ತಿದ್ದರು ಎಂದು ಸ್ಮರಿಸುತ್ತಾರೆ ಗದಗಿನ ಹಿರಿಯ ಸಾಹಿತಿ ಆರ್‌.ಎನ್‌.ಕುಲ್ಕರ್ಣಿ.

ಕಣವಿ ಅವರ ಕೊನೆ ಪತ್ರ
ತಮ್ಮ ಜೀವನದುದ್ದಕ್ಕೂ ಹಿರಿ-ಕಿರಿಯರ ಸಾಹಿತ್ಯವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಿದ್ದ ಚೆನ್ನವೀರ ಕಣವಿ ಅವರು, ಕೆಲವೊಮ್ಮೆ ತಮಗೆ ಅಂಚೆ ಮೂಲಕ ಬರುತ್ತಿದ್ದ ಪುಸ್ತಕಗಳನ್ನೂ ಓದಿ ಅದಕ್ಕೆ ಪ್ರತಿಕ್ರಿಯೆಯನ್ನೂ ಸ್ವತಃ ತಾವೇ ಬರೆಯುತ್ತಿದ್ದರು. ಅದರಂತೆ ಗದಗ ನಗರದ ಹಿರಿಯ ಸಾಹಿತಿ ಚಂದ್ರೇಶಖರ್‌ ವಸ್ತ್ರದ ಅವರು “ಅಲ್ಲಮ ಪ್ರಭು’ ಪುಸ್ತಕದ ಬಗ್ಗೆ ಸಮತೋಲನ ವಿಮರ್ಶೆ ಮಾಡಿ, 13-09-2021ರಲ್ಲಿ ಬರೆದ ಈ ಪತ್ರ ಗದಗಿಗೆ ಕೊನೆಯದ್ದು ಎನ್ನಲಾಗಿದೆ.
ಗದಗ: ಚನ್ನವೀರ ಕಣವಿ ಅವರು 2021ರಲ್ಲಿ ನಗರದ ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಅವರಿಗೆ ಬರೆದ ಕೊನೆಯ ಪತ್ರ.

ಕಣವಿಗೆ “ಸಾಹಿತ್ಯ ಶ್ರೀ’ ಪ್ರಶಸ್ತಿ ನಾಡೋಜಾ ಚನ್ನವೀರ ಕಣವಿ ಅವರಿಗೆ ಸರಕಾರ ಹಾಗೂ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಅದರಂತೆ ಗದಗ ನಗರದ ಕಲಾಚೇತನ ಸಂಸ್ಥೆಯಿಂದ 1996ರಲ್ಲಿ ಸಾಹಿತ್ಯ ಶ್ರೀ ಪ್ರಶಸ್ತಿ ಗೌರವ ಸಂದಿದೆ.

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next