Advertisement

ಪಾಡ್‌ ಟ್ಯಾಕ್ಸಿ ಯೋಜನೆ ಮತ್ತಷ್ಟು ವಿಳಂಬ?

12:36 PM Oct 14, 2018 | |

ಬೆಂಗಳೂರು: ಬಹುನಿರೀಕ್ಷಿತ “ಖಾಸಗಿ ಕ್ಷಿಪ್ರ ಸಾರಿಗೆ ವ್ಯವಸ್ಥೆ’ (ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟ್‌ಂ)ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅನುಮೋದನೆ ನೀಡಿದೆ. ಆದರೆ, ಅದರ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುವುದನ್ನು ಮರೆತಿದೆ. ಇದು ಯೋಜನೆ ವಿಳಂಬದಲ್ಲಿ ಪರಿಣಮಿಸಲಿದೆ.

Advertisement

ನಮ್ಮ ಮೆಟ್ರೋ, ಉಪನಗರ ರೈಲು ಸೇರಿದಂತೆ ಮತ್ತಿತರ ಯೋಜನೆಗಳನ್ನು ಸಾಮಾನ್ಯವಾಗಿ ಅನುಮೋದಿಸುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ನಂತರ ಅನುಷ್ಠಾನಕ್ಕೆ ಬರುತ್ತದೆ. ಆದರೆ, “ಪಾಡ್‌ ಟ್ಯಾಕ್ಸಿ’ (ಪಿಆರ್‌ಟಿಎಸ್‌) ಯೋಜನೆ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಅಂದರೆ, ಅಭಿಪ್ರಾಯ ಸಂಗ್ರಹಕ್ಕೂ ಮೊದಲೇ ಅನುಮೋದನೆ ಪಡೆಯಲಾಗಿದೆ.

ಈ ಯೋಜನೆ ಅನುಷ್ಠಾನ ಕಾರ್ಯಸಾಧು ಆಗಲಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಗರ ಭೂಸಾರಿಗೆ ನಿರ್ದೇಶನಾಲಯ, ಸಂಚಾರ ಪೊಲೀಸ್‌, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಭಿಪ್ರಾಯ ಸಂಗ್ರಹ ಅತ್ಯಗತ್ಯ. ಆದರೆ, ಅನುಮೋದನೆ ಪಡೆಯುವ ತರಾತುರಿಯಲ್ಲಿ ಬಿಬಿಎಂಪಿ ಅಭಿಪ್ರಾಯ ಸಂಗ್ರಹಿಸುವ ಗೋಜಿಗೆ ಹೋಗಿಲ್ಲ.

ಹಾಗಂತ ಇದೇನೂ ನಿಯಮ ಉಲ್ಲಂಘನೆ ಅಲ್ಲ. ಆದರೆ, ಇದರಿಂದ ಯೋಜನೆ ಅನುಷ್ಠಾನ ವಿಳಂಬ ಸಾಧ್ಯತೆಯಿದೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈಗ ಈ ಸಂಬಂಧದ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದ್ದು, ಸ್ವತಃ ಸರ್ಕಾರ ಈ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಈಗಾಗಲೇ ತೀರ್ಮಾನಿಸಿದಂತೆ ವೈಟ್‌ಫೀಲ್ಡ್‌-ಟ್ರಿನಿಟಿ ವೃತ್ತದವರೆಗೆ ಮೆಟ್ರೋ ಮಾದರಿಯಲ್ಲಿ ರಸ್ತೆ ಮಧ್ಯೆ ಆರ್‌ಸಿಸಿ ಕಂಬಗಳು ಮತ್ತು ಸ್ಲಾಬ್‌ ಹಾಕಿ, ಅದರ ಮೇಲೆ “ಪಾಡ್‌ ಟ್ಯಾಕ್ಸಿ’ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಉದ್ದೇಶಿತ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ಸಮಸ್ಯೆ ಆಗಲಿದೆಯೇ?

Advertisement

ಟ್ರಿನಿಟಿ ವೃತ್ತಕ್ಕೆ ಬರುವ ಪಾಡ್‌ ಟ್ಯಾಕ್ಸಿಯನ್ನು ಮೆಟ್ರೋಗೆ “ಲಿಂಕ್‌’ ಮಾಡಲು ಸಾಧ್ಯವೇ? ಯಾವೊಂದು ಯೋಜನೆಯನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಜಾರಿಗೊಳಿಸುವಾಗ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಭಿಪ್ರಾಯ ಕಡ್ಡಾಯವಾಗಿದೆ. ಪಾಲಿಕೆ ಇದಾವುದೂ ಗಣನೆಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸರ್ಕಾರ ಆಯಾ ಇಲಾಖೆಗೆ ಪತ್ರ ಬರೆದು ಅಭಿಪ್ರಾಯ ಸಂಗ್ರಹಿಸಲಿದೆ.  

ಸರ್ಕಾರಕ್ಕೆ ಕಳಿಸೋದೇ ಅಭಿಪ್ರಾಯ ಸಂಗ್ರಹಕ್ಕೆ!: ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆದು, ತಿಂಗಳ ಹಿಂದೆಯೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಹೀಗೆ ಸರ್ಕಾರಕ್ಕೆ ಕಳುಹಿಸಿದ ಉದ್ದೇಶವೇ ಯೋಜನೆ ಕಾರ್ಯಸಾಧುವೇ ಎಂಬುದನ್ನು ತಿಳಿಸಲಿಕ್ಕಾಗಿ ಅಲ್ಲವೇ? ಅಷ್ಟಕ್ಕೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದರಿಂದ ಅಭಿಪ್ರಾಯ ಸಂಗ್ರಹ ಕೆಲಸವನ್ನು ಗುತ್ತಿಗೆ ಪಡೆದ ಕಂಪನಿ ಮಾಡಲಿದೆ.

ಹಾಗಾಗಿ, ಇದರಲ್ಲಿ ಬಿಬಿಎಂಪಿ ಪಾತ್ರ ಕೇವಲ ಒಪ್ಪಿಗೆ ನೀಡುವುದಷ್ಟೇ ಆಗಿದೆ ಎಂದು ಯೋಜನೆ ವಿಭಾಗದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡುತ್ತಾರೆ. ನಗರದ ಅತಿಹೆಚ್ಚು ವಾಹನದಟ್ಟಣೆ ಹಾಗೂ ಜನಸಂಖ್ಯೆ ಇರುವ ವೈಟ್‌ಫೀಲ್ಡ್‌ನ ವರ್ತೂರು ಕೋಡಿಯಿಂದ ಟ್ರಿನಿಟಿ ಮೆಟ್ರೋ ನಿಲ್ದಾಣದ ನಡುವೆ 20 ಕಿ.ಮೀ. ಉದ್ದದ ಮಾರ್ಗವನ್ನು ಅಂತಿಮಗೊಳಿಸಲಾಗಿದೆ.

ಇದರಿಂದ ಐಟಿ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಚಾರದಟ್ಟಣೆ ಗೋಳು ತಗ್ಗಲಿದೆ. ಮೆಟ್ರೋದಲ್ಲಿ ಟ್ರಿನಿಟಿ ವೃತ್ತಕ್ಕೆ ಬಂದಿಳಿಯುವ ಉದ್ಯೋಗಿಗಳು, ಪಾಡ್‌ ಟ್ಯಾಕ್ಸಿ ಏರಿ ನೇರವಾಗಿ ಕಂಪನಿಯ ಬಾಗಿಲಲ್ಲೇ ಇಳಿಯಬಹುದು ಎಂಬುದು ಇದರ ಉದ್ದೇಶ. ಬಿಬಿಎಂಪಿ ವರ್ಷಾಂತ್ಯಕ್ಕೆ ಖಾಸಗಿ ಕ್ಷಿಪ್ರ ಸಾರಿಗೆ ವ್ಯವಸ್ಥೆಗೆ ಕಾರ್ಯಾದೇಶ ನೀಡುವ ಗುರಿ ಹೊಂದಿದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಈ ಗುರಿ ಸಾಧನೆ ಕಷ್ಟ ಎನ್ನಲಾಗಿದೆ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next