Advertisement

Pocso ಪ್ರಕರಣ: ಆರೋಪಿಗೆ ಸಹಜ ಜೀವಮಾನ ಪೂರ್ತಿ ಜೈಲುಶಿಕ್ಷೆ ವಿಧಿಸಿ ಆದೇಶ

08:49 PM Aug 08, 2024 | Team Udayavani |

ಉಡುಪಿ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ತನ್ನ ಸಹಜ ಜೀವಮಾನಪೂರ್ತಿ ಜೈಲುಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ಗುರುವಾರ(ಆ.8) ಆದೇಶಿಸಿದೆ.

Advertisement

ಆರೋಪಿಗೆ ಒಟ್ಟು 20 ಸಾವಿರ ರೂ.ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಸರಕಾರದಿಂದ  3 ಲ.ರೂ.ಪರಿಹಾರ ನೀಡುವಂತೆ ಆದೇಶಿಸಿದೆ. ಪಡುಬಿದ್ರಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಬಂದಿದ್ದ ಕೂಲಿಕಾರ್ಮಿಕ ಬಂಗಾಳ ಮೂಲದ ಆರೋಪಿ ಮುಫಿಜುಲ್‌ ಎಸ್‌.ಕೆ.(23) ಶಿಕ್ಷೆಗೆ ಗುರಿಯಾದ ಆರೋಪಿ.

ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬಂಗಾಳ ಮೂಲದ ಕೂಲಿ ಕಾರ್ಮಿಕರು ಬಂದಿದ್ದರು. ಅದರಂತೆ ನೊಂದ ಬಾಲಕಿ(5ವರ್ಷ) ತನ್ನ ತಂದೆ, ತಾಯಿಯೊಂದಿಗೆ ಬಂದಿದ್ದಾಳೆ. ಕಟ್ಟಡದ 3ನೇ ಮಹಡಿಯ ಕೋಣೆಯಲ್ಲಿ ಕಾರ್ಮಿಕರು ವಾಸಮಾಡಿಕೊಂಡಿದ್ದು, ಆರೋಪಿ ಕೂಡ ಅಲ್ಲಿಯೇ ವಾಸಿಸಿಕೊಂಡಿದ್ದ. ಆತ ನೊಂದ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಈ ವೇಳೆ ಬಾಲಕಿ ಅಳಲು ಪ್ರಾರಂಭಿಸಿದಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದ. ಈ ವಿಚಾರವನ್ನು ಆಕೆ ತನ್ನ ಪೋಷಕರಿಗೆ ತಿಳಿಸಿದ ಮೇರೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ನೀಡಲಾಗಿದೆ.

ಅದರಂತೆ ತನಿಖೆ ಕೈಗೊಂಡ ಅಂದಿನ ಪೊಲೀಸ್‌ ವೃತ್ತ ನಿರೀಕ್ಷಕ ಪೂವಯ್ಯ ಕೆ.ಸಿ.ಅವರು ಆರೋಪಿಯ ವಿರುದ್ಧ ದೋಷಾರೋಣೆ ಸಲ್ಲಿಸಿದ್ದರು. ಒಟ್ಟು 30 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ಮಾಡಲಾಗಿತ್ತು. ನೊಂದ ಬಾಲಕಿಯು ಕೇವಲ ಬಂಗಾಳಿ ಭಾಷೆ ಮಾತ್ರ ತಿಳಿದಿದ್ದ ಕಾರಣ ಆ ಬಗ್ಗೆ ಅಭಿಯೋಜನೆ ಪರ ಸಾಕ್ಷಿ ಹೇಳಲು ಮಣಿಪಾಲ ಸೆಂಟರ್‌ ಫಾರ್‌ ಯುರೋಪಿಯನ್‌ ಸ್ಟಡೀಸ್‌ ಮಾಹೆಯ ಅಸಿಸ್ಟೆಂಟ್‌ ಪ್ರೊಫೆಸರ್‌ ರಿಚಾಗುಪ್ತ ಅವರು ಭಾಷಾಂತರಕಾರರಾಗಿ ವಿಚಾರಣೆ ವೇಳೆ ಸಹಕರಿಸಿದ್ದರು.

ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯ ಮತ್ತು ತನಿಖಾಧಿಕಾರಿಯು ತನಿಖೆ ಸಂದರ್ಭದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳಲ್ಲಿ ಕಂಡುಬಂದ ಸಾಕ್ಷಿಗಳ ತಜ್ಞರ ಅಭಿಪ್ರಾಯ, ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಆರೋಪಿಯು ತಪ್ಪಿತಸ್ಥ ಎಂದು ಮನಗೊಂಡು ಶಿಕ್ಷೆಯನ್ನು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next