ಹೊಸದಿಲ್ಲಿ: ಭಾರತದಲ್ಲಿ 2017ರಲ್ಲಿ ಮಕ್ಕಳ ಮೇಲೆ 17,557 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೇಸರದ ಸಂಗತಿಯೆಂದರೆ ಶೇ.57ರಷ್ಟು ಘಟನೆಗಳಲ್ಲಿ ಪೋಕ್ಸೊ ಕಾಯ್ದೆಯಡಿ (ಮಕ್ಕಳ ಮೇಲಿನ ಅತ್ಯಾಚಾರ ತಡೆ ಕಾಯ್ದೆ) ಪ್ರಕರಣ ದಾಖಲಿಸಿಕೊಂಡಿಲ್ಲ. ಈಗಲೂ ಐಪಿಸಿ ವಿಧಿ 376ನ್ನೇ ಬಳಸಿ ಎಫ್ಐಆರ್ ಹಾಕಲಾಗುತ್ತಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯ (ಎನ್‌ಸಿಆರ್‌ಬಿ) ಇತ್ತೀಚೆಗಿನ ವರದಿ ಬಹಿರಂಗಪಡಿಸಿದೆ.
ಕಠಿಣ ಪೋಕ್ಸೊ ಕಾಯ್ದೆ ಜಾರಿ ಮಾಡದಿರುವುದಕ್ಕೆ, ಪೊಲೀಸರಿಗಿರುವ ಅಜ್ಞಾನವೇ ಕಾರಣವಾಗಿರಬಹುದು ಅಥವಾ ಅವರ ನಿರಾಸಕ್ತಿ ಕಾರಣವಾಗಿರಬಹುದು ಎಂದು ಮಕ್ಕಳ ಹಕ್ಕುಗಳಿಗಾಗಿ ಹೋರಾಡು ತ್ತಿರುವ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಕೆಎಸ್‌ಸಿಎಫ್ ಆರೋಪಿಸಿದೆ.
ಅಂಕಿ ಅಂಶಗಳು ಹೇಗಿವೆ?: 2017ರಲ್ಲಿ 17,557 ಪ್ರಕರಣ ದಾಖಲಾಗಿವೆ. ಇದರಲ್ಲಿ 10,000ಕ್ಕಿಂತ ಹೆಚ್ಚು ಪ್ರಕರಣಗಳನ್ನು ಪೋಕ್ಸೊ ವ್ಯಾಪ್ತಿಗೆ ತಂದಿಲ್ಲ. 7,498 ಪ್ರಕರಣಗಳು ಮಾತ್ರ ಪೋಕ್ಸೊ ಅಡಿ ದಾಖಲಾಗಿದೆ. ಆದರೆ 2014ಕ್ಕೆ ಹೋಲಿಸಿದರೆ ಪರಿಸ್ಥಿತಿ ಬಹಳ ಸುಧಾರಣೆಯಾಗಿದೆ. 2014ರಲ್ಲಿ ಶೇ.74ರಷ್ಟು ಪ್ರಕರಣಗಳು ಪೋಕ್ಸೊ ವ್ಯಾಪ್ತಿಗೆ ಬಂದಿರಲಿಲ್ಲ 2015ರಲ್ಲಿ ಈ ಪ್ರಮಾಣ ಶೇ.55ಕ್ಕಿಳಿಯಿತು. ಆದರೆ ಇದು 2017ರಲ್ಲಿ ಅಲ್ಪ ಏರಿಕೆ ಕಂಡಿರುವುದು ತುಸು ಆತಂಕಕ್ಕೆ ಕಾರಣವಾಗಿದೆ.
ಪೋಕ್ಸೊದಿಂದ ಲಾಭವೇನು?: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆಂದೇ 2012ರಲ್ಲಿ ಇದನ್ನು ಜಾರಿ ಮಾಡಲಾಯಿತು. ಈ ಪ್ರಕರಣ ದಾಖಲಾದ ತಕ್ಷಣ, ವಿಶೇಷ ನ್ಯಾಯಾಲಯ ಅದನ್ನು ತ್ವರಿತ ವಿಚಾರಣೆ ನಡೆಸಿ, ಕಠಿಣ ಶಿಕ್ಷೆ ನೀಡುತ್ತದೆ. ಈ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳದೇ ಹೋದರೆ, ಅಪರಾಧಿ ದೋಷಮುಕ್ತರಾಗುವ ಸಾಧ್ಯತೆಯೇ ಹೆಚ್ಚು.