Advertisement
ಕೋವಿಡ್ 19 ಲಸಿಕಾ ಅಭಿಯಾನ ಮುಂದುವರಿಯುವಂತೆಯೇ ಆರೋಗ್ಯ ಇಲಾಖೆ ನ್ಯೂಮೋಕಾಕಲ್ ಕಾಜುಗೇಟ್ ಲಸಿಕಾ (PCV) ಅಭಿಯಾನಕ್ಕೆ ಸಜ್ಜಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಎಲ್ಲ ಮಕ್ಕಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಸ್ಟ್ರೆಪ್ಟೊಕಾಕಸ್ ನ್ಯೂಮೋನಿಯೆ ಎಂಬ ಬ್ಯಾಕ್ಟೀರಿಯಾದಿಂದ ನ್ಯೂಮೋಕಾಕಲ್ ಸೋಂಕು ಮಕ್ಕಳಿಗೆ ತಗಲಿ ದೇಹದ ಬೇರೆ ಭಾಗಗಳಿಗೆ ಹರಡಿ ಲಕ್ಷಣಗಳು ತೀವ್ರಗೊಂಡು ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಬಹುದು.
Related Articles
Advertisement
ಲಸಿಕೆ ನೀಡುವ ವಿಧಾನ: ಒಂದೂವರೆ, ಮೂರೂವರೆ ಹಾಗೂ 9 ತಿಂಗಳ ಮಗುವಿಗೆ ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕೇಂದ್ರಗಳಲ್ಲಿ ಅದೇ ಸಮಯದಲ್ಲಿ ನೀಡುವ ಇತರ ಲಸಿಕೆಗಳೊಂದಿಗೆ ನೀಡಲಾಗುವುದು. ಪ್ರಸ್ತುತ ಒಂದೂವರೆ ತಿಂಗಳು ಆಗಿರುವ ಮಗು ಮೂರು ಡೋಸ್ ಲಸಿಕೆ ಪಡೆದುಕೊಳ್ಳವುದು ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರಸ್ತುತ ಪಿಸಿವಿ -10 ಹಾಗೂ ಪಿಸಿವಿ-13 ಎಂಬ ಎರಡು ತರಹದ ಲಸಿಕೆಗಳು ಲಭ್ಯವಿವೆ. ಈ ಲಸಿಕೆಗಳು ಬಹು ಡೋಸ್‌ನ ವಯಲ್‌ಗಳಲ್ಲಿ ಲಭ್ಯವಿದ್ದು ಲಸಿಕೆ ಸತ್ವ ಸೂಚಿಸುವ VVM ಸ್ಟಿಕ್ಕರ್‌ಗಳನ್ನು ಹೊಂದಿವೆ. ಲಸಿಕೆಯನ್ನು ಮಗುವಿನ ಬಲ ತೊಡೆಯ ಮಧ್ಯಭಾಗದ ಸ್ನಾಯುಗಳಿಗೆ 0.5 ml ನೀಡಲಾಗುತ್ತದೆ (IM) ಈ ಲಸಿಕೆಯನ್ನು ಮಕ್ಕಳಿಗೆ ಕೊಡುವ ಇತರ ಲಸಿಕೆಗಳೊಂದಿಗೆ ತೆಗೆದುಕೊಳ್ಳುವುದು ಸುರಕ್ಷಿತವಾಗಿದೆ. ಲಸಿಕೆಯು ದುಬಾರಿಯಾದ್ದರಿಂದ ಇದುವರೆಗೆ ಆಸ್ಪತ್ರೆಗಳಲ್ಲಿ ಖರೀದಿಗೆ ಮಾತ್ರ ಲಭ್ಯವಾಗಿತ್ತು.
ಲಸಿಕೆ ಶೇಖರಣೆ: ಸಾಮಾನ್ಯವಾಗಿ ಸಾರ್ವತಿಕ ಲಸಿಕಾಕರಣಗಳಲ್ಲಿ ಬಳಸುವ ಎಲ್ಲ ಲಸಿಕೆಗಳು ಹಾಗೂ ಕೋವಿಡ್ ಮತ್ತು ಪಿಸಿವಿ ಲಸಿಕೆಗಳನ್ನು 2 ರಿಂದ 8 ಡಿಗ್ರಿ ಉಷ್ಣತೆಯಲ್ಲಿ ಲಸಿಕೆ ತಯಾರಾದ ಸಮಯದಿಂದ ಫಲಾನುಭವಿಗಳಿಗೆ ನೀಡುವವರೆಗೆ ಸಂರಕ್ಷಿಸಿಡಬೇಕಾಗುತ್ತದೆ. ಈ ಎಲ್ಲ ಲಸಿಕೆಗಳನ್ನು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಶೇಖರಿಸಿಡುವಂತೆ Ice Lined Refrigerator ( ILR) ನಲ್ಲಿ ಸಂಗ್ರಹಿಸಿಡುವುದು ಸೂಕ್ತ. ಯಾವುದೇ ಕ್ಲಿನಿಕ್, ನರ್ಸಿಂಗ್ ಹೋಮ್ ಆಸ್ಪತ್ರೆಗಳಲ್ಲಿ ILR ಲಭ್ಯವಿಲ್ಲದಿದ್ದರೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಇರುವ ಗೃಹ ಬಳಕೆಯ ರೆಫ್ರಿಜರೇಟರ್‌ಗಳಲ್ಲಿ ಕೇವಲ ಲಸಿಕೆ ಹಾಗೂ ಲಸಿಕೆಗೆ ಸಂಬಂಧಿಸಿದ ಪರಿಕರಗಳನ್ನು ಮಾತ್ರ ಶೇಖರಿಸಿಡಬೇಕಾಗುತ್ತದೆ. ಇತರ ಔಷಧಗಳು, ಚುಚ್ಚುಮದ್ದುಗಳನ್ನು ಸಹ ಅದೇ ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟರೆ ಪ್ರತೀ ದಿನ ಪದೇಪದೆ ಅವುಗಳಿಗಾಗಿ ಅದರ ಬಾಗಿಲು ತೆರೆಯಬೇಕಾಗುವುದರಿಂದ ರೆಫ್ರಿಜರೇಟರ್‌ನೊಳಗಿನ ಉಷ್ಣಾಂಶವನ್ನು 2 ರಿಂದ 8 ಡಿಗ್ರಿವರೆಗಿನ ಉಷ್ಣತೆಯಲ್ಲಿ ಸಂಗ್ರಹಿಸಿಡಲು ಸಾಧ್ಯವಾಗದಿದ್ದಲ್ಲಿ ಲಸಿಕೆಗಳು ಸತ್ವಹೀನವಾಗಬಹುದು. ಲಸಿಕೀಕರಣದಲ್ಲಿ ಲಸಿಕೆಯ ಸತ್ವ ಕಾಪಾಡಲು ಶೀತಲ ವ್ಯವಸ್ಥೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ನಿಗದಿತ ಸಮಯದಲ್ಲಿ ನಿಗದಿತ ವಿಧಾನದಲ್ಲಿ ಸರಿಯಾದ ತಾಂತ್ರಿಕತೆ ಬಳಸಿ, ಸರಿಯಾದ ಡೋಸ್ ಬಳಸಿ ಲಸಿಕೆ ನೀಡಿದರೆ ಅವು ಪರಿಣಾಮಕಾರಿಯಾಗುತ್ತದೆ ಹಾಗೂ ಅದನ್ನು ಸಂಬಂಧಪಟ್ಟ ವೈದ್ಯರು ಆಗಿಂದಾಗ್ಗೆ ಪರಾಮರ್ಶೆ ಮಾಡುತ್ತಿದ್ದರೆ ಆ ಲಸಿಕಾಕರಣವು ಯಶಸ್ವಿಯಾಗುತ್ತದೆ.
– ಡಾ| ಅಶ್ವಿನಿ ಕುಮಾರ್ ಗೋಪಾಡಿ