ಹೊಸದಿಲ್ಲಿ: ದೇಶೀಯ ಬ್ಯಾಂಕಿಂಗ್ ಕ್ಷೇತ್ರವನ್ನು ತಲ್ಲಣಗೊಳಿಸಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಐ ಮೂವರನ್ನು ಬಂಧಿಸಿದೆ. ದಕ್ಷಿಣ ಕನ್ನಡದ ಮೂಲ್ಕಿ ಮೂಲದವರಾದ, ಪಿಎನ್‌ಬಿಯ ಮಾಜಿ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ, ಪಿಎನ್‌ಬಿಯ ಸಿಂಗಲ್ ವಿಂಡೋ ಆಪರೇಟರ್ ಮನೋಜ್ ಖಾರಟ್ ಹಾಗೂ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯವರ ಕಂಪೆನಿಗಳ ಅಧಿಕೃತ ಸಹಿದಾರ ಹೇಮಂತ್ ಭಟ್ ಬಂಧಿತರು. ಬಂಧಿತರನ್ನು ಮುಂಬಯಿಯ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಈ ಮೂವರನ್ನು ಮಾ. 3ರ ವರೆಗೆ ಸಿಬಿಐ ವಶಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇವರಲ್ಲಿ ಗೋಕುಲನಾಥ್ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರು. ಶೆಟ್ಟಿ ಹಾಗೂ ಮನೋಜ್ ಖಾರಟ್ ಅವರ ಹೆಸರುಗಳನ್ನು ಸಿಬಿಐ ತನ್ನ ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿದ್ದು, ಮತ್ತೂಬ್ಬ ಆರೋಪಿ ಹೇಮಂತ್ ಭಟ್, 2014ರ ನವೆಂಬರ್‌ನಿಂದ 2017ರ ಡಿಸೆಂಬರ್‌ವರೆಗೆ ಸಿಂಗಲ್ ವಿಂಡೋ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದರೆಂದು ಇದೇ ಎಫ್ಐಆರ್‌ನಲ್ಲಿ ಸಿಬಿಐ ಹೇಳಿದೆ.
ಮತ್ತೂಂದು ಎಫ್ಐಆರ್: ಏತನ್ಮಧ್ಯೆ, 11,400 ಕೋಟಿ ರೂ. ಮೊತ್ತದ ಪಿಎನ್‌ಬಿ ಹಗರಣದಲ್ಲಿ, 143 ಎಲ್‌ಒಯು (ಪಿಎನ್‌ಬಿ ಬ್ಯಾಂಕಿನ ಅಧಿಕೃತ ಖಾತ್ರಿ ಪತ್ರ) ಬಳಸಿ ಪ್ರಕ ರಣದ ಮತ್ತೂಬ್ಬ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜ್ಯುವೆಲರ್ಸ್, ನಕ್ಷತ್ರ ಡೈಮಂಡ್ಸ್ ಹಾಗೂ ಗಿಲಿ ವಜ್ರಾಭರಣ ಕಂಪೆನಿಗಳಿಗೆ 4,886 ಕೋಟಿ ರೂ.ಗಳನ್ನು ಅಕ್ರಮವಾಗಿ ನೀಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.
ಸಿವಿಸಿಯಿಂದಲೂ ತನಿಖೆ: ಈಗಾಗಲೇ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಸೆಬಿ ತನಿಖೆ ಆರಂಭಿಸಿದ್ದು, ಈಗ, ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸಹ ತನಿಖೆಗೆ ಕೈ ಹಾಕಿದೆ. ಜಾರಿ ನಿರ್ದೇಶನಾಲಯದ ದಾಳಿ ಮುಂದುವರಿದಿದ್ದು, ಶನಿವಾರ 25 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಿದೆ.
ಬಂಧಿತರಲ್ಲಿ ಕರ್ನಾಟಕ ಮೂಲದ ಮಾಜಿ ಬ್ಯಾಂಕ್ ಅಧಿಕಾರಿ
ಪಿಎನ್‌ಬಿ ಬ್ಯಾಂಕ್ ಉದ್ಯೋಗಿ, ನೀರವ್‌ನ ಅಧಿಕೃತ ಸಹಿದಾರ ಕೂಡ ವಶಕ್ಕೆ
ಮಾ.3ರ ವರೆಗೆ ಆರೋಪಿಗಳನ್ನು ಸಿಬಿಐ ವಶಕ್ಕೊಪ್ಪಿಸಿದ ನ್ಯಾಯಾಲಯ