ಹೊಸದಿಲ್ಲಿ : ಬಿಲಿಯಾಧಿಪತಿ ಜ್ಯುವೆಲ್ಲರ್ ನೀರವ್ ಮೋದಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 280 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂಬ ಬಗ್ಗೆ ಹಣ ಅಕ್ರಮ ಕೇಸು ದಾಖಲಾದ ಮರುದಿನವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂಬಯಿಯಲ್ಲಿನ ನೀರವ್ ಮೋದಿ ಅವರ ನಿವಾಸ ಮತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಪಿಎನ್‌ಬಿ ವಿರುದ್ಧ ವಂಚನೆ ನಡೆಸಿದ ಆರೋಪದ ಮೇಲೆ 46ರ ಹರೆಯದ ನೀರವ್ ಮೋದಿ ವಿರುದ್ದ ಸಿಬಿಐ ವಂಚನೆ ಕೇಸನ್ನು ದಾಖಲಿಸಿದೆ. ನೀರವ್ ಮೋದಿ, ಅವರ ಸಹೋದರ, ಪತ್ನಿ ಮತ್ತು ಚೋಕ್ಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿಕೊಂಡು ವಂಚನೆ ಎಸಗಿದ್ದು ಪಿಎನ್‌ಬಿ ಗೆ ನಷ್ಟ ಉಂಟುಮಾಡಿದ್ದಾರೆ ಎಂದು ಸಿಬಿಐ ತನ್ನವರದಿಯಲ್ಲಿ ಹೇಳಿದೆ.
ನೀರವ್ ಮೋದಿ ಅವರ ಪತ್ನಿಅಮಿ, ಸಹೋದರ ನಿಶ್ಚಿಲ್ ಮತ್ತು ಮೆಹುಲ್ ಚೋಕ್ಸಿ ಅವರು ಡೈಮಂಡ್ಸ್ ಆರ್ ಯುಎಸ್, ಸೋಲಾರ್ ಎಕ್ಸಪೋರ್ಟ್ ಮತ್ತು ಸ್ಟೆಲ್ಲಾರ್ ಡಮೈಂಡ್ಸ್ ಕಂಪೆನಿಯ ಪಾಲುದಾರರಾಗಿದ್ದಾರೆ. ಈ ಕಂಪೆನಿಗಳಿಗೆ ಹಾಂಕಾಂಗ್ , ದುಬೈ ಮತ್ತು ನ್ಯೂಯಾರ್ಕ್‌ನಲ್ಲಿ ಮಳಿಗೆಗಳಿವೆ ಂದು ಸಿಬಿಐ ವರದಿ ತಿಳಿಸಿದೆ.
ಸರಕಾರಿ ಒಡೆತನದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಇಂದು ಬುಧವಾರ ಮುಂಬಯಿಯಲ್ಲಿನ ತನ್ನ ಕೆಲವು ಶಾಖೆಗಳಲ್ಲಿ 1.77 ಶತಕೋಟಿ ಡಾಲರ್‌ಗಳ ವಂಚನೆ ಮತ್ತು ಅನಧಿಕೃತ ವಹಿವಾಟು ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ನಿನ್ನೆ ಹೇಳಿತ್ತು.
ಆಯ್ದ ಕೆಲವು ಖಾತೆದಾರರ ಲಾಭಕ್ಕಾಗಿ ಮತ್ತು ಅವರಿಗೆ ಗೊತ್ತಿರುವ ರೀತಿಯಲ್ಲೇ ಈ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ನಡೆದಿದ್ದು ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ವಿದೇಶದಲ್ಲಿನ ಆ ಗ್ರಾಹಕರಿಗೆ ಬೃಹತ್ ಮೊತ್ತದ ಸಾಲ ನೀಡಿರುವುದು ಕಂಡು ಬಂದಿದೆ; ಈ ವಿಷಯವನ್ನು ತಾನು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದೇನೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿದೆ.